ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಈಗಾಗಲೇ ಸೆನ್ಸಾರ್ ಸಮಸ್ಯೆಯಿಂದ ತೊಂದರೆಗೆ ಒಳಗಾಗಿರುವ ‘ಜನ ನಾಯಗನ್’ ಸಿನಿಮಾಗೆ ಹೊಸ ಕಾಟ ಶುರುವಾಗಿದೆ. ಈ ಚಿತ್ರದ ಪ್ರಮುಖ ದೃಶ್ಯವನ್ನು ಲೀಕ್ ಆಗಿದ್ದು, ದಳಪತಿ ಅಭಿಮಾನಿಗಳು ಗರಂ ಆಗಿದ್ದಾರೆ. ಇದೊಂದು ಪಿತೂರಿ ಎಂದು ವಿಜಯ್ ಫ್ಯಾನ್ಸ್ ಆರೋಪಿಸಿದ್ದಾರೆ. ಅಷ್ಟಕ್ಕೂ ಸಿನಿಮಾ ಲೀಕ್ ಆಗಿದ್ದೇಗೆ..? ಮಾಡಿದ್ಯಾರು..? ಕೆವಿಎನ್ ಮುಂದಿನ ಹೆಜ್ಜೆ ಹೇಗಿರಲಿದೆ..? ಸಿನಿಮಾ ರಿಲೀಸ್ ಯಾವಾಗ..? ರಜನಿ, ಚಿರಂಜೀವಿ ಏನು ಹೇಳಿದ್ರು ಈ ಸ್ಟೋರಿ ನೋಡಿ.
- ಜನನಾಯಗನ್ಗೆ ತಪ್ಪದ ಸಂಕಷ್ಟ.. ಸಿನಿಮಾದ ದೃಶ್ಯ ಲೀಕ್..!
- KVNಗೆ ಒತ್ತಡ..ಲೀಕಾಸುರರ ವಿರುದ್ಧ ಸೈಬರ್ ಕಂಪ್ಲೇಂಟ್..!
- ಜನನಾಯಗನ್ಗೆ ಎಲೆಕ್ಷೆನ್ ಎಫೆಕ್ಟ್..ಕೈ ಸೇರದ ಸೆನ್ಸಾರ್ ಸರ್ಟಿಫಿಕೇಟ್
- ಮೌನಕ್ಕೆ ಶರಣಾದ ದಳಪತಿ..ಬೆಂಬಲವಾಗಿ ನಿಂತ ತಲೈವಾ, ಚಿರಂಜೀವಿ..!
ಈಗಾಗಲೇ ಸೆನ್ಸಾರ್ ಸಮಸ್ಯೆಯಿಂದ ತೊಂದರೆಗೆ ಒಳಗಾಗಿರುವ ‘ಜನ ನಾಯಗನ್’ ಸಿನಿಮಾಗೆ ಹೊಸ ಕಾಟ ಶುರುವಾಗಿದೆ. ಈ ಚಿತ್ರದ ಒಂದು ಪ್ರಮುಖ ದೃಶ್ಯವನ್ನು ಲೀಕ್ ಮಾಡಲಾಗಿದೆ. ಇದರಿಂದ ದಳಪತಿ ವಿಜಯ್ ಅಭಿಮಾನಿಗಳು ಗರಂ ಆಗಿದ್ದಾರೆ. ಇದೊಂದು ಪಿತೂರಿ ಎಂದು ವಿಜಯ್ ಫ್ಯಾನ್ಸ್ ಆರೋಪಿಸಿದ್ದಾರೆ. ‘ಜನ ನಾಯಗನ್’ ಸಿನಿಮಾಗೆ ಸದ್ಯ ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿವೆ. ಒಂದು ಕಡೆ ತಮಿಳುನಾಡು ವಿಧಾನಸಭಾ ಚುನಾವಣೆಯ ಕಾವು ಚಿತ್ರದ ಬಿಡುಗಡೆಗೆ ಅಡ್ಡಿಯಾಗಿದ್ದರೆ, ಮತ್ತೊಂದೆಡೆ ಚಿತ್ರದ ಪ್ರಮುಖ ದೃಶ್ಯವೊಂದು ಆನ್‌ಲೈನ್‌ನಲ್ಲಿ ಲೀಕ್ ಆಗಿರುವುದು ಚಿತ್ರತಂಡವನ್ನು ಆತಂಕಕ್ಕೆ ತಳ್ಳಿದೆ. ಇದು ವಿಜಯ್ ವಿರೋಧಿಗಳು ಈ ಕೃತ್ಯದ ಹಿಂದೆ ಇದ್ದಾರೆ ಎಂಬುದು ಫ್ಯಾನ್ಸ್ ಆರೋಪ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಕ್ಲಿಪ್‌ನಲ್ಲಿ ವ್ಯಕ್ತಿಯೊಬ್ಬ ವಿಡಿಯೋವನ್ನು ಪಾಸ್ ಮಾಡುತ್ತಿರುವುದು ಕಂಡುಬಂದಿದೆ. ಇದನ್ನು ಗಮನಿಸಿದರೆ, ಚಿತ್ರದ ಎಡಿಟಿಂಗ್ ಕೆಲಸ ನಡೆಯುವ ಸ್ಥಳದಿಂದಲೇ ಈ ದೃಶ್ಯಗಳು ಸೋರಿಕೆಯಾಗಿರಬಹುದು ಎಂದು ಶಂಕಿಸಲಾಗಿದೆ. ದೃಶ್ಯಗಳು ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತಿರುವ ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ಆ ಲಿಂಕ್‌ಗಳನ್ನು ಬ್ಲಾಕ್ ಮಾಡಲು ಪ್ರಯತ್ನಿಸುತ್ತಿದೆ. ಅಲ್ಲದೆ, ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ತಿಂಗಳು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ರಾಜ್ಯಾದ್ಯಂತ ಚುನಾವಣಾ ಕಾವು ಹೆಚ್ಚಿದೆ. ಈ ಕಾರಣದಿಂದಾಗಿ ‘ಜನ ನಾಯಗನ್’ ಚಿತ್ರವು ಚುನಾವಣೆಯ ನಂತರವಷ್ಟೇ ತೆರೆಗೆ ಬರಲಿದೆ. ಚಿತ್ರಕ್ಕೆ ರಿವೈಸಿಂಗ್ ಕಮಿಟಿ ಒಪ್ಪಿಗೆ ನೀಡಿದ್ದರೂ, ಸೆನ್ಸಾರ್ ಪ್ರಮಾಣಪತ್ರ ಇನ್ನೂ ಕೈಸೇರಬೇಕಿದೆ. ಈ ನಡುವೆ ಆಗಿರುವ ಲೀಕ್ ಘಟನೆಯು ಚಿತ್ರದ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.
ಈ ಕಷ್ಟದ ಸಮಯದಲ್ಲಿ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, ರಜನಿಕಾಂತ್ ಸೇರಿದಂತೆ ಹಲವು ಸ್ಟಾರ್ಸ್ ಬಹಿರಂಗವಾಗಿ ವಿಜಯ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಈ ಲೀಕ್ ಹಿಂದೆ ಯಾವುದೋ ದೊಡ್ಡ ಪಿತೂರಿ ಇರಬಹುದು ಎಂದು ವಿಜಯ್ ಅಭಿಮಾನಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಸೋರಿಕೆಯಾದ ವಿಡಿಯೋಗಳನ್ನು ಯಾರೂ ಹಂಚಿಕೊಳ್ಳಬೇಡಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾರೆ. ವಿಡಿಯೋ ಹಂಚಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಕೆವಿಎನ್ ಪ್ರೊಡಕ್ಷನ್ಸ್‌ಗೆ ಮನವಿ ಮಾಡಿದ್ದಾರೆ. ದೃಶ್ಯಗಳು ಲೀಕ್ ಆಗಿ ಹೆಚ್ಚಿನ ಹಾನಿಯಾಗುವ ಮುನ್ನವೇ ಚಿತ್ರವನ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡುವ ಬಗ್ಗೆ ನಿರ್ಮಾಣ ಸಂಸ್ಥೆ ಚಿಂತನೆ ನಡೆಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಇಷ್ಟೆಲ್ಲಾ ಗೊಂದಲ, ಲೀಕ್ ವಿವಾದ ಮತ್ತು ಸ್ಟಾರ್‌ಗಳ ಬೆಂಬಲ ವ್ಯಕ್ತವಾಗುತ್ತಿದ್ದರೂ, ನಾಯಕ ನಟ ದಳಪತಿ ವಿಜಯ್ ಮಾತ್ರ ಸದ್ಯಕ್ಕೆ ಮೌನಕ್ಕೆ ಶರಣಾಗಿದ್ದಾರೆ. ಈ ವಿವಾದಗಳ ಬಗ್ಗೆ ಅಥವಾ ಚಿತ್ರದ ಬಿಡುಗಡೆಯ ಬಗ್ಗೆ ಅವರು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಚುನಾವಣಾ ಕಣದಲ್ಲಿ ತಮ್ಮ ರಾಜಕೀಯ ಪಕ್ಷದ ಕೆಲಸಗಳಲ್ಲಿ ಬ್ಯುಸಿಯಾಗಿರುವ ಅವರು, ಚಿತ್ರದ ವಿವಾದಕ್ಕೆ ಮೌನದ ಮೂಲಕವೇ ಉತ್ತರ ನೀಡುತ್ತಿದ್ದಾರಾ ಅಥವಾ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಾರಾ ಎಂಬ ಕುತೂಹಲ ಮೂಡಿದೆ.
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
