ಬೆಂಗಳೂರು: ಕನ್ನಡ ಕಿರುತೆರೆಯ ಪ್ರತಿಭಾವಂತ ನಟಿ ರಶ್ಮಿ ಲೀಲಾ (ರಶ್ಮಿ ಸಾರಕ್ಕಿ ಮಂಜು) ಅವರು ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ಕಳೆದ ಏಳು ವರ್ಷಗಳಿಂದ ಅಸಾಧ್ಯವಾದ ಕಾಯಿಲೆಯೊಂದಿಗೆ ಸೆಣಸಾಡುತ್ತಿದ್ದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
7 ವರ್ಷಗಳ ಸುದೀರ್ಘ ಹೋರಾಟ: ಏನಾಗಿತ್ತು ರಶ್ಮಿಗೆ?
ರಶ್ಮಿ ಲೀಲಾ ಅವರದ್ದು ಸಾಮಾನ್ಯ ಸಾವಲ್ಲ, ಅದು ನೋವಿನ ನಡುವಿನ ಸುದೀರ್ಘ ಯುದ್ಧ. ಸುಮಾರು 6-7 ವರ್ಷಗಳ ಹಿಂದೆ ರಶ್ಮಿ ಅವರಿಗೆ Rheumatoid Arthritis (ಆಮವಾತ) ಎಂಬ ಕಠಿಣ ಕಾಯಿಲೆ ಕಾಣಿಸಿಕೊಂಡಿತ್ತು. ಇದು ಕೇವಲ ಕೀಲು ನೋವಿಗೆ ಸೀಮಿತವಾಗದೆ, ಅದರ ಅಡ್ಡಪರಿಣಾಮಗಳು (Side Effects) ಅವರ ಶ್ವಾಸಕೋಶದ ಮೇಲೆ ಭೀಕರವಾಗಿ ಬೀರಿತ್ತು. ಇದರ ಪರಿಣಾಮವಾಗಿ ಅವರು ‘ಪಲ್ಮನರಿ ಫೈಬ್ರೋಸಿಸ್’ (Pulmonary Fibrosis) ಎಂಬ ಗಂಭೀರ ಕಾಯಿಲೆಗೆ ತುತ್ತಾಗಿದ್ದರು.
ಈ ಕಾಯಿಲೆಯಲ್ಲಿ ಶ್ವಾಸಕೋಶದ ಅಂಗಾಂಶಗಳು ಗಾಯಗೊಂಡು ಗಟ್ಟಿಯಾಗುತ್ತವೆ, ಇದರಿಂದ ಆಮ್ಲಜನಕವನ್ನು ಹೀರಿಕೊಳ್ಳುವ ಶಕ್ತಿ ಶ್ವಾಸಕೋಶಕ್ಕೆ ಇರುವುದಿಲ್ಲ. ಕಳೆದ ಒಂದು ವರ್ಷದಿಂದ ರಶ್ಮಿ ಅವರು ಆಕ್ಸಿಜನ್ ಸಿಲಿಂಡರ್ ಸಹಾಯವಿಲ್ಲದೆ ಒಂದು ಕ್ಷಣವೂ ಉಸಿರಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು.
ಲಂಗ್ ಟ್ರಾನ್ಸ್‌ಪ್ಲಾಂಟ್ ಆದರೂ ಫಲ ನೀಡದ ಚಿಕಿತ್ಸೆ
ಔಷಧಿಯಿಂದ ಗುಣಪಡಿಸಲು ಸಾಧ್ಯವಿಲ್ಲದ ಕಾರಣ ವೈದ್ಯರು ಶ್ವಾಸಕೋಶ ಕಸಿ (Lung Transplant) ಮಾಡಲು ಸೂಚಿಸಿದ್ದರು. ಈ ಚಿಕಿತ್ಸೆಯ ದಾರಿ ಹಿಡಿದಿದ್ದ ರಶ್ಮಿ ಅವರಿಗೆ ಕಳೆದ ಫೆಬ್ರವರಿಯಲ್ಲಿ ಶಸ್ತ್ರಚಿಕಿತ್ಸೆ ಕೂಡ ನಡೆದಿತ್ತು. ಆದರೆ, ಇಷ್ಟೆಲ್ಲಾ ಮುನ್ನೆಚ್ಚರಿಕೆ ಮತ್ತು ಆಧುನಿಕ ಚಿಕಿತ್ಸೆಗಳ ನಡುವೆಯೂ ಅವರ ದೇಹ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸಲಿಲ್ಲ. ಸೋಮವಾರ ಬೆಳಿಗ್ಗೆ ಅವರ ಸ್ಥಿತಿ ಚಿಂತಾಜನಕವಾಗಿ, ಹೃದಯ ಬಡಿತ ಕ್ಷೀಣಿಸಿ ಕೊನೆಯುಸಿರೆಳೆದಿದ್ದಾರೆ.
ಪತ್ನಿ ರಶ್ಮಿ ಅವರ ಪ್ರತಿ ನೋವಿನಲ್ಲೂ ನೆರಳಾಗಿ ನಿಂತಿದ್ದವರು ಪತಿ ಸಾರಕ್ಕಿ ಮಂಜು. ಸೋಮವಾರ ಬೆಳಿಗ್ಗೆಯಷ್ಟೇ ಅವರು ಅತ್ಯಂತ ದೈನೇಸಿಯಾಗಿ, ಹೃದಯದ ಬಡಿತ ಇಳಿಮುಖವಾಗುತ್ತಿದೆ, ಒಂದೇ ಒಂದು ಸಲ ನನ್ನ ಜೀವ ಉಳಿದುಬಿಡಲಿ ಎಂದು ನಿಮ್ಮ ಇಷ್ಟದ ದೇವರಲ್ಲಿ ಪ್ರಾರ್ಥಿಸಿ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಇಡೀ ನಾಡು ಪ್ರಾರ್ಥಿಸಿದರೂ ಫಲಿಸಲಿಲ್ಲ. ಕೆಲವೇ ಕ್ಷಣಗಳಲ್ಲಿ ನಮ್ಮ ಪ್ರಾಣ ಹೊರಟು ಹೋಯ್ತು ಎಂದು ಮತ್ತೊಂದು ಪೋಸ್ಟ್ ಹಾಕಿದರು.
