ಬೃಂದಾವಿಹಾರಿ ಬತ್ತಳಿಕೆಯಿಂದ ಮತ್ತೊಂದು ಪ್ರೇಮ ನಿವೇದನೆಯ ಗೀತೆ ಹೊರಬಂದಿದೆ. ಯೆಸ್.. ರಾಗ, ತಾಳ, ಭಾಷೆ ಮೀರಿದ ಭಾವ ಈ ‘ಬೃಂದಾವಿಹಾರಿ’ಯ ಪ್ರೀತಿ ಅನ್ನೋದು ಇದ್ರಿಂದ ಪ್ರೂವ್ ಆಗಿದೆ. ಅಂದಹಾಗೆ ಈ ಬಾರಿ ಪ್ಯಾಲೇಸ್ ಗ್ರೌಂಡ್‌ನಲ್ಲಿ ಬಿಗ್ ಇವೆಂಟ್ ಮೂಲಕ ಈ ಹಾಡು ಲಾಂಚ್ ಆಗಿದ್ದು ವಿಶೇಷ. ದಸರಾ ಧಮಾಕ ಮಾಡೋಕೆ ಬರ್ತಿರೋ ಗೋಲ್ಡನ್ ಮೆಗಾಸ್ಟಾರ್ ಗಣೇಶ್‌ರ ಎಮೋಷನಲ್ ಫ್ಯಾಮಿಲಿ ಡ್ರಾಮಾದ ಕಲರ್‌ಫುಲ್ ಖಬರ್ ನಿಮಗಾಗಿ.
- ರಾಗ, ತಾಳ, ಭಾಷೆ ಮೀರಿದ ಭಾವ.. ‘ಬೃಂದಾವಿಹಾರಿ’ ಪ್ರೀತಿ
- ಅರಮನೆಯ ಆವರಣದಲ್ಲಿ ಐದನೇ ಗೀತೆ ಅದ್ಧೂರಿ ಲಾಂಚ್
- ಈ ಹಾಡಿನ ಸಾಹಿತ್ಯಕ್ಕೆ ಕವಿರತ್ನ ತೆಗೆದುಕೊಂಡಿದ್ದು 60 ದಿನ
- ದಸರಾಗೆ ಗೋಲ್ಡನ್ ಮೆಗಾಸ್ಟಾರ್ ಫ್ಯಾಮಿಲಿ ಡ್ರಾಮಾ ತೆರೆಗೆ
ಬೃಂದಾವಿಹಾರಿ.. ಗೋಲ್ಡನ್ ಮೆಗಾಸ್ಟಾರ್ ಗಣೇಶ್ ಹಾಗೂ ಶ್ರೀನಿವಾಸ್ ರಾಜು ಕಾಂಬೋನ ಎರಡನೇ ಸಿನಿಮಾ. ಕೃಷ್ಣಂ ಪ್ರಣಯ ಸಖಿಯಂತೆ ಈ ಬಾರಿಯೂ ಮ್ಯೂಸಿಕ್ ವಿತ್ ಎಮೋಷನ್ಸ್ ಜೊತೆ ಆಟ ಆಡೋಕೆ ಬರ್ತಿದ್ದಾರೆ ಗಣಿ. ಸಮೃದ್ಧಿ ಮಂಜುನಾಥ್ ಈ ಸಿನಿಮಾನ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದು, ನಾಲ್ಕು ಹಾಡುಗಳು ಈಗಾಗ್ಲೇ ಚಿತ್ರಪ್ರೇಮಿಗಳ ಕಣ್ಮನ ತಣಿಸಿವೆ. ಇದೀಗ ಐದನೇ ಹಾಡು ಕೂಡ ಹೊರಬಂದಿದೆ. ಯೆಸ್.. ಒಂದೇ ಒಂದು ಅನ್ನೋ ಈ ಪ್ರೇಮ ನಿವೇದನೆಯ ಗೀತೆ ಅರಮನೆ ಆವರಣದಲ್ಲಿ ಗ್ರ್ಯಾಂಡ್ ಆಗಿ ಲಾಂಚ್ ಆಗಿದೆ.
ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅವ್ರ ಪತ್ನಿ ಪದ್ಮ ಮಂಜುನಾಥ್ ಬಿಡುಗಡೆ ಮಾಡಿದ ಈ ಹಾಡಿಗೆ ಕವಿರತ್ನ ಡಾ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಪೋಣಿಸಿದ್ದು, ಮುತ್ತುಗಳನ್ನ ಜೋಡಿಸಿದಂತಿದೆ ಪದಪುಂಜ. ಅದಕ್ಕಾಗಿ ಅವರು ಬರೋಬ್ಬರಿ 2 ತಿಂಗಳು ಸಮಯ ತೆಗೆದುಕೊಂಡು ಈ ಹಾಡನ್ನ ರಚಿಸಿದ್ದಾರೆ. ಕೆ ಎಸ್ ಚಿತ್ರ ಹಾಗೂ ಜಸ್ಕರಣ್ ಸಿಂಗ್ ಕಂಠದಲ್ಲಿ ಅಷ್ಟೇ ಸೊಗಸಾಗಿ ಮೂಡಿಬಂದಿದೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿಮಗೆ ಎ ಆರ್ ರೆಹಮಾನ್‌ರ ಸಿಗ್ನೇಚರ್ ಮ್ಯೂಸಿಕ್‌ನ ನೆನಪಿಸುವಂತಿದೆ.
ಗೋಲ್ಡನ್ ಮೆಗಾಸ್ಟಾರ್ ಗಣೇಶ್ ಹಾಗೂ ದೇವಿಕಾ ಭಟ್ ಹೆಜ್ಜೆ ಹಾಕಿರೋ ಈ ಹಾಡು ಅಕ್ಷರಶಃ ರಾಧಾ-ಕೃಷ್ಣರ ಪ್ರೇಮ ನಿವೇದನೆಯ ಕನ್ನಡಿಯಂತಿದೆ. ಅಕ್ಟೋಬರ್ 16ರಂದು ನಾಡಹಬ್ಬ ದಸರಾ ವಿಶೇಷ ಈ ಚಿತ್ರ ತೆರೆಗೆ ಬರಲಿದೆ. ಈ ಕುರಿತು ಮಾತನಾಡಿದ ಗಣೇಶ್.. ಈ ಹಾಡನ್ನು ನೋಡಿದವ್ರು ನೀವು ತುಂಬಾ ಮುದ್ದಾಗಿ ಕಾಣುತ್ತೀರಾ ಹಾಗೂ ಅಭಿನಯ ಕೂಡ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ನಾನು ಎಲ್ಲವನ್ನು ಪ್ರೀತಿಯಿಂದ ಮಾಡುತ್ತೇನೆ. ಆದ್ರೆ ಅದು ತೆರೆಯ ಮೇಲೆ ಚೆನ್ನಾಗಿ ಕಾಣಲು ನೀವೆಲ್ಲಾ ನನ್ನ ಮೇಲಿಟ್ಟಿರುವ ಪ್ರೀತಿಯೇ ಕಾರಣ. ಆ ಪ್ರೀತಿ ಸದಾ ಇರಲಿ ಎಂದರು.
ಕ್ರಿಕೆಟ್‌ನಿಂದ ನಮ್ಮ ನಡುವೆ ಸ್ನೇಹ ಆರಂಭವಾಯಿತು. ನನ್ನನ್ನು ಚಿತ್ರರಂಗಕ್ಕೆ ಕರೆತಂದವರು ಗಣೇಶ್ ಅವ್ರೇ. ಈಗ ನಮ್ಮ ಸಂಸ್ಥೆಯ ನಿರ್ಮಾಣದ ಚಿತ್ರಕ್ಕೆ ಅವರೇ ನಾಯಕರಾಗಿರುವುದು ಬಹಳ ಖುಷಿಯಾಗಿದೆ. ಬೃಂದಾವಿಹಾರಿ ಒಂದೊಳ್ಳೆ ಕೌಟುಂಬಿಕ ಚಿತ್ರ. ಹಾಡುಗಳು ಒಂದಕ್ಕಿಂತ ಒಂದು ಅದ್ಭುತ. ಇಂದು ನಮ್ಮ ಸಮೃದ್ಧಿ ಸಂಸ್ಥೆಗೆ ಹದಿನೈದು ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಈ ಹಾಡು ಕೂಡ ಬಿಡುಗಡೆಯಾಗಿರುವುದು ಬಹಳ ಸಂತೋಷವಾಗಿದೆ. ಈ ಹಾಡನ್ನು ನಾನು ನಮ್ಮ ಸಮೃದ್ಧಿ ಸಂಸ್ಥೆಯ ಎಲ್ಲರಿಗೂ ಅರ್ಪಿಸುತ್ತೇನೆ ಅಂದ್ರು ನಿರ್ಮಾಪಕರು.
ಸಾಮಾನ್ಯವಾಗಿ 16ರಿಂದ 60 ವಯಸ್ಸಿನವರೆಗೂ ಎಲ್ಲಾ ಹೆಂಗಸರು ತಾವು ಪ್ರೀತಿಸುವ ಗಂಡಸರನ್ನು ಕೇಳುವ ಪ್ರಶ್ನೆ, ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರಾ..? ಎಂದು. ಅವರೆಲ್ಲರ ಪ್ರಶ್ನೆಗೆ ಉತ್ತರವಾಗಿ ಈ ಹಾಡು ಮೂಡಿಬಂದಿದೆ ಅಂದ್ರು ಡೈರೆಕ್ಟರ್.
ಈ ಚಿತ್ರ ಒಂಥರಾ ಮ್ಯೂಸಿಕಲ್ ಮ್ಯಾರಥಾನ್. ಯಾಕಂದ್ರೆ ಬರೋಬ್ಬರಿ ಏಳು ಹಾಡುಗಳಿವೆ. ವಿಶೇಷ ಅಂದ್ರೆ ಎಲ್ಲಾ ಹಾಡುಗಳನ್ನು ದ್ವಿರುಕ್ತಿ ಬಳಸಿ ಬರೆದಿದ್ದಾರೆ ನಾಗೇಂದ್ರ ಪ್ರಸಾದ್. “ರಾಮ ರಾಮ”, ” ರಾಧೆ ರಾಧೆ” ಹೀಗೆ. ಪ್ರಸ್ತುತ “ಒಂದೇ ಒಂದು” ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ತೆರೆಯ ಮೇಲೆ ನೋಡಿದ ಮೇಲೆ ಮನಸ್ಸು ತುಂಬಿ ಬಂದಿದೆ ಎಂದು ಗೀತರಚನೆಕಾರರಾದ ವಿ. ನಾಗೇಂದ್ರ ಪ್ರಸಾದ್ ಸಂತಸ ವ್ಯಕ್ತಪಡಿಸಿದ್ರು.
ಅದ್ಧೂರಿಯಾಗಿ ಅನಾವರಣವಾದ ಈ ಒಂದೇ ಒಂದು ಹಾಡಿನ ಕೆಲವು ಸಾಲುಗಳನ್ನು ಹಾಡುವ ಮೂಲಕ ಗಾಯಕ ಜಸ್ಕರಣ್ ಸಿಂಗ್ ಅಲ್ಲಿ ನೆರೆದಿದ್ದ ಜನಸಮೂಹವನ್ನು ರಂಜಿಸಿದ್ದು ಹೈಲೈಟ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
