ದಿ ವೆಯ್ಟ್ ಈಸ್ ಓವರ್. ಕೊನೆಗೂ ಸಿಎಂ ವಿಜಯ್ ನಟನೆಯ ಕಟ್ಟ ಕಡೆಯ ಸಿನಿಮಾ ಜನನಾಯಗನ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಅಂತೂ ಇಂತೂ ಸೆನ್ಸಾರ್ ಮಂಡಳಿ ಸೆನ್ಸಾರ್ ಪಾಸ್ ಮಾಡಿದ್ದು, ಎ ಸರ್ಟಿಫಿಕೇಟ್ ಮೂಲಕ ಪ್ರೇಕ್ಷಕರ ಮುಂದೆ ಶೋ ನೀಡಲಿದ್ದಾರೆ ದಳಪತಿ ವಿಜಯ್.
‘ಜನನಾಯಗನ್’ ಚಿತ್ರಕ್ಕೆ ಕೊನೆಗೂ ಸಿಕ್ತು ಬಿಡುಗಡೆ ಭಾಗ್ಯ
ಜುಲೈ 24ಕ್ಕೆ ವರ್ಲ್ಡ್‌ವೈಡ್ ರಿಲೀಸ್.. ಸೆನ್ಸಾರ್‌ನಿಂದ A ಪತ್ರ
ದಳಪತಿಗೆ ವಿಜಯೋತ್ಸವ ಫಿಕ್ಸ್.. ಸಿಎಂ ವಿಜಯ್ ದಾಖಲೆ
7 ತಿಂಗಳ ನಂತ್ರ ವಿವಾದ ಅಂತ್ಯ.. ಇದು ದಳಪತಿ ಕೊನೆ ಆಟ
ಜನನಾಯಗನ್.. ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ನಟನೆಯ ಕಟ್ಟ ಕಡೆಯ ಸಿನಿಮಾ ಅನ್ನೋ ಕಾರಣಕ್ಕೆ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಅದಕ್ಕಿಂತ ಜಾಸ್ತಿ ಸೆನ್ಸಾರ್ ಸಮಸ್ಯೆ ಎದುರಾಗಿ ಸುಪ್ರೀಂ ಕೋರ್ಟ್ ತನಕ ಹೋದಂತಹ ಪ್ರಕರಣ ಟಾಕ್ ಆಫ್ ದಿ ಸಿನಿ ವರ್ಲ್ಡ್ ಆಗಿತ್ತು. ವರ್ಷಾರಂಭದಲ್ಲಿ ಅಂದ್ರೆ ಜನವರಿ 9ರಂದೇ ಪೊಂಗಲ್ ಹಬ್ಬದ ವಿಶೇಷ ಈ ಸಿನಿಮಾ ತೆರೆ ಕಾಣಬೇಕಿತ್ತು. ಆದ್ರೆ ಯಾವಾಗ ಸೆನ್ಸಾರ್ ಸಮಸ್ಯೆ ಆಯ್ತೋ, ಆಗ ಬಿಡುಗಡೆಗೆ ಸ್ಪಷ್ಟತೆ ಸಿಗದೆ, ಹಾಗೆಯೇ ಉಳಿದುಬಿಟ್ಟಿತ್ತು.
ನಮ್ಮ ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿರೋ ಈ ಸಿನಿಮಾಗೆ ವಿನೋದ್ ಆ್ಯಕ್ಷನ್ ಕಟ್ ಹೇಳಿದ್ದು, ವಿಜಯ್ ಜೊತೆ ಪೂಜಾ ಹೆಗ್ಡೆ ಬಣ್ಣ ಹಚ್ಚಿದ್ದಾರೆ. ಪೊಲಿಟಿಕಲ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಜನನಾಯಗನ್ 3 ಗಂಟೆ 3 ನಿಮಿಷದಷ್ಟು ದೊಡ್ಡ ರನ್ ಟೈಂ ಹೊಂದಿದೆಯಂತೆ. ಇದೀಗ ಬರೋಬ್ಬರಿ 7 ತಿಂಗಳ ನಂತ್ರ ಕೊನೆಗೂ ಸೆನ್ಸಾರ್ ಪಾಸ್ ಆಗಿರೋ ಜನನಾಯಗನ್, ಇದೇ ಜುಲೈ 24ರಂದು ವರ್ಲ್ಡ್‌ವೈಡ್ ಬೆಳ್ಳಿತೆರೆ ಬೆಳಗೋಕೆ ಸಜ್ಜಾಗಿದೆ.
ಯೆಸ್.. ಜನನಾಯಗನ್ ಸಿನಿಮಾ ಥಿಯೇಟರ್‌ಗೆ ಎಂಟ್ರಿ ಕೊಡೋಕೆ ಆ ಚಿತ್ರದ ನಾಯಕನಟ ವಿಜಯ್ ಸಿಎಂ ಆಗಬೇಕಾಯ್ತು ಅಂತ ಜನ ಮಾತಾಡಿಕೊಳ್ತಿದ್ದಾರೆ. ಅದೊಂಥರಾ ನಿಜವೂ ಹೌದು. ತನ್ನನ್ನ, ತನ್ನ ರಾಜಕೀಯ ಜೀವನವನ್ನ ತುಳಿಯೋಕೆ ನೋಡಿದವರ ಮುಂದೆ ಮುಗಿಲೆತ್ತರಕ್ಕೆ ಬೆಳೆದು ನಿಂತು, ತಾನೇನು, ತನ್ನ ಗತ್ತೇನು ಅನ್ನೋದನ್ನ ತೋರುತ್ತಿದ್ದಾರೆ ದಳಪತಿ ವಿಜಯ್. ಸದ್ಯ ವಿಜಯ್‌ಗೆ ಇಡೋ ಪ್ರತಿ ಹೆಜ್ಜೆಯಲ್ಲೂ ವಿಜಯೋತ್ಸವ ಸಿಗ್ತಿರೋದು ಖುಷಿಯ ವಿಚಾರ.
ಅಂದಹಾಗೆ ಜನನಾಯಗನ್ ಸಿನಿಮಾ ಏಪ್ರಿಲ್‌ನಲ್ಲಿ ಹೆಚ್‌ಡಿ ಪ್ರಿಂಟ್ ಸಮೇತ ಪೈರಸಿ ಆಗಿ ಸೋರಿಕೆ ಆಗಿತ್ತು. ಅದಾದ ಬಳಿಕ ಅದು ಫಿಲ್ಮ್ ಎಡಿಟರ್‌ನಿಂದಲೇ ಲೀಕ್ ಆಗಿದೆ ಅಂತ ಅವ್ರ ಮೇಲೆ ಕೇಸ್ ಕೂಡ ಆಗಿತ್ತು. ಆದಾಗ್ಯೂ ಸಹ ವಿಜಯ್ ಸಿಎಂ ಆಗಿರೋದ್ರಿಂದ ಸಹಜವಾಗಿಯೇ ಜನನಾಯಗನ್ ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆಯಿದೆ. ಸಿನಿಮಾ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ವರ್ಲ್ಡ್‌ವೈಡ್ ತೆರೆಗೆ ಬರ್ತಿದೆ. ಅಭಿಮಾನಿಗಳು ಜನನಾಯಗನ್‌ನ ತಲೆ ಮೇಲೆ ಹೊತ್ತು ಮೆರೆಸಲು ತುದಿಗಾಲಲ್ಲಿ ನಿಂತಿದ್ದಾರೆ.
ಬಹುಶಃ ಸಿಎಂ ಆದ ಬಳಿಕ ಒಬ್ಬ ಸೂಪರ್ ಸ್ಟಾರ್ ಸಿನಿಮಾ ಇಷ್ಟು ಕ್ರೇಜ್‌ನಿಂದ ರಿಲೀಸ್ ಆಗ್ತಿರೋ ಇದೇ ಮೊದಲು ಅನಿಸ್ತಿದೆ. ಇದು ತೆಲುಗಿನ ಭಗವಂತ್ ಕೇಸರಿ ಚಿತ್ರದ ರಿಮೇಕ್ ನಂತಿದ್ರೂ ಸಹ, ಸಾಕಷ್ಟು ಕುತೂಹಲ ಉಳಿಸಿಕೊಂಡಿದೆ. ವಿಜಯ್ ಸ್ಟೈಲು, ಮ್ಯಾನರಿಸಂಗೆ ತಕ್ಕನಾಗಿ, ರಾಜಕೀಯ ಬೆಳವಣಿಗೆಗಳಿಗೆ ಹತ್ತಿರ ಆಗುವಂತಹ ಕಂಟೆಂಟ್‌ನಿಂದ ಕಥೆ ಜೀವಂತಿಕೆ ಪಡೆದಿದೆ. ಹಾಗಾಗಿಯೇ ಜುಲೈ 24ಕ್ಕೆ ವಿಜಯೋತ್ಸವ ಕನ್ಫರ್ಮ್ ಎನ್ನಲಾಗ್ತಿದೆ.
ಪಂಚಭಾಷೆಯಲ್ಲಿಲ್ಲ ಜನನಾಯಗನ್.. ತ್ರಿಭಾಷೆಯಲ್ಲಿ ತೆರೆಗೆ
ಕನಿಷ್ಟ ಸಾವಿರ ಕೋಟಿ ಪೈಸಾ ವಸೂಲ್ ಮಾಡೋ ನಿರೀಕ್ಷೆ..!
ಹೌದು.. ಜನನಾಯಗನ್ ಸಿನಿಮಾ ಈ ಹಿಂದೆ ತಮಿಳಿನ ಜೊತೆ ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದ್ರೀಗ ಕೆವಿಎನ್ ಪ್ರೊಡಕ್ಷನ್ಸ್ ನಮ್ಮ ಗ್ಯಾರಂಟಿ ನ್ಯೂಸ್‌ಗೆ ನೀಡಿದ ಮಾಹಿತಿಯಂತೆ ಅದು ತಮಿಳಿನ ಜೊತೆ ತೆಲುಗು ಹಾಗೂ ಹಿಂದಿಯಲ್ಲಷ್ಟೇ ತೆರೆ ಕಾಣ್ತಿದೆ. ತ್ರಿಭಾಷಾ ಚಿತ್ರವಾಗಿ ವಿಶ್ವದಾದ್ಯಂತ ಜುಲೈ 24ರಂದು ಗ್ರ್ಯಾಂಡ್ ರಿಲೀಸ್ ಆಗಲಿದೆ. ಮಲೇಷ್ಯಾದಲ್ಲಿ ನಡೆದ ಪ್ರೀ ರಿಲೀಸ್ ಇವೆಂಟ್‌ನ ಮೀರಿಸೋ ರೇಂಜ್‌ಗೆ ಫ್ಯಾನ್ಸ್ ಹಾಗೂ ಚಿತ್ರಪ್ರೇಮಿಗಳು ಆ ಚಿತ್ರವನ್ನ ಗೆಲ್ಲಿಸಲು ಸಜ್ಜಾಗಿರೋದು ಸುಳ್ಳಲ್ಲ.
ಇನ್ನೂ ಜನನಾಯಗನ್ ಚಿತ್ರಕ್ಕೆ 300 ರಿಂದ 500 ಕೋಟಿ ಬಜೆಟ್ ಆಗಿದೆ ಎನ್ನಲಾಗ್ತಿದ್ದು, ರಿಲೀಸ್ ಬಳಿಕ ಬಾಕ್ಸ್ ಆಫೀಸ್‌ನಲ್ಲಿ ಕನಿಷ್ಟ ಸಾವಿರ ಕೋಟಿ ಗಳಿಸೋ ನಿರೀಕ್ಷೆಯಿದೆ. ಸೋ.. ಲೆಟ್ಸ್ ವೆಲ್ಕಮ್ ಜನನಾಯಗನ್ ಟು ಥಿಯೇಟರ್ಸ್ ಆ್ಯಂಡ್ ಎಂಜಾಯ್.
