4.5 ರೇಟಿಂಗ್..ರಾಕಿಭಾಯ್‌‌ಗೆ ಮಹೇಶ್ ಬಾಬು ಪುತ್ರ ರಾಯಲ್ ಸೆಲ್ಯೂಟ್

ಟಾಕ್ಸಿಕ್‌‌ನ ಟೀಕಿಸಿದ್ದ ಗೌತಮ್ ಈಗ ರಾಮಾಯಣಕ್ಕೆ ಮೆಚ್ಚುಗೆ

Untitled Design 2026 11 12T181156.092

ಅಂದು ನಮ್ಮ ರಾಕಿ ಭಾಯ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರಕ್ಕೆ ಬರೀ ಅರ್ಧ ಸ್ಟಾರ್ ಕೊಟ್ಟು ಸ್ಯಾಂಡಲ್‌ವುಡ್ ಅಂಗಳದಲ್ಲಿ ಬೆಂಕಿ ಹಚ್ಚಿದ್ದ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಪುತ್ರ ಗೌತಮ್ ಘಟ್ಟಮನೇನಿ, ಈಗ ಅದೇ ಯಶ್ ನಟನೆಗೆ ಫುಲ್ ಫಿದಾ ಆಗಿದ್ದಾರೆ. ಯೆಸ್,  ರಾಮಾಯಣ ಸಿನಿಮಾ ನೋಡಿದ ಗೌತಮ್, ಸ್ವತಃ ತನ್ನ ತಂದೆ ಮಹೇಶ್ ಬಾಬು ಸಿನಿಮಾಗಳಿಗೂ ಕೊಡದಷ್ಟು ಬಂಪರ್ ರೇಟಿಂಗ್ ಕೊಟ್ಟು ಸಖತ್ ಶಾಕ್ ನೀಡಿದ್ದಾರೆ. ಅಷ್ಟಕ್ಕೂ ರಾವಣನ ಪಾತ್ರದಲ್ಲಿ ಯಶ್ ಅಬ್ಬರ ಕಂಡು ಗೌತಮ್ ಹೇಳಿದ್ದೇನು..? ಈ ರಿಪೋರ್ಟ್ ನೋಡಿ.

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಪುತ್ರ ಗೌತಮ್ ಘಟ್ಟಮನೇನಿ ತಮ್ಮ ಕಟ್ಟುನಿಟ್ಟಿನ ಹಾಗೂ ನೇರಾನೇರ ಸಿನಿಮಾ ವಿಮರ್ಶೆಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಚಿತ್ರಕ್ಕೆ ಕೇವಲ 1 ಸ್ಟಾರ್ ಕೊಟ್ಟು ಸುದ್ದಿಯಾಗಿದ್ದ ಗೌತಮ್, ಈಗ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರಕ್ಕೆ ಬರೋಬ್ಬರಿ 5 ಕ್ಕೆ 4.5 ಭರ್ಜರಿ ರೇಟಿಂಗ್ ನೀಡಿದ್ದಾರೆ. ಅಚ್ಚರಿಯ ವಿಷಯವೆಂದರೆ, ಗೌತಮ್ ಇದುವರೆಗೂ ತಮ್ಮ ತಂದೆ ಮಹೇಶ್ ಬಾಬು ಅವರ ಯಾವುದೇ ಚಿತ್ರಕ್ಕೂ 4.5 ರೇಟಿಂಗ್ ನೀಡಿಲ್ಲ, ಕೇವಲ ಹಾಲಿವುಡ್ ಕ್ಲಾಸಿಕ್ ಚಿತ್ರಗಳಿಗೆ ಮಾತ್ರ ಈ ಮಟ್ಟದ ಅಂಕ ನೀಡಿದ್ದ ಅವರು ಈಗ ‘ರಾಮಾಯಣ’ ಕಂಡು ಆಶ್ಚರ್ಯಚಕಿತರಾಗಿದ್ದಾರೆ.

ತಮ್ಮ ವಿಮರ್ಶೆಯಲ್ಲಿ ಸಿನಿಮಾದ ದೃಶ್ಯ ವೈಭವ ಹಾಗೂ ರಣಬೀರ್ ಕಪೂರ್ ಅವರ ಶ್ರೀರಾಮನ ಪಾತ್ರವನ್ನು ಮೆಚ್ಚಿಕೊಂಡಿರುವ ಗೌತಮ್, ರಾವಣನಾಗಿ ಅಬ್ಬರಿಸಿರುವ ನಮ್ಮ ರಾಕಿ ಭಾಯ್ ಯಶ್ ಅವರ ನಟನೆಗೆ ಮನಸೋತಿದ್ದಾರೆ. “ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ, ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ರಾವಣನ ಪಾತ್ರದಲ್ಲಿ ಯಶ್ ಅವರ ಅಭಿನಯ ‘ಅನನ್ಯ’ ಆಗಿದೆ, ನಿಜಕ್ಕೂ ಅದ್ಭುತ” ಎಂದು ಮುಕ್ತಕಂಠದಿಂದ ಕೊಂಡಾಡಿದ್ದಾರೆ. ಈ ಮೂಲಕ ಯಶ್ ಅವರ ನಟನಾ ಸಾಮರ್ಥ್ಯಕ್ಕೆ ಟಾಲಿವುಡ್ ಪ್ರಿನ್ಸ್ ಪುತ್ರನೂ ಕ್ಲೀನ್ ಬೌಲ್ಡ್ ಆಗಿದ್ದಾರೆ.

ಕೇವಲ ನಟನೆ ಮಾತ್ರವಲ್ಲದೆ ಚಿತ್ರದ ತಾಂತ್ರಿಕ ಶ್ರೀಮಂತಿಕೆ ಹಾಗೂ ಸಂಗೀತಕ್ಕೂ ಗೌತಮ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಎ.ಆರ್. ರೆಹಮಾನ್ ಅವರ ಸೊಗಸಾದ ಹಾಡುಗಳು ಹಾಗೂ ಹಾಲಿವುಡ್ ದಿಗ್ಗಜ ಹ್ಯಾನ್ಸ್ ಜಿಮ್ಮರ್ ಅವರ ಅಮೋಘ ಹಿನ್ನೆಲೆ ಸಂಗೀತ ತಮ್ಮನ್ನು ಸೆಳೆದಿದೆ ಎಂದು ಬರೆದುಕೊಂಡಿದ್ದಾರೆ. ಸಿನಿಮಾದ ಅವಧಿ ಸ್ವಲ್ಪ ಹೆಚ್ಚಾಯಿತು ಎನಿಸಿದರೂ, ಚಿತ್ರದ ಓಟ ಎಲ್ಲಿಯೂ ಕಿರಿಕಿರಿ ಎನಿಸಲೇ ಇಲ್ಲ, ಇದು ಭಾರತೀಯ ಚಿತ್ರರಂಗದ ನಿಜವಾದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದು ಶ್ಲಾಘಿಸಿದ್ದಾರೆ.

ಗೌತಮ್ ಅವರ ಈ 4.5 ರೇಟಿಂಗ್ ಇಷ್ಟೊಂದು ವೈರಲ್ ಆಗಲು ಮುಖ್ಯ ಕಾರಣ ಈ ಹಿಂದಿನ ವಿವಾದ. ಕಳೆದ ಆಗಸ್ಟ್‌ನಲ್ಲಿ ಬಿಡುಗಡೆಯಾಗಿದ್ದ ಯಶ್ ಅವರ ‘ಟಾಕ್ಸಿಕ್’ ಚಿತ್ರಕ್ಕೆ ಗೌತಮ್ ಕೇವಲ 0.5 ರೇಟಿಂಗ್ ಅರ್ಧ ಸ್ಟಾರ್ ಕೊಟ್ಟು ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರಿ ಚರ್ಚೆ ಮತ್ತು ಟ್ರೋಲ್‌ಗಳು ನಡೆದಿದ್ದವು. ಆದರೆ ಈಗ ಅದೇ ಯಶ್ ಅವರ ‘ರಾಮಾಯಣ’ ಚಿತ್ರಕ್ಕೆ 4.5 ಸ್ಟಾರ್ ನೀಡಿರುವುದು ಅಭಿಮಾನಿಗಳ ಹಳೆಯ ಕೋಪವನ್ನು ತಣ್ಣಗಾಗಿಸಿದೆ.

ಗೌತಮ್ ಘಟ್ಟಮನೇನಿ ಯಾವುದೇ ಸ್ಟಾರ್‌ಗಿರಿ ಅಥವಾ ಮುಲಾಜಿಗೆ ಒಳಗಾಗದೆ ಸಿನಿಮಾದ ಗುಣಮಟ್ಟವನ್ನಷ್ಟೇ ನೋಡಿ ರೇಟಿಂಗ್ ನೀಡುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ವಿಶೇಷವೆಂದರೆ, ಈ ಹಿಂದೆ ಸ್ವತಃ ತಮ್ಮ ತಂದೆ ಮಹೇಶ್ ಬಾಬು ಅವರ ಫ್ಲಾಪ್ ಸಿನಿಮಾ ಬ್ರಹ್ಮೋತ್ಸವಂ ಚಿತ್ರಕ್ಕೂ ಗೌತಮ್ ಕೇವಲ 1 ಸ್ಟಾರ್ ರೇಟಿಂಗ್ ಕೊಟ್ಟು ಅಚ್ಚರಿ ಮೂಡಿಸಿದ್ದರು. ಒಟ್ಟಿನಲ್ಲಿ ಹೀರೋ ಯಾರೇ ಆಗಿರಲಿ, ಕಂಟೆಂಟ್ ಚೆನ್ನಾಗಿದ್ದರೆ ಮಾತ್ರ ಗೌತಮ್ ಮನಸ್ಸು ಗೆಲ್ಲಲು ಸಾಧ್ಯ ಎಂಬುದು ಮತ್ತೊಮ್ಮೆ ಪ್ರೂವ್ ಆಗಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
Exit mobile version