ಕಳೆದ ವರ್ಷ ಬ್ಲಾಕ್ ಬಸ್ಟರ್ ಹಿಟ್ ನೀಡಿದ ಗೋಲ್ಡನ್ ಸ್ಟಾರ್ ಗಣೇಶ್, ಈ ಬಾರಿ ಫ್ಯಾನ್ಸ್‌ಗೆ ನಿರಾಸೆ ಮೂಡಿಸಿದ್ದಾರೆ. ದೊಡ್ಡದೊಂದು ಪತ್ರದ ಮೂಲಕ ಗೋಲ್ಡನ್ ಫ್ಯಾನ್ಸ್‌ಗೆ ಸ್ಪೆಷಲ್ ರಿಕ್ವೆಸ್ಟ್ ಮಾಡಿದ್ದಾರೆ ಕಿಂಗ್ ಆಫ್ ಎಕ್ಸ್‌ಪ್ರೆಷನ್ಸ್. ಇಷ್ಟಕ್ಕೂ ಗಣಿಯ ಮನವಿ ಏನು..?
ಸ್ಯಾಂಡಲ್‌ವುಡ್‌ನ ಒನ್ ಅಂಡ್ ಓನ್ಲಿ ಕಿಂಗ್ ಆಫ್ ಎಕ್ಸ್‌ಪ್ರೆಷನ್ಸ್ ಗೋಲ್ಡನ್ ಸ್ಟಾರ್ ಗಣೇಶ್. ನಮಸ್ಕಾರ ನಮಸ್ಕಾರ ನಮಸ್ಕಾರ ಅಂತ ಬಂದವ್ರು, ಸಣ್ಣಪುಟ್ಟ ರೋಲ್‌ಗಳನ್ನ ಮಾಡುತ್ತಲೇ ಚೆಲ್ಲಾಟ ಶುರು ಮಾಡಿದ್ರು. ಮುಂಗಾರುಮಳೆಯಲ್ಲಿ ಮಿಂದೆದ್ದು, ಗಾಳಿಪಟ ಹಾರಿಸಿ, ಅರಮನೆಯಲ್ಲಿ ಚೆಲುವಿನ ಚಿತ್ತಾರ ಬಿಡಿಸಿದ ಬೊಂಬಾಟ್ ರೋಮಿಯೋಗೆ ಈಗ 46 ವರ್ಷ. ಇದೇ ಜುಲೈ 2ಕ್ಕೆ 47ನೇ ವಸಂತಕ್ಕೆ ಕಾಲಿಡ್ತಿರೋ ಗಣೇಶ್ ಫ್ಯಾನ್ಸ್‌ಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ಕಳೆದ ವರ್ಷದಂತೆ ಈ ವರ್ಷವೂ ತಾನು ಮನೆಯಲ್ಲಿ ಇರಲ್ಲ. ಹಾಗಾಗಿ ದೂರದ ಊರುಗಳಿಂದ ಬರುವಂತಹ ಫ್ಯಾನ್ಸ್ ದಯವಿಟ್ಟು ಮನೆಯ ಬಳಿ ಬರಬೇಡಿ. ನನಗೂ ನಿಮ್ಮನ್ನೆಲ್ಲಾ ಭೇಟಿ ಆಗೋಕೆ ಇಷ್ಟ. ಆದ್ರೆ ಒಂದಲ್ಲ ಎರಡೆರಡು ಸಿನಿಮಾಗಳ ಔಟ್‌ಡೋರ್ ಶೂಟಿಂಗ್‌ನಲ್ಲಿ ಇರೋದ್ರಿಂದಾಗಿ ಮನೆಯ ಬಳಿ ಹುಟ್ಟು ಹಬ್ಬ ಆಚರಿಸಿಕೊಳ್ತಿಲ್ಲ ಅಂತ ಪೋಸ್ಟ್ ಮಾಡಿದ್ದಾರೆ. ಗೋಲ್ಡನ್ ಸ್ಟಾರ್ ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿ ಫ್ಯಾನ್ಸ್ ಸಖತ್ ಬೇಸರಗೊಂಡಿದ್ದಾರೆ. ಪ್ರತೀ ವರ್ಷ ತಮ್ಮ ನೆಚ್ಚಿನ ನಾಯಕನಟ ಹೀಗೆ ಮಾಡ್ತಿರೋದಕ್ಕೆ ದಯವಿಟ್ಟು ಸಿಗಿ ಅಂತೆಲ್ಲಾ ಕಮೆಂಟ್ಸ್ ಮಾಡ್ತಿದ್ದಾರೆ.
ಅಂದಹಾಗೆ ಕೊರೋನಾಗೆ ಮೊದಲಿನಿಂದಲೂ ಗಣೇಶ್ ಅವರು ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ಳೋದನ್ನ ನಿಲ್ಲಿಸಿದ್ದಾರೆ. ಫ್ಯಾಮಿಲಿ, ಫ್ರೆಂಡ್ಸ್ ಹಾಗೂ ಹಿತೈಷಿಗಳೊಂದಿಗೆ ಮಾತ್ರ ಕೇಕ್ ಕಟ್ ಮಾಡಿ, ಸರಳವಾಗಿ ಜನುಮ ದಿನವನ್ನು ಆಚರಿಸಿಕೊಳ್ತಿದ್ದು, ಅದ್ಧೂರಿ ಸೆಲೆಬ್ರೇಷನ್‌ಗೆ ಬ್ರೇಕ್ ಹಾಕಿದ್ದಾರೆ. ಪಿನಾಕ ಹಾಗೂ ರಮೇಶ್ ಅರವಿಂದ್ ಜೊತೆಗಿನ ಯುವರ್ಸ್ ಸಿನ್ಸಿಯರ್ಲಿ ರಾಮ್ ಸಿನಿಮಾಗಳ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿರೋ ಗಣಿ, ಅದಕ್ಕಾಗಿ ಡೇ ಅಂಡ್ ನೈಟ್ ಎಫರ್ಟ್ ಹಾಕ್ತಿದ್ದಾರೆ.
ಇನ್ನು ಕಳೆದ ವರ್ಷ ಕೃಷ್ಣಂ ಪ್ರಣಯ ಸಖಿ ಚಿತ್ರ ಇಂಡಸ್ಟ್ರಿ ಹಿಟ್ ಅನಿಸಿಕೊಂಡಿತ್ತು. 20 ಕೋಟಿಯಲ್ಲಿ ತಯಾರಾಗಿದ್ದ ಶ್ರೀನಿವಾಸ್ ರಾಜು ನಿರ್ದೇಶನದ ಕೃಷ್ಣಂ ಪ್ರಣಯ ಸಖಿ, ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿಗೂ ಅಧಿಕ ಮೊತ್ತದ ಹಣವನ್ನು ಕಲೆಕ್ಷನ್ ಮಾಡಿತ್ತು. ಅಲ್ಲದೆ ದ್ವಾಪರ ಸಾಂಗ್ 124 ಮಿಲಿಯನ್ ವೀವ್ಸ್‌ನಿಂದ ಸಂಚಲನ ಸೃಷ್ಠಿಸಿತ್ತು.
ಗಾಳಿಪಟ-2 ಹಾಗೂ ಕೃಷ್ಣಂ ಪ್ರಣಯ ಸಖಿ ಚಿತ್ರಗಳಿಂದ ಪ್ರೇಕ್ಷಕರಿಗೆ ನಿರೀಕ್ಷೆಗೂ ಮೀರಿದ ಮನರಂಜನೆ ನೀಡಿದ್ದ ಗೋಲ್ಡನ್ ಸ್ಟಾರ್, ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡಿದ್ದಾರೆ. ಸಾಕಷ್ಟು ಸಿನಿಮಾಗಳು ಮನೆಯ ಬಾಗಿಲಿಗೆ ಬರ್ತಿದ್ದು, ಕಥೆಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ ಗೋಲ್ಡನ್ ಸ್ಟಾರ್. ಸಿನಿಮಾಗಳ ಜೊತೆ ಜೊತೆಗೆ ಫ್ಯಾನ್ಸ್‌ಗೂ ಸಮಯ ಮೀಸಲಿಟ್ಟರೆ ಒಳಿತು ಅನ್ನೋದು ಚಿತ್ರಪ್ರೇಮಿಗಳ ಅಭಿಪ್ರಾಯ.