‘ಡಿವೋರ್ಸ್ ಸಿಗೋವರೆಗೂ ಸಿನಿಮಾದಲ್ಲಿ ನಟಿಸಲ್ಲ’: ನಟ ಜಯಂ ರವಿ

Untitled design 2026 05 16T165729.144

ಚೆನ್ನೈ: ಮಿಳು ಚಿತ್ರರಂಗದ ಜನಪ್ರಿಯ ನಟ ಜಯಂ ರವಿ ಅವರು ಇದೀಗ ಸಿನಿಮಾಗಳ ಬದಲಿಗೆ ತಮ್ಮ ಖಾಸಗಿ ಬದುಕಿನ ಸುದ್ದಿಗಳಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ.. ಪತ್ನಿ ಆರತಿ ಅವರಿಂದ ಪ್ರತ್ಯೇಕಗೊಂಡು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಅವರು, ಇದೀಗ ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಹತ್ವದ ಘೋಷಣೆ ಮಾಡಿದ್ದಾರೆ. ‘ವಿಚ್ಛೇದನ ಸಿಗುವವರೆಗೆ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ’ ಎಂದು ಪ್ರಕಟಿಸಿದ್ದಾರೆ.

ತಮಿಳಿನ ‘ಜಯಂ’ ಚಿತ್ರದ ಮೂಲಕ ಸಿನಿರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟ ಜಯಂ ರವಿ, ಹಲವು ಸೂಪರ್ ಹಿಟ್ ಸಿನಿಮಾಗಳ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಆದರೆ ಕಳೆದ ಕೆಲವು ತಿಂಗಳುಗಳಿಂದ ಅವರ ವೈಯಕ್ತಿಕ ಬದುಕು ಹೆಚ್ಚು ಸುದ್ದಿಯಲ್ಲಿದೆ. ಪತ್ನಿ ಆರತಿ ರವಿ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಇನ್ನೂ ಕಾನೂನುಬದ್ಧವಾಗಿ ವಿಚ್ಛೇದನ ದೊರೆತಿಲ್ಲ ಎಂದು ಅವರು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಯಂ ರವಿ, “ನನಗೆ ವಿಚ್ಛೇದನ ಸಿಗುವವರೆಗೆ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ” ಎಂದು ಘೋಷಿಸಿದರು. ಈ ವೇಳೆ ಅವರು ಭಾವುಕರಾಗಿ ಮಾತನಾಡಿ, ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ನೆನೆದು ಆಕ್ರೋಶ ಹೊರಹಾಕಿದರು. “ನನ್ನ ಖಾಸಗಿ ಬದುಕಿಗೆ ಭಾರೀ ಹಾನಿಯಾಗಿದೆ. ಎಲ್ಲವನ್ನೂ ಸರಿಪಡಿಸಿಕೊಂಡ ನಂತರ ಮಾತ್ರ ಮತ್ತೆ ಕ್ಯಾಮೆರಾ ಎದುರು ನಿಲ್ಲುತ್ತೇನೆ” ಎಂದರು.

ಅಷ್ಟೇ ಅಲ್ಲದೆ, “14 ವರ್ಷಗಳಿಂದ ನಾನು ಮೌನವಾಗಿದ್ದೆ. ಆದರೆ ಇನ್ನು ಮುಂದೆ ಸುಮ್ಮನಿರುವುದಿಲ್ಲ. ನನ್ನ ಬಗ್ಗೆ ಹರಿದಾಡುತ್ತಿರುವ ಎಲ್ಲಾ ಸುಳ್ಳು ಕಥೆಗಳಿಗೂ ಉತ್ತರ ನೀಡುತ್ತೇನೆ. ಸತ್ಯವನ್ನು ಹೊರಗೆ ತರುತ್ತೇನೆ” ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ತಮ್ಮ ಕುಟುಂಬದ ಪರಿಸ್ಥಿತಿ ಕುರಿತು ಮಾತನಾಡಿದ ಅವರು, “ನಾನು ಇದ್ದಾಗ ನನ್ನನ್ನು ಗುಲಾಮನಂತೆ ನೋಡಿಕೊಳ್ಳಲಾಯಿತು” ಎಂದು ಗಂಭೀರ ಆರೋಪ ಮಾಡಿದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಟ್ರೋಲಿಂಗ್ ವಿರುದ್ಧವೂ ಜಯಂ ರವಿ ಕಿಡಿಕಾರಿದರು. “ನನಗೆ ಮಕ್ಕಳ ಮೇಲೆ ಪ್ರೀತಿ ಇಲ್ಲ ಎಂದು ಹೇಗೆ ಹೇಳುತ್ತಾರೆ? ಮಕ್ಕಳ ಶಿಕ್ಷಣಕ್ಕಾಗಿ ವರ್ಷಕ್ಕೆ 90 ಲಕ್ಷ ರೂಪಾಯಿ ಫೀಸು ಕಟ್ಟುತ್ತಿದ್ದೇನೆ. ನನ್ನ ಚಿಕ್ಕ ಮಗನ ಜೊತೆ ಪ್ರತಿದಿನ ಚೆಸ್ ಆಡುತ್ತಿದ್ದೆ. ಈಗ ನನ್ನ ಮಕ್ಕಳನ್ನೇ ನೋಡಲು ಅವಕಾಶ ಕೊಡುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಇದೀಗ ಜಯಂ ರವಿ ಹೆಸರು ಗಾಯಕಿ ಕೆನೀಶಾ ಪ್ರಾನ್ಸಿಸ್ ಜೊತೆಗೂ ಸೇರಿ ಸುದ್ದಿಯಾಗುತ್ತಿದೆ. ಇವರಿಬ್ಬರ ನಡುವೆ ಆಪ್ತ ಸಂಬಂಧವಿದೆ ಎಂಬ ಸುದ್ದಿ ಕೆಲಕಾಲದಿಂದ ಹರಿದಾಡುತ್ತಿತ್ತು. ಆದರೆ ಇತ್ತೀಚೆಗೆ ಕೆನೀಶಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ “ವಿದಾಯ ಚೆನ್ನೈ” ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದರು.

ತಮ್ಮ ಆಪ್ತ ಗಾಯಕಿ ಕೆನೀಶಾ ಪ್ರಾನ್ಸಿಸ್ ಅವರು ಚೆನ್ನೈ ಬಿಟ್ಟು ಹೋಗಬೇಕಾದ ಸ್ಥಿತಿ ಬಗ್ಗೆಯೂ ರವಿ ನೊಂದುಕೊಂಡಿದ್ದಾರೆ. “ಈಗಾಗಲೇ ಒಬ್ಬ ಮಹಿಳೆಯನ್ನು ಹಾಳು ಮಾಡಿದ್ದೀರಿ, ಚೆನ್ನೈನಿಂದ ದೂರ ಹೋಗುವಂತೆ ಮಾಡಿದ್ದೀರಿ. ಇದನ್ನು ಮುಂದುವರೆಸಬೇಡಿ. ಮುಂದಿನ ದಿನಗಳಲ್ಲಿ ಸಾಕಷ್ಟು ಸತ್ಯಗಳು ಹೊರಗೆ ಬರಲಿವೆ” ಎಂದು ಎಚ್ಚರಿಕೆ ನೀಡಿದ್ದಾರೆ.

Exit mobile version