ರಿಷಬ್ ಮನೆಯಲ್ಲಿ ಮೀನೂಟ ಸವಿದ NTR ಹೇಳಿದ್ದೇನು?

ಕುಂದಾಪುರ ನಂಟು.. ಉಡುಪಿ ರೌಂಡ್ಸ್.. ಫ್ಯಾಮಿಲಿ ಫೀಲ್

Untitled design 2025 10 26t132207.984

ಭಾರತಕ್ಕೆ ಆಸ್ಕರ್ ಬರೋಕೆ ಕಾರಣೀಭೂತರಾದ ಜೂನಿಯರ್ ಎನ್‌ಟಿಆರ್‌‌ಗೆ ರಿಷಬ್ ಶೆಟ್ಟಿ ಜೊತೆ ಒಂದೊಳ್ಳೆ ಬಾಂಧವ್ಯ ಏರ್ಪಟ್ಟಿದೆ. ಕಾಂತಾರ ಸಕ್ಸಸ್ ಬಳಿಕ ರಿಷಬ್ ಮನೆಯಲ್ಲಿ ಪತ್ನಿ ಸಮೇತ ಮೀನೂಟ ಸವಿದ ಯಂಗ್ ಟೈಗರ್ ಹೇಳಿದ್ದೇನು ಅನ್ನೋದ್ರ ಎಕ್ಸ್‌‌ಕ್ಲೂಸಿವ್ ಖಬರ್ ಇಲ್ಲಿದೆ ನೋಡಿ.

ಕಾಂತಾರ ಗತ್ತು, ಗಮ್ಮತ್ತಿಗೆ ಇಡೀ ಸಿನಿದುನಿಯಾ ಕ್ಲೀನ್ ಬೋಲ್ಡ್ ಆಗಿದೆ. ಹೌದು.. ಈ ವರ್ಷ ಭಾರತೀಯ ಚಿತ್ರರಂಗದಲ್ಲೇ ಅತಿಹೆಚ್ಚು ಗಳಿಸಿದ ಸಿನಿಮಾ ಆಗಿ ಹೊರಹೊಮ್ಮಿರೋ ಕಾಂತಾರ ಚಾಪ್ಟರ್-1ಗೆ ಇಂದಿಗೂ ಪ್ರಶಂಸೆ, ಪ್ರತಿಕ್ರಿಯೆಗಳ ಸುರಿಮಳೆ ಆಗ್ತಾನೇ ಇದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರದಲ್ಲಿ ಅಂಥದ್ದೊಂದು ಶಕ್ತಿಯಿದೆ. ಪುಷ್ಪ-2 ಚಿತ್ರದ ಮೂಲಕ ಸಾವಿರ ಕೋಟಿ ಸರದಾರ ಅನಿಸಿಕೊಂಡ ಅಲ್ಲು ಅರ್ಜುನ್ ಕೂಡ ನಮ್ಮ ರಿಷಬ್ ಒನ್ ಮ್ಯಾನ್ ಆರ್ಮಿಯಾಗಿ ಹಾಕಿರೋ ಎಫರ್ಟ್‌‌ಗಳನ್ನ ಕೊಂಡಾಡಿ ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ ಕಾಂತಾರ ಚಿತ್ರದ ಸಕ್ಸಸ್, ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್‌ಗೆ ದೀಪಾವಳಿ ಸಂಭ್ರಮವನ್ನು ದ್ವಿಗುಣಗೊಳಿಸಿದೆ. ಅದ್ರಲ್ಲೂ ಇಂಡಿಯಾಗೆ ಆಸ್ಕರ್ ತಂದುಕೊಟ್ಟ ತ್ರಿಬಲ್ ಆರ್ ಸ್ಟಾರ್ ಜೂನಿಯರ್ ಎನ್‌ಟಿಆರ್, ಪತ್ನಿ ಸಮೇತ ರಿಷಬ್ ನಿವಾಸಕ್ಕೆ ಆಗಮಿಸಿ, ವಿಶೇಷ ಔತಣಕೂಟದಲ್ಲಿ ಭಾಗಿಯಾಗಿರೋದು ಇಂಟರೆಸ್ಟಿಂಗ್. ಹೌದು.. ಕಾಂತಾರ ಹೈದ್ರಾಬಾದ್ ಪ್ರೀ-ರಿಲೀಸ್ ಇವೆಂಟ್‌ಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತಾರಕ್, ರಿಷಬ್ ವ್ಯಕ್ತಿತ್ವ ಹಾಗೂ ಟ್ಯಾಲೆಂಟ್‌‌ನ ಹಾಡಿ ಹೊಗಳಿದ್ರು.

ಅಲ್ಲದೆ ಕಾಂತಾರ ಚಿತ್ರದ ಶೂಟಿಂಗ್ ವೇಳೆ ಉಡುಪಿ, ಕುಂದಾಪುರಕ್ಕೆ ತಾಯಿ ಶಾಲಿನಿ ಹಾಗೂ ಪತ್ನಿ ಪ್ರಣತಿ ಜೊತೆ ಆಗಮಿಸಿದ್ದ ಜೂನಿಯರ್ ಎನ್‌ಟಿಆರ್‌ಗೆ ಒಳ್ಳೆಯ ಆತಿಥ್ಯ ಮಾಡಿದ್ರು ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ. ಹೌದು.. ಉಡುಪಿ ಶ್ರೀಕೃಷ್ಣನ ದರ್ಶನ ಮಾಡಬೇಕೆಂಬ ತಾರಕ್ ತಾಯಿ ಆಸೆ ಈಡೇರಿಸಿದ್ದರ ಜೊತೆ ಮೂಡುಗಲ್ಲಿನ ಸುಪ್ರಸಿದ್ದ ಕೇಶವನಾಥೇಶ್ವರ ಆಲಯಕ್ಕೂ ಎನ್‌ಟಿಆರ್ ಫ್ಯಾಮಿಲಿಯನ್ನ ಕರೆದೊಯ್ದು ದರ್ಶನ ಮಾಡಿಸಿದ್ರು ರಿಷಬ್. ಇದು ಶಾಲಿನಿ ನಂದಮೂರಿ ಅವ್ರು ಕುಂದಾಪುರದ ಹೆಣ್ಣು ಮಗಳಾಗಿದ್ದು, ಅವ್ರ ಆ ಕುಂದಾಪುರದ ನಂಟು ಇಲ್ಲಿ ಎದ್ದು ಕಾಣುತ್ತೆ.

ಇದೀಗ ರಾಜರಾಜೇಶ್ವರಿ ನಗರದಲ್ಲಿರೋ ರಿಷಬ್ ನಿವಾಸಕ್ಕೆ ಪತ್ನಿ ಪ್ರಣತಿ ಸಮೇತ ಆಗಮಿಸಿದ ಜೂನಿಯರ್ ಎನ್‌ಟಿಆರ್, ಶುಕ್ರವಾರ ರಾತ್ರಿ ಒಂದೊಳ್ಳೆ ಔತಣಕೂಟದಲ್ಲಿ ಭಾಗಿಯಾಗಿ, ಸಿನಿಮಾ ಸೇರಿದಂತೆ ಸಾಕಷ್ಟು ವಿಷಯಗಳ ಬಗ್ಗೆ ಕಶಲೋಪರಿ ಹಂಚಿಕೊಂಡಿದ್ದಾರೆ. ಸಿನಿಮಾದಂತೆ ಊಟ ಕೂಡ ಬೊಂಬಾಟ್ ಬ್ರದರ್ ಅಂತ ಶೆಟ್ರನ್ನ ಗುಣಗಾನ ಮಾಡಿದ್ದಾರೆ ಎನ್‌ಟಿಆರ್. ಈ ಮೂಲಕ ಸೀ ಫುಡ್ ಪ್ರಿಯ ಆದಂತಹ ತಾರಕ್‌ಗೆ ಅದ್ಭುತ ಮೀನೂಟ ಹಾಕಿಸಿ, ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

Exit mobile version