ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮದ್ಯ ಸೇವಿಸುತ್ತಾ, ಸಿಗರೇಟ್ ಸೇದುತ್ತಾ ಪಾರ್ಟಿ ಮಾಡುತ್ತಿರುವ ವಿಡಿಯೋ ವೈರಲ್ ಆದ ಪ್ರಕರಣಕ್ಕೆ ಇದೀಗ ಭಾರೀ ತಿರುವು ಸಿಕ್ಕಿದೆ. ಈ ವಿಡಿಯೋ ಲೀಕ್ ಆರೋಪ ಎದುರಿಸುತ್ತಿರುವ ನಟ ದರ್ಶನ್ ಆಪ್ತ ಸ್ನೇಹಿತ ಧನ್ವೀರ್, ಎರಡನೇ ಬಾರಿಯ ವಿಚಾರಣೆಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಹೆಸರನ್ನು ಬಾಯ್ಬಿಟ್ಟಿದ್ದಾರೆ. ಇದರಿಂದ ವಿಜಯಲಕ್ಷ್ಮೀ ಅವರನ್ನೂ ತನಿಖಾಧಿಕಾರಿಗಳು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.
ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ ದರ್ಶನ್ ಸೇರಿದಂತೆ ಹಲವು ಕೈದಿಗಳು ಜೈಲಿನಲ್ಲೇ ಮದ್ಯಪಾನ, ಸಿಗರೇಟ್ ಸೇದುತ್ತಾ ಆನಂದದಲ್ಲಿರುವ ದೃಶ್ಯಗಳಿದ್ದವು. ಇದು ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಜೈಲು ಆಡಳಿತದ ತಪ್ಪಿಗೆ ಈ ವಿಡಿಯೋ ಸಾಕ್ಷಿಯಾಗಿತ್ತು. ಈ ವಿಡಿಯೋ ಯಾರು ಲೀಕ್ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಆರಂಭಿಸಿದ್ದರು. ಈ ಸಂಬಂಧ ದರ್ಶನ್ ಆಪ್ತ ಧನ್ವೀರ್ ಮೇಲೆ ಆರೋಪ ಬಂದಿತ್ತು.
ಮೊದಲ ಬಾರಿಗೆ ನೋಟಿಸ್ ನೀಡಿದಾಗ ಧನ್ವೀರ್ ವಿಚಾರಣೆಗೆ ಹಾಜರಾಗಿದ್ದರು. ಆದರೆ ಅವರು ಯಾವುದೇ ಮಾಹಿತಿ ನೀಡಿರಲಿಲ್ಲ. ಆ ನಂತರ ಎರಡನೇ ನೋಟಿಸ್ ನೀಡಲಾಯಿತು. ಈ ಬಾರಿ ಧನ್ವೀರ್ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ. “ನಾನು ಆ ವಿಡಿಯೋವನ್ನು ವೈರಲ್ ಮಾಡಿಲ್ಲ. ಅದು ಹೇಗೆ ವೈರಲ್ ಆಯ್ತು ಅಂತ ನನಗೆ ಗೊತ್ತಿಲ್ಲ. ಆದ್ರೆ ಒಬ್ಬ ವಕೀಲರಿಂದ ಆ ವಿಡಿಯೋ ನನ್ನ ಬಳಿ ಬಂದಿತ್ತು. ನಾನು ಅದನ್ನು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೆ ಮಾತ್ರ ಫಾರ್ವರ್ಡ್ ಮಾಡಿದ್ದೆ” ಎಂದು ಧನ್ವೀರ್ ಹೇಳಿಕೊಂಡಿದ್ದಾರೆ.
ಧನ್ವೀರ್ ಹೇಳಿಕೆಯಲ್ಲಿ ವಿಜಯಲಕ್ಷ್ಮೀ ಹೆಸರು ಬರುತ್ತಿದ್ದಂತೆ ತನಿಖಾಧಿಕಾರಿಗಳು ತಕ್ಷಣ ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವಿಜಯಲಕ್ಷ್ಮೀ ಅವರನ್ನು ವಿಚಾರಣೆಗೆ ಕರೆಸಬೇಕೆ ಎಂಬ ಚರ್ಚೆ ಪೊಲೀಸ್ ಇಲಾಖೆಯಲ್ಲಿ ನಡೆದಿದೆ. ಧನ್ವೀರ್ ಮತ್ತಷ್ಟು ಸಹಕಾರ ನೀಡದಿದ್ದರೆ ವಿಜಯಲಕ್ಷ್ಮೀ ಅವರನ್ನು ಖಂಡಿತಾ ಕರೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಇನ್ನು ವಿಡಿಯೋ ಯಾವ ಅಕೌಂಟ್‌ನಿಂದ ಅಪ್‌ಲೋಡ್ ಆಗಿದೆ, ಯಾರು ಮೊದಲು ಪೋಸ್ಟ್ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಮೆಟಾ ಕಂಪನಿಗೆ ಈಗಾಗಲೇ ಇಮೇಲ್ ಕಳುಹಿಸಿ ಮಾಹಿತಿ ಕೋರಿದ್ದಾರೆ. ಇದಲ್ಲದೆ ಜೈಲಿನಲ್ಲಿದ್ದ ಕೈದಿಗಳನ್ನೂ ವಿಚಾರಣೆ ಮಾಡಲಾಗುತ್ತಿದೆ.
ಜೈಲಿನ ರಾಜಾತಿಥ್ಯ ವಿಡಿಯೋ ಲೀಕ್ ಪ್ರಕರಣ ಇದೀಗ ದರ್ಶನ್ ಕುಟುಂಬದತ್ತ ತಿರುಗಿದ್ದು, ಧನ್ವೀರ್ ಹೇಳಿಕೆಯಿಂದ ವಿಜಯಲಕ್ಷ್ಮೀ ಅವರು ತನಿಖೆ ಎದುರಿಸುವ ಸಾಧ್ಯತೆ ಹೆಚ್ಚಾಗಿದೆ.
