‘ಪಾರು’ ಸೀರಿಯಲ್‌ನ ನಟ ಶ್ರೀಧರ್ ನಾಯಕ್ ಇನ್ನಿಲ್ಲ

Untitled design 2025 05 27t080048.975

ಕನ್ನಡ ಕಿರುತೆರೆಯ ಜನಪ್ರಿಯ ನಟ ಶ್ರೀಧರ್ ನಾಯಕ್ (47) ಅವರು ತಡರಾತ್ರಿ ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಕಳೆದ ಆರು ತಿಂಗಳಿಂದ ತೀವ್ರವಾದ ಇನ್‌ಫೆಕ್ಷನ್‌ನಿಂದ ಬಳಲುತ್ತಿದ್ದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆರ್ಥಿಕ ಸಂಕಷ್ಟದ ಮಧ್ಯೆಯೂ ಚಿಕಿತ್ಸೆಗಾಗಿ ಸಹಾಯ ಕೋರಿದ್ದರು. ಶ್ರೀಧರ್‌ರ ಸಾವು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿದೆ.

ಶ್ರೀಧರ್ ನಾಯಕ್ ಕನ್ನಡ ಕಿರುತೆರೆಯಲ್ಲಿ ತಮ್ಮ ಅಭಿನಯದಿಂದ ಗುರುತಿಸಿಕೊಂಡವರು. ‘ಪಾರು’ ಧಾರಾವಾಹಿಯಲ್ಲಿ ಆದಿಯ ಚಿಕ್ಕಪ್ಪನ ಪಾತ್ರದ ಮೂಲಕ ಛಾಪು ಮೂಡಿಸಿದರು. ‘ವಧು’, ‘ಮಂಗಳ ಗೌರಿ’, ‘ಮನೆಯೇ ಮಂತ್ರಾಲಯ’ ಸೇರಿದಂತೆ 40ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ವಿವಿಧ ಪಾತ್ರಗಳನ್ನು ನಟಿಸಿದ ಅವರು, ಪೋಷಕ ಪಾತ್ರಗಳ ಮೂಲಕವೇ ಜನಪ್ರಿಯತೆ ಗಳಿಸಿದ್ದರು.

ಚಿತ್ರರಂಗದಲ್ಲೂ ಮಿಂಚಿದ ಕಲಾವಿದ

ಕಿರುತೆರೆಯ ಜೊತೆಗೆ ಶ್ರೀಧರ್ ನಾಯಕ್ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದರು. ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರದಲ್ಲಿ ಅವರು ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ‘ರಾಜಾಮಾರ್ತಾಂಡ’, ‘ಈಶ ಮಹೇಶ’ ಮುಂತಾದ ತಮಿಳು ಚಿತ್ರಗಳಲ್ಲಿಯೂ ತಮ್ಮ ನಟಿಸಿದ್ದರು.

ಕಳೆದ ಆರು ತಿಂಗಳಿಂದ ಶ್ರೀಧರ್ ತೀವ್ರ ಇನ್‌ಫೆಕ್ಷನ್‌ನಿಂದ ಬಳಲುತ್ತಿದ್ದರು. ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ದಿನಕ್ಕೆ 10,000 ರಿಂದ 15,000 ರೂ. ಖರ್ಚಾಗುತ್ತಿತ್ತು. ಇತ್ತೀಚಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಅವರು, ಚಿಕಿತ್ಸೆಗಾಗಿ ಸಾರ್ವಜನಿಕರಿಂದ ಸಹಾಯ ಕೋರಿದ್ದರು. ನಟಿ ಸ್ವಪ್ನಾ ದೀಕ್ಷಿತ್ ಮತ್ತು ಇತರ ಕಲಾವಿದರು ಶ್ರೀಧರ್‌ಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

Exit mobile version