ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸಾಹಸ, ಆಕ್ಷನ್ ಮತ್ತು ಭಾವನಾತ್ಮಕ ಮನರಂಜನೆಯನ್ನು ಸಮತೋಲನವಾಗಿ ಬೆರೆಸಿ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಿದ ನಿರ್ದೇಶಕರಲ್ಲಿ ಜೋ ಸೈಮನ್ ಒಬ್ಬರು. ಹಲವು ದಶಕಗಳ ಕಾಲ ಸಿನಿರಂಗದಲ್ಲಿ ಸಕ್ರಿಯರಾಗಿದ್ದ ಅವರು ನಿರ್ದೇಶಕ, ಕಥೆಗಾರ ಮತ್ತು ಚಿತ್ರಕಥೆಗಾರರಾಗಿ ತಮ್ಮದೇ ಆದ ಶೈಲಿಯನ್ನು ರೂಪಿಸಿಕೊಂಡರು. ವಿಶೇಷವಾಗಿ ವಿಷ್ಣುವರ್ಧನ್ ಅವರಿಗೆ “ಸಾಹಸ ಸಿಂಹ” ಎಂಬ ಬಿರುದನ್ನು ಜನಪ್ರಿಯಗೊಳಿಸಿದ ನಿರ್ದೇಶಕರಾಗಿ ಜೋ ಸೈಮನ್ ಹೆಸರುವಾಸಿಯಾಗಿದ್ದಾರೆ.
1970ರ ದಶಕದಲ್ಲಿ ಆರಂಭವಾದ ಪಯಣ
1970ರ ದಶಕದಲ್ಲಿ ಸಿನಿರಂಗ ಪ್ರವೇಶಿಸಿದ ಜೋ ಸೈಮನ್, ಆರಂಭಿಕ ಹಂತದಲ್ಲೇ ಕಥಾ ಆಯ್ಕೆ ಮತ್ತು ದೃಶ್ಯ ನಿರೂಪಣೆಯಲ್ಲಿ ಹೊಸ ಪ್ರಯೋಗಗಳನ್ನು ಮಾಡಿದರು. 1977ರಲ್ಲಿ ಬಿಡುಗಡೆಯಾದ ಒಂದು ಪ್ರೇಮದ ಕಥೆ ಚಿತ್ರದ ಮೂಲಕ ಅವರು ನಿರ್ದೇಶಕರಾಗಿ ಗುರುತಿಸಿಕೊಂಡರು. ಬಳಿಕ 1980ರಲ್ಲಿ ಬಂದ ಸಿಂಹ ಜೋಡಿ ಹಾಗೂ ನನ್ನ ರೋಷ ನೂರು ವರ್ಷ ಸಿನಿಮಾಗಳು ಅವರಿಗೆ ವಾಣಿಜ್ಯ ಯಶಸ್ಸಿನ ಜೊತೆಗೆ ಪ್ರೇಕ್ಷಕರ ಮೆಚ್ಚುಗೆಯನ್ನೂ ತಂದವು.
ಸಾಹಸ ಸಿಂಹ ಹುಟ್ಟಿಗೆ ಕಾರಣ
1982ರಲ್ಲಿ ಬಿಡುಗಡೆಯಾದ ಸಾಹಸ ಸಿಂಹ ಸಿನಿಮಾ, ಜೋ ಸೈಮನ್ ಅವರ ಕರಿಯರ್‌ನಲ್ಲಿ ತಿರುವು ನೀಡಿತ್ತು. ಈ ಚಿತ್ರದಲ್ಲಿ ವಿಷ್ಣುವರ್ಧನ್ ಅಭಿನಯಿಸಿದ ಪಾತ್ರದ ಸಾಹಸಮಯ ವ್ಯಕ್ತಿತ್ವ ಪ್ರೇಕ್ಷಕರಲ್ಲಿ ಭಾರೀ ಕ್ರೇಜ್ ಹುಟ್ಟಿಸಿತು. ಈ ಚಿತ್ರದ ಯಶಸ್ಸಿನ ಬಳಿಕ ವಿಷ್ಣುವರ್ಧನ್ ಅವರಿಗೆ “ಸಾಹಸ ಸಿಂಹ” ಎಂಬ ಬಿರುದು ಅಂಟಿಕೊಂಡು ಜನಪ್ರಿಯವಾಯಿತು. ಅದರಿಂದ ಜೋ ಸೈಮನ್ ಅವರ ಹೆಸರು ಕನ್ನಡ ಆಕ್ಷನ್ ಸಿನಿಮಾಗಳಲ್ಲಿ ಅಗ್ರಸ್ಥಾನಕ್ಕೇರಿತು.
ಜೋ ಸೈಮನ್ ನಿರ್ದೇಶನದ ಸಿನಿಮಾಗಳ ಪ್ರಮುಖ ವೈಶಿಷ್ಟ್ಯವೆಂದರೆ ವೇಗದ ನಿರೂಪಣೆ, ಗಟ್ಟಿಯಾದ ಪಾತ್ರ ನಿರ್ಮಾಣ ಮತ್ತು ಪ್ರೇಕ್ಷಕರನ್ನು ಹಿಡಿದುಕೊಳ್ಳುವ ಕಥಾಹಂದರ. ಮಹಾ ಪ್ರಚಂಡರು, ಊರಿಗೆ ಉಪಕಾರಿ, ಸಿಡಿದದ್ದ ಸಹೋದರ ಸಿನಿಮಾಗಳು ಅದ್ಭುತ ಕಥೆಯನ್ನು ಆದರಿಸಿವೆ.
1989ರಲ್ಲಿ ಬಂದ ಹಾಂಕಾಂಗ್‌ನಲ್ಲಿ ಏಜೆಂಟ್ ಅಮರ್ ಸಿನಿಮಾ ಆ ಕಾಲದಲ್ಲಿ ವಿದೇಶಿ ಲೊಕೇಶನ್‌ಗಳಲ್ಲಿ ಚಿತ್ರೀಕರಿಸಿದ ಸಾಹಸಮಯ ಚಿತ್ರವಾಗಿ ಗಮನಸೆಳೆದಿತು. 1990ರ ದಶಕದಲ್ಲಿ ಸ್ನೇಹದ ಕಡಲಲ್ಲಿ, ರವಿವರ್ಮ, ವಾಂಟೆಡ್, ಟೈಮ್ ಬಾಂಬ್, ಮಿಸ್ಟರ್ ವಾಸು ಮುಂತಾದ ಸಿನಿಮಾಗಳು ವಾಣಿಜ್ಯ ಮತ್ತು ಮನರಂಜನಾ ಮೌಲ್ಯಗಳ ಸಮತೋಲನವನ್ನು ತೋರಿಸಿವೆ.
ಖ್ಯಾತ ನಟರ ಜೊತೆ ಕೆಲಸ
ಜೋ ಸೈಮನ್, ವಿಷ್ಣುವರ್ಧನ್ ಮಾತ್ರವಲ್ಲದೆ ಅಂಬರೀಶ್ ಸೇರಿದಂತೆ ಹಲವು ಖ್ಯಾತ ನಟರೊಂದಿಗೆ ಕೆಲಸ ಮಾಡಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬಂದ ಪಾತ್ರಗಳು ಪ್ರೇಕ್ಷಕರಿಗೆ ಮರೆಯಲಾಗದ ಅನುಭವವನ್ನು ನೀಡಿವೆ. ಆಕ್ಷನ್ ಸನ್ನಿವೇಶಗಳ ವಿನ್ಯಾಸ ಮತ್ತು ಭಾವನಾತ್ಮಕ ದೃಶ್ಯಗಳ ನಿರೂಪಣೆ ಅವರ ಸಿನಿಮಾಗಳ ಪ್ರಮುಖ ಆಕರ್ಷಣೆ.
ಹೊಸ ಶತಮಾನದಲ್ಲೂ ಚುರುಕಿನ ಸೇವೆ
2000ರಲ್ಲಿ ಕೃಷ್ಣಾರ್ಜುನ ಮತ್ತು 2007ರ ದಾದಾಗಿರಿ ಸಿನಿಮಾಗಳು ಬಿಡುಗಡೆಯಾದವು. 2019ರಲ್ಲಿ ಬಂದ ಪಯಣ ಚಿತ್ರದ ಮೂಲಕ ಅವರು ಸಮಕಾಲೀನ ಕಥಾನಕಗಳತ್ತ ಮುಖ ಮಾಡಿದರು. ಕಾಲ ಬದಲಾಗುತ್ತಿದ್ದರೂ ಪ್ರೇಕ್ಷಕರ ರುಚಿಗೆ ತಕ್ಕಂತೆ ತಮ್ಮ ಶೈಲಿಯನ್ನು ಹೊಂದಿಸಿಕೊಳ್ಳುವ ಸಾಮರ್ಥ್ಯ ಜೋ ಸೈಮನ್ ಅವರ ದೊಡ್ಡ ಬಲ.
ಕನ್ನಡ ಸಿನಿ ಇತಿಹಾಸದಲ್ಲಿ ಶಾಶ್ವತ ಸ್ಥಾನ
ಜೋ ಸೈಮನ್ ಅವರ ಸಿನಿ ಪಯಣವು ಕೇವಲ ಹಿಟ್ ಸಿನಿಮಾಗಳ ಪಟ್ಟಿಯಲ್ಲ, ಅದು ಕನ್ನಡ ಚಿತ್ರರಂಗದ ಒಂದು ಚಿನ್ನದ ಅಧ್ಯಾಯ. ಸಾಹಸಮಯ ಕಥೆಗಳು, ಮನರಂಜನಾ ಮೌಲ್ಯ ಮತ್ತು ತಾಂತ್ರಿಕ ವೈಶಿಷ್ಟ್ಯತೆಗಳನ್ನು ಒಟ್ಟುಗೂಡಿಸಿದ ನಿರ್ದೇಶಕರಾಗಿ ಅವರು ಗುರುತಿಸಿಕೊಂಡಿದ್ದಾರೆ.
