ಹೌಸ್​ಫುಲ್ ಪ್ರದರ್ಶನ ಕಾಣ್ತಿದೆ ಅಕ್ಷಯ್​ ಹೌಸ್​ಫುಲ್​-5

ಸೋಲಿನ ಮಧ್ಯೆ ಅಕ್ಷಯ್ ಕುಮಾರ್‌ಗೆ ಗೆಲುವಿನ ಸಿಂಚನ

0 (6)

ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿರುವ ಅಕ್ಷಯ್ ಕುಮಾರ್​ಗೆ ‘ಹೌಸ್​ಫುಲ್-5’ ಸಿನಿಮಾ ಹೌಸ್​ ಫುಲ್ ಪ್ರದರ್ಶನದಿಂದ ಬಾಕ್ಸ್ ಆಫೀಸ್‌‌ನಲ್ಲಿ ಬಿಗ್ ಸೌಂಡ್ ಮಾಡ್ತಿದೆ. ಎಂಟರ್‌‌ಟೈನ್ಮೆಂಟ್ ಕಿಕ್ ಕೊಡ್ತಿರೋ ಬಾಲಿವುಡ್ ಕಿಲಾಡಿಗೆ ಹಣದ ಹೊಳೆ ಹರಿದು ಬರ್ತಿದೆ. ಹೌಸ್‌ಫುಲ್-5 ಚಿತ್ರ ಕೇವಲ ನಾಲ್ಕೇ ದಿನದಲ್ಲಿ ನೂರಾರು ಕೋಟಿಯ ಗಡಿ ದಾಟಿದೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಕೆಲ ವರ್ಷಗಳಿಂದ ಅಕ್ಷಯ್ ಕುಮಾರ್ ಗೆ ಅದೃಷ್ಟ ಕೈ ಕೊಟ್ಟಿದೆ. ಒಂದಾದ ಮೇಲೊಂದು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸೋಲನ್ನು ಕಂಡಿವೆ. ಹಿಂದೆಯೆಲ್ಲಾ ಇವರನ್ನು ಲಕ್ಕಿ ಕುಮಾರ್ ಎಂದು ಕರೆಯುತ್ತಿದ್ದ ಬಾಲಿವುಡ್‌ ಈಗ ಅಕ್ಷಯ್ ನ ಅನ್‌ಲಕ್ಕಿ ಕುಮಾರ್ ಅಂತಲೇ ಕರೆಯುತ್ತಿದೆ. ಸದ್ಯ ಭಾರೀ ನಿರೀಕ್ಷೆ ಹೊತ್ತು ಥಿಯೇಟರ್ ಗೆ ಬಂದಿರುವ ಹೌಸ್ ಫುಲ್ ಫ್ರಾಂಚೈಸ್‌ನ 5ನೇ ಸಿನಿಮಾ ಈ ಬಾರಿಯಾದರೂ ಅಕ್ಷಯ್‌ ಕುಮಾರ್‌ಗೆ ಗೆಲುವು ತಂದು ಕೊಟ್ಟಿದಿಯಾ? ಹಾಸ್ಯದ ರಸದೌತಣ ಬಡಿಸುವಲ್ಲಿ ಅಕ್ಷಯ್ ಕುಮಾರ್ & ಗ್ಯಾಂಗ್ ಯಶಸ್ವಿಯಾಗಿದೆಯಾ..?

ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್, ಅಭಿಷೇಕ್ ಬಚ್ಚನ್, ಸಂಜಯ್ ದತ್, ಜಾಕಿ ಶ್ರಾಫ್, ನಾನಾ ಪಾಟೇಕರ್, ಜಾಕ್ವೆಲಿನ್ ಫರ್ನಾಂಡಿಸ್, ಸೋನಮ್ ಬಾಜ್ವಾ, ನರ್ಗಿಸ್ ಫಕ್ರಿ, ಸೌಂದರ್ಯಾ ಶರ್ಮಾ, ಚಿತ್ರಾಂಗದಾ ಸಿಂಗ್ ಹೀಗೆ ದೊಡ್ಡ ತಾರಾಗಣ ತಮ್ಮ ಅಭಿನಯದಿಂದ, ನೋಡುಗರನ್ನ ನಕ್ಕು ನಗಿಸುವಲ್ಲಿ ಗೆದ್ದಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಹೌಸ್ ಫುಲ್ 5 ಚಿತ್ರಕ್ಕೆ ಪ್ರೇಕ್ಷಕರಿಂದ ಬೊಂಬಾಟ್ ಪ್ರತಿಕ್ರಿಯೆ ಸಿಕ್ಕಿದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಹೌಸ್‌ಫುಲ್ 5 ಚಿತ್ರ ಕೇವಲ ನಾಲ್ಕೇ ದಿನದಲ್ಲಿ 142 ಕೋಟಿಯ ಗಡಿಯನ್ನು ದಾಟಿದೆ.

ಇನ್ನು ಅಕ್ಷಯ್​ ಕುಮಾರ್ ಮಾಸ್ಕ್​ ಹಾಕಿಕೊಂಡು ಚಿತ್ರಮಂದಿರಗಳ ಬಳಿ ಹೋಗಿ ತಮ್ಮ ಸಿನಿಮಾ ವಿಮರ್ಶೆಯನ್ನು ಜನರಿಂದ ತಾವೇ ಪಡೆದಿದ್ದಾರೆ. ಹೌಸ್​ಫುಲ್ 5 ಸಿನಿಮಾನಲ್ಲಿ ವಿಲನ್ ಧರಿಸಿರುವ ಮಾಸ್ಕ್ ಅನ್ನೇ ಅಕ್ಷಯ್ ಕುಮಾರ್ ಧರಿಸಿ, ಜನರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಹಲವಾರು ಮಂದಿಯನ್ನು ಅಕ್ಷಯ್ ಅಭಿಪ್ರಾಯ ಕೇಳಿದ್ದಾರೆ. ಇನ್ನೂ ಆ ವಿಡಿಯೋ ಅನ್ನು ತಮ್ಮ ಇನ್​ಸ್ಟಾ ಖಾತೆಯಲ್ಲಿ ಹಂಚಿಕೊಂಡಿರುವ ಅಕ್ಷಯ್ ಕುಮಾರ್, ‘ಬಾಂದ್ರಾನಲ್ಲಿ ಜನರಿಂದಲೇ ನಮ್ಮ ‘ಹೌಸ್​ಫುಲ್ 5’ ಸಿನಿಮಾದ ವಿಮರ್ಶೆ ಕೇಳಿದೆ. ಆರಂಭದಲ್ಲಿ ಯಾರೂ ಗುರುತು ಹಿಡಿಯಲಿಲ್ಲ. ಆದರೆ ಕೆಲವರಿಗೆ ಗೊತ್ತಾಗಿಬಿಡ್ತು. ಎಲ್ಲರೂ ಮುತ್ತಿಕೊಳ್ಳುವ ಮೊದಲೇ ಅಲ್ಲಿಂದ ಪರಾರಿ ಆದೆ’ ಎಂದು ಬರೆದುಕೊಂಡಿದ್ದಾರೆ.

ಹೌಸ್​ಫುಲ್-5 ಮುಂದೆ ಠುಸ್ ಆಯ್ತು ಥಗ್ ಲೈಫ್

ಅಕ್ಷಯ್ ಆರ್ಭಟದ ಎದುರು ಕಮಲ್ ಕಂಗಾಲು..!

ಒಂದ್ಕಡೆ ಹೌಸ್‌ಫುಲ್-5 ಕೇವಲ ನಾಲ್ಕು ದಿನದಲ್ಲಿ 142 ಕೋಟಿ ರೂಪಾಯಿ ಬೃಹತ್ ಹಣವನ್ನು ಗಳಿಸಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ಅದೇ ಮತ್ತೊಂದು ಕಡೆ ಹೌಸ್‌ಫುಲ್ 5 ಬಿಡುಗಡೆಯಾಗುವ ಒಂದು ದಿನದ ಮೊದಲು ಬಿಡುಗಡೆಯಾದ ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಬಾಕ್ಸಾಫೀಸ್‌ನಲ್ಲಿ ತೆವಳುತ್ತಾ ಸಾಗಿದೆ. ಬಿಡುಗಡೆಯಾಗಿ ಐದು ದಿನ ಕಳೆದರೂ ಕೂಡ ಈ ಚಿತ್ರ ಇನ್ನೂ 50 ಕೋಟಿಯ ಗಡಿ ಕೂಡ ತಲುಪಿಲ್ಲ.

ಒಟ್ಟಾರೆ ಸತತ ಸೋಲಿನ ನಡುವೆ ಅಕ್ಷಯ್ ಕುಮಾರ್ ಗೆ ಗೆಲುವಿನ ಹಸಿವಿತ್ತು. ಆ ಗೆಲುವು ಕೊನೆಗೂ ಅಕ್ಷಯ್ ಪಾಲಾಗಿದೆ. 142ಕ್ಕೂ ಅಧಿಕ ಕೋಟಿ ಗಳಿಸೋ ಮೂಲಕ ಹೌಸ್ ಫುಲ್-5 ಥಗ್ ಲೈಫ್ ಎದುರು ಅಬ್ಬರಿಸಿ ಬೊಬ್ಬಿರಿದಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version