‘ಕಾಂತಾರ ಚಾಪ್ಟರ್ 1’ ವೀಕ್ಷಣೆ ವೇಳೆ ದೈವ ಅನುಕರಣೆ ಮಾಡಿದರೆ ಕಾನೂನು ಕ್ರಮ

Fryrdyydy

ಬೆಂಗಳೂರು, ಅಕ್ಟೋಬರ್ 07, 2025: ದೇಶಾದ್ಯಂತ ಭರ್ಜರಿ ಯಶಸ್ಸು ಕಂಡಿರುವ ಕಾಂತಾರ ಚಾಪ್ಟರ್ 1 ಚಲನಚಿತ್ರಕ್ಕೆ ಸಂಬಂಧಿಸಿದಂತೆ ಚಿತ್ರಮಂದಿರಗಳಲ್ಲಿ ಕೆಲವು ಪ್ರೇಕ್ಷಕರ ಅತಿರೇಕದ ವರ್ತನೆಯ ಬಗ್ಗೆ ಚಿತ್ರತಂಡ ಗಂಭೀರ ಎಚ್ಚರಿಕೆ ನೀಡಿದೆ. ಚಿತ್ರದಲ್ಲಿ ಚಿತ್ರಿಸಲಾದ ದೈವದ ವೇಷ ಅಥವಾ ದೈವ ಆವಾಹನೆಯ ದೃಶ್ಯಗಳನ್ನು ಅನುಕರಿಸಿ ಕೆಲವರು ಅನುಚಿತವಾಗಿ ವರ್ತಿಸಿರುವ ಘಟನೆಗಳು ಚಿತ್ರತಂಡದ ಗಮನಕ್ಕೆ ಬಂದಿವೆ. ಇಂತಹ ಕೃತ್ಯಗಳನ್ನು ‘ನಂಬಿಕೆಗೆ ಅಪಚಾರ’ ಎಂದು ಖಂಡಿಸಿರುವ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ, ಇದು ಕಾನೂನುಬಾಹಿರ ಕೃತ್ಯವೂ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರತಂಡದಿಂದ ಸಾಮಾಜಿಕ ಜಾಲತಾಣದಲ್ಲಿ ಮನವಿ

ಇಂತಹ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕಾಂತಾರ ಚಿತ್ರತಂಡವು ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ಹೇಳಿಕೆಯೊಂದಿಗೆ ಪ್ರೇಕ್ಷಕರಿಗೆ ಮನವಿ ಮಾಡಿದೆ. ‘ಪ್ರೇಕ್ಷಕರೇ… ದೈವ ಆವಾಹನೆಯ ಅನುಕರಣೆಯನ್ನು ತೊರೆಯಿರಿ’ ಎಂಬ ಶೀರ್ಷಿಕೆಯಡಿ ಪ್ರಕಟಿತ ಈ ಮನವಿಯಲ್ಲಿ, ದೈವಾರಾಧನೆಯು ತುಳುನಾಡಿನ ಆಧ್ಯಾತ್ಮಿಕ ನಂಬಿಕೆಯ ಪ್ರತೀಕ ಎಂದು  ಹೇಳಲಾಗಿದೆ.

ಕಾಂತಾರ ಚಿತ್ರದಲ್ಲಿ ದೈವಾರಾಧನೆಯ ಭಕ್ತಿಪೂರ್ವಕ ಕಥೆಯನ್ನು ಗೌರವದಿಂದ ಚಿತ್ರಿಸಲಾಗಿದೆ. ಆದರೆ, ಕೆಲವರು ಚಿತ್ರದ ದೃಶ್ಯಗಳನ್ನು ಅನುಕರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತಿಸುತ್ತಿರುವುದು ನಂಬಿಕೆಗೆ ಧಕ್ಕೆ ತರುವ ಕೃತ್ಯವಾಗಿದೆ’ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

ಕಾನೂನು ಕ್ರಮದ ಖಡಕ್ ಎಚ್ಚರಿಕೆ

ಬೆಂಗಳೂರು ತುಳುಕೂಟದಂತಹ ಸಾಮಾಜಿಕ ಸಂಘಟನೆಗಳು ಈ ವಿಷಯದಲ್ಲಿ ಚಿತ್ರತಂಡಕ್ಕೆ ಮನವಿ ಸಲ್ಲಿಸಿದ್ದವು. ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಹೊಂಬಾಳೆ ಫಿಲ್ಮ್ಸ್ ತಕ್ಷಣ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. ‘ಇನ್ನು ಮುಂದೆ ಚಿತ್ರಮಂದಿರಗಳು, ಸಾರ್ವಜನಿಕ ಸ್ಥಳಗಳು ಅಥವಾ ಸಮಾರಂಭಗಳಲ್ಲಿ ದೈವದ ಅನುಕರಣೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಚಿತ್ರತಂಡ ಘೋಷಿಸಿದೆ.

ಕಾಂತಾರ ಚಾಪ್ಟರ್ 1 ಚಿತ್ರವು ತುಳುನಾಡಿನ ದೈವಾರಾಧನೆಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಭಕ್ತಿಪೂರ್ವಕವಾಗಿ ಚಿತ್ರಿಸಿದೆ. ಚಿತ್ರದ ದೃಶ್ಯಗಳು ದೈವದ ಶಕ್ತಿಯನ್ನು ಗೌರವದಿಂದ ತೋರಿಸಿದ್ದು, ಇದು ತುಳುವರ ಸಾಂಸ್ಕೃತಿಕ ಅಸ್ಮಿತೆಯನ್ನು ಪ್ರತಿಬಿಂಬಿಸುತ್ತದೆ. ಆದರೆ, ಕೆಲವು ಪ್ರೇಕ್ಷಕರ ಅತಿರೇಕದ ವರ್ತನೆಯಿಂದ ಈ ನಂಬಿಕೆಯ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಚಿತ್ರತಂಡವು ಪ್ರೇಕ್ಷಕರಿಗೆ ಕಲೆ ಮತ್ತು ನಂಬಿಕೆಯ ನಡುವಿನ ಸೂಕ್ಷ್ಮ ಗೆರೆಯನ್ನು ಅರಿತುಕೊಂಡು ಚಿತ್ರದ ಆಶಯಕ್ಕೆ ಗೌರವ ನೀಡುವಂತೆ ಕೋರಿದೆ.

ವೈರಲ್ ವಿಡಿಯೋ

ಈ ಮಧ್ಯೆ, ಕಾಂತಾರ ಚಿತ್ರದ ದೈವದ ದೃಶ್ಯವನ್ನು ಟಿವಿಯಲ್ಲಿ ನೋಡುತ್ತಿದ್ದ ಬಾಲಕನೊಬ್ಬ ದೈವದ ರೀತಿಯಲ್ಲಿ ಜೋರಾಗಿ ಕೂಗಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೇಳೆ ಬಾಲಕನ ತಾಯಿ, ಮಗನಿಗೆ ಏನಾಯಿತು ಎಂದು ಆತಂಕಗೊಂಡು ಓಡಿಬಂದು, ಚಿತ್ರದ ಅನುಕರಣೆಯೇ ಕಾರಣ ಎಂದು ತಿಳಿದು ಬಾಲಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

Exit mobile version