ರಾಮನಗರದ ಫಾರ್ಮ್‌ಹೌಸ್‌ನಲ್ಲಿ ಇಂದು ನಟ ದಿಲೀಪ್ ರಾಜ್ ಅಂತ್ಯಕ್ರಿಯೆ

ಬೆಂಗಳೂರು : ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆ, ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಮೂಲಕ ಮನೆಮಾತಾಗಿದ್ದ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 47 ವರ್ಷದ ದಿಲೀಪ್ ರಾಜ್ ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು, ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಇಂದು (ಮೇ 13) ಬೆಳಗಿನ ಜಾವ ದಿಲೀಪ್ ರಾಜ್ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಮೃತದೇಹವನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಅಪೋಲೊ ಆಸ್ಪತ್ರೆಗೆ ರವಾನಿಸಲಾಗಿದೆ. ನಟನ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಹಾಗೂ ಸ್ನೇಹಿತರು ಆಸ್ಪತ್ರೆಗೆ ಆಗಮಿಸಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ರಾಮನಗರ ತಾಲೂಕಿನ ಗುನ್ನೂರು ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ದಿಲೀಪ್ ರಾಜ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಸಂಜೆ 4 ಗಂಟೆಗೆ ಅಂತಿಮ ವಿಧಿವಿಧಾನ ನೆರವೇರಿಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲೇ ನಟನ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಸ್ಥಳೀಯರು ಮತ್ತು ಕೆಲಸಗಾರರು ಅಂತ್ಯಕ್ರಿಯೆಗೆ ಅಗತ್ಯ ಸಿದ್ಧತೆಗಳನ್ನು ಆರಂಭಿಸಿದ್ದು, ಗುಂಡಿ ತೋಡುವ ಕಾರ್ಯವೂ ನಡೆಯುತ್ತಿದೆ.

ಸುಮಾರು 10 ವರ್ಷಗಳ ಹಿಂದೆ ದಿಲೀಪ್ ರಾಜ್ ರಾಮನಗರ ತಾಲೂಕಿನ ಗುನ್ನೂರು ಗ್ರಾಮದಲ್ಲಿ ಒಂದು ಎಕರೆ ಜಮೀನು ಖರೀದಿಸಿದ್ದರು. ಬಳಿಕ ಅಲ್ಲಿ ತೋಟ ನಿರ್ಮಿಸಿ ಸುಂದರ ಫಾರ್ಮ್‌ಹೌಸ್ ಕಟ್ಟಿಸಿಕೊಂಡಿದ್ದರು. ಸಿನಿಮಾಗಳ ಬ್ಯುಸಿ ಶೆಡ್ಯೂಲ್ ನಡುವೆಯೂ ಅವರು ತಿಂಗಳಿಗೊಮ್ಮೆ ಫಾರ್ಮ್‌ಹೌಸ್‌ಗೆ ಭೇಟಿ ನೀಡುತ್ತಿದ್ದರು.

ದಿಲೀಪ್ ರಾಜ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಜನಪ್ರಿಯತೆ ಗಳಿಸಿದ್ದರು. 2005ರಲ್ಲಿ ಬಿಡುಗಡೆಯಾದ ‘ಬಾಯ್‌ಫ್ರೆಂಡ್’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು. ‘ಮಿಲನ’ ಸಿನಿಮಾದಲ್ಲಿನ ವಿಲನ್ ಪಾತ್ರ ಅವರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು. ತಮ್ಮ ಅಭಿನಯ ಶೈಲಿಯಿಂದ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ಅವರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

‘ಸುಗ್ರೀವ’, ‘ಗೆಳೆಯ’, ‘ಯೂಟರ್ನ್’ ಸೇರಿದಂತೆ ಸುಮಾರು 28ಕ್ಕೂ ಹೆಚ್ಚು ಸಿನಿಮಾಗಳಲ್ಲಿ ದಿಲೀಪ್ ರಾಜ್ ಅಭಿನಯಿಸಿದ್ದರು. ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲಿಯೂ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದರು. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದ ಅವರು, ತಮ್ಮ ಪಾತ್ರದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು.

https://youtu.be/s5eiG6FjdqU?si=rJ26kYRjVPJu7040

Exit mobile version