ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರುವ ನಟ ದರ್ಶನ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಯಾವುದೇ ಸಿನಿಮಾ ಅಥವಾ ಅಭಿಮಾನಿಗಳ ವಿಚಾರದಿಂದಲ್ಲ, ಜೈಲಿನೊಳಗಿನ ಅವರ ವರ್ತನೆಯೇ ಚರ್ಚೆಗೆ ಕಾರಣವಾಗಿದೆ. ಜೈಲಿನ ಕೈದಿಗಳಿಗಾಗಿ ಆಯೋಜಿಸಲಾಗುತ್ತಿರುವ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದರೂ ನಟ ದರ್ಶನ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಜೂನ್ 21ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆಯ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ವಿಶೇಷ ಯೋಗ ತರಬೇತಿ ನೀಡಲಾಗುತ್ತಿದೆ. ಆರೋಗ್ಯ ಕಾಪಾಡುವ ಉದ್ದೇಶದಿಂದ ಎಲ್ಲಾ ಕೈದಿಗಳಿಗೂ ಯೋಗಾಭ್ಯಾಸ ಕಡ್ಡಾಯಗೊಳಿಸುವ ದಿಕ್ಕಿನಲ್ಲಿ ಜೈಲು ಆಡಳಿತ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್‌ಗೂ ಯೋಗ ಕಲಿಯುವಂತೆ ಜೈಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಜೈಲಿನ ನಿಯಮದಂತೆ ಇತರೆ ಕೈದಿಗಳ ಜೊತೆ ಸೇರಿ ದೈನಂದಿನ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಯೋಗಾಭ್ಯಾಸವೂ ಅದರಲ್ಲಿ ಪ್ರಮುಖ ಭಾಗವಾಗಿದೆ. ಆದರೆ ದರ್ಶನ್ ಮಾತ್ರ ಇದುವರೆಗೂ ಯೋಗಾಭ್ಯಾಸದಲ್ಲಿ ಭಾಗವಹಿಸದೇ ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ. “ಬೆನ್ನುನೋವು ಇದೆ” ಎಂಬ ಕಾರಣವನ್ನು ನೀಡಿ ಅವರು ಯೋಗ ತರಗತಿಗೆ ಹಾಜರಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಜೈಲಿನ ಮೂಲಗಳ ಪ್ರಕಾರ, ಅಧಿಕಾರಿಗಳು ಹಲವು ಬಾರಿ ಯೋಗದ ಆರೋಗ್ಯಕಾರಿ ಲಾಭಗಳ ಬಗ್ಗೆ ತಿಳಿಸಿದರೂ ನಟ ದರ್ಶನ್ ಹೆಚ್ಚು ಸ್ಪಂದಿಸಿಲ್ಲ ಎನ್ನಲಾಗಿದೆ. ಯೋಗಾಭ್ಯಾಸ ಕೈದಿಗಳ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಕಾರಿ ಎಂದು ಅಧಿಕಾರಿಗಳು ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ. ಆದರೂ ನಟ ದರ್ಶನ್ ತಮ್ಮದೇ ಶೈಲಿಯಲ್ಲಿ ಮೌನ ವಹಿಸಿದ್ದಾರೆ ಎನ್ನಲಾಗುತ್ತಿದೆ.
ಇನ್ನೊಂದೆಡೆ, ಜೈಲಿನ ಇತರೆ ಕೈದಿಗಳು ಯೋಗ ತರಬೇತಿಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ. ಕೆಲವರು ಪ್ರತಿದಿನ ಬೆಳಿಗ್ಗೆ ನಡೆಯುವ ಯೋಗಾಭ್ಯಾಸದಲ್ಲಿ ನಿಯಮಿತವಾಗಿ ಹಾಜರಾಗುತ್ತಿದ್ದು, ಆರೋಗ್ಯದ ಕಡೆ ಗಮನ ಹರಿಸುತ್ತಿದ್ದಾರೆ. ಈ ನಡುವೆ ದರ್ಶನ್ ಮಾತ್ರ ದೂರ ಉಳಿಯುತ್ತಿರುವುದು ಜೈಲು ಸಿಬ್ಬಂದಿಯ ಗಮನ ಸೆಳೆದಿದೆ.
