ಬೆಂಗಳೂರು: ಖ್ಯಾತ ಕನ್ನಡ ಚಿತ್ರ ನಿರ್ದೇಶಕ ಜೋಗಿ ಪ್ರೇಮ್ ಅವರು ಹೈನುಗಾರಿಕೆಗಾಗಿ ಎಮ್ಮೆ ಖರೀದಿಸುವ ಉದ್ದೇಶದಿಂದ ಗುಜರಾತ್ ಮೂಲದ ವನರಾಜ್ ಭಾಯ್ ಎಂಬ ವ್ಯಕ್ತಿಗೆ 4.5 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಆದರೆ, ಎಮ್ಮೆಗಳನ್ನು ಕೊಡುವುದಾಗಿ ನಂಬಿಸಿದ್ದ ವನರಾಜ್ ಭಾಯ್ ಹಣದೊಂದಿಗೆ ನಾಪತ್ತೆಯಾಗಿದ್ದಾನೆ. ಈ ವಂಚನೆ ಪ್ರಕರಣದಲ್ಲಿ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರುದಾರರಾಗಿ ಪ್ರೇಮ್ ಅವರ ಮ್ಯಾನೇಜರ್ ಹಾಗೂ ನಟ ದಶಾವರ ಚಂದ್ರು ದಾಖಲಿಸಿದ್ದಾರೆ.
ಜೋಗಿ ಪ್ರೇಮ್, ತಮ್ಮ ಹೈನುಗಾರಿಕೆಗಾಗಿ ಎರಡು ಎಮ್ಮೆಗಳನ್ನು ಖರೀದಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಗುಜರಾತ್ ಮೂಲದ ವನರಾಜ್ ಭಾಯ್ ಎಂಬಾತ ಸಂಪರ್ಕಕ್ಕೆ ಬಂದು, ಎಮ್ಮೆಗಳನ್ನು ಕೊಡಿಸುವ ಭರವಸೆ ನೀಡಿದ್ದ. ಮುಂಗಡವಾಗಿ 25,000 ರೂಪಾಯಿ ಪಡೆದ ಬಳಿಕ, ಆತ ವಾಟ್ಸಾಪ್ ಮೂಲಕ ಎರಡು ಎಮ್ಮೆಗಳ ವಿಡಿಯೋ ಕಳುಹಿಸಿದ್ದ.
ಈ ವಿಡಿಯೋವನ್ನು ನಂಬಿದ ಪ್ರೇಮ್, ಆನ್‌ಲೈನ್ ಮೂಲಕ ಹಂತಹಂತವಾಗಿ ಒಟ್ಟು 4.5 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದರು. ಆದರೆ, ಹಣ ಸ್ವೀಕರಿಸಿದ ನಂತರ ವನರಾಜ್ ಭಾಯ್ ಎಮ್ಮೆಗಳನ್ನು ಒದಗಿಸದೆ, ಫೋನ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾನೆ. ಒಂದು ವಾರದೊಳಗೆ ಎಮ್ಮೆಗಳನ್ನು ತಲುಪಿಸುವ ಭರವಸೆ ನೀಡಿದ್ದ. ತಾವು ವಂಚನೆಗೊಳಗಾಗಿರುವುದನ್ನು ಅರಿತ ಪ್ರೇಮ್ ಅವರು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಮ್ಮನ ತೋಟ: ಪ್ರೇಮ್‌ರ ಕನಸಿನ ಡೈರಿ ಫಾರ್ಮ್
ಜೋಗಿ ಪ್ರೇಮ್ ಅವರು ತಮ್ಮ ತಾಯಿ ಭಾಗ್ಯಮ್ಮ ಅವರ ನೆನಪಿನಲ್ಲಿ ‘ಅಮ್ಮನ ತೋಟ’ ಎಂಬ ಕೃಷಿ ಮತ್ತು ಹೈನುಗಾರಿಕೆ ಯೋಜನೆಯನ್ನು ಆರಂಭಿಸಿದ್ದಾರೆ. ಮದ್ದೂರು ಬಳಿಯ ಬೆಸಗರಹಳ್ಳಿಯಲ್ಲಿ 10 ಎಕರೆಗೂ ಹೆಚ್ಚು ಜಮೀನು ಖರೀದಿಸಿ, ಈ ತೋಟಕ್ಕೆ ‘ಅಮ್ಮನ ತೋಟ’ ಎಂದು ಹೆಸರಿಟ್ಟಿದ್ದಾರೆ.
ತಾಯಿಯ ಆಸಕ್ತಿಯಂತೆ ದೇಶಿ ತಳಿಯ ಹಸುಗಳನ್ನು ಸಾಕುವ ಯೋಜನೆಯನ್ನು ಹೊಂದಿದ್ದು, ಈಗಾಗಲೇ ಹರಿಯಾಣದ ಕಾಮಧೇನು ಗೋಶಾಲೆಯಿಂದ ಸಾಯಿವಾಲ್ ತಳಿಯ ಹಸುಗಳನ್ನು ಮತ್ತು ‘ಭೈರವ’ ಎಂಬ ಕಪ್ಪು ಹೋರಿಯನ್ನು ಖರೀದಿಸಿದ್ದಾರೆ. ಈ ಹೋರಿಯ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ವಂಚನೆಗೊಳಗಾದ ವಿಷಯ ತಿಳಿದ ತಕ್ಷಣ, ಪ್ರೇಮ್ ಅವರ ತಂಡವು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ವನರಾಜ್ ಭಾಯ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ. ಪೊಲೀಸರು ಆರೋಪಿಯ ಫೋನ್ ಸ್ವಿಚ್ ಆಫ್ ಆಗಿರುವುದರಿಂದ ಆತನ ಶೋಧಕ್ಕೆ ಕಾರ್ಯಾಚರಣೆ ಆರಂಭಿಸಿದ್ದಾರೆ.
