ಕನ್ನಡ ಕಿರುತೆರೆಯ ಜನಪ್ರಿಯ ನಟ ಗಗನ್ ಚಿನ್ನಪ್ಪ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಗೆ ಪ್ರಮುಖ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ಹಲವು ಜನಪ್ರಿಯ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರ ಮನ ಗೆದ್ದಿರುವ ಗಗನ್, ಇದೇ ಮೊದಲ ಬಾರಿಗೆ ರಿಯಾಲಿಟಿ ಶೋ ವೇದಿಕೆಯಲ್ಲಿ ತಮ್ಮ ರಿಯಲ್ ವ್ಯಕ್ತಿತ್ವವನ್ನು ಅನಾವರಣಗೊಳಿಸಲು ಸಜ್ಜಾಗಿದ್ದಾರೆ. ಜೋಶ್ ಹಾಗೂ ಆತ್ಮವಿಶ್ವಾಸದಿಂದಲೇ ಅವರು ದೊಡ್ಮನೆಗೆ ಕಾಲಿಟ್ಟಿದ್ದು, ಅವರ ಎಂಟ್ರಿ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಗಗನ್ ಚಿನ್ನಪ್ಪ ಅವರ ಕಿರುತೆರೆ ಜರ್ನಿಯನ್ನು ಗಮನಿಸಿದರೆ, ‘ಮಂಗಳ ಗೌರಿ ಮದುವೆ’ ಧಾರಾವಾಹಿ ಅವರ ಮೊದಲ ಸೀರಿಯಲ್. ಈ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಅವರು, ನಂತರ ಹಲವು ಧಾರಾವಾಹಿಗಳಲ್ಲಿ ತಮ್ಮ ಅಭಿನಯದ ಮೂಲಕ ಗಮನ ಸೆಳೆದರು. ಆದರೆ ‘ಸೀತಾ ರಾಮ’ ಧಾರಾವಾಹಿ ಗಗನ್ ಅವರ ವೃತ್ತಿಜೀವನದಲ್ಲಿ ಪ್ರಮುಖ ತಿರುವು ನೀಡಿತು. ಈ ಧಾರಾವಾಹಿಯಲ್ಲಿ ಅವರು ನಿರ್ವಹಿಸಿದ ರಾಮ್ ಪಾತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿತ್ತು.
ರಾಮ್ ಪಾತ್ರದ ಮೂಲಕ ಕುಟುಂಬ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದ ಗಗನ್, ಇದೀಗ ಬಿಗ್ ಬಾಸ್ ಮನೆಯ ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಅಚ್ಚರಿ ಹಾಗೂ ಸಂತಸ ಎರಡನ್ನೂ ತಂದಿದೆ. ಇದುವರೆಗೆ ತೆರೆ ಮೇಲೆ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದ ಅವರು, ಬಿಗ್ ಬಾಸ್ ಮನೆಯಲ್ಲಿ ಯಾವುದೇ ಸ್ಕ್ರಿಪ್ಟ್ ಇಲ್ಲದೆ ತಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಗೆ ತೋರಿಸಲಿದ್ದಾರೆ ಎಂಬುದೇ ಪ್ರಮುಖ ಕುತೂಹಲವಾಗಿದೆ.
ಗ್ರ್ಯಾಂಡ್ ಓಪನಿಂಗ್ ವೇದಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರೊಂದಿಗೆ ಗಗನ್ ಮಾತುಕತೆ ನಡೆಸಿದರು. ಈ ವೇಳೆ ತಮ್ಮ ಬಿಗ್ ಬಾಸ್ ಜರ್ನಿ ಕುರಿತು ಮಾತನಾಡಿದ ಅವರು, ಇದು ಕೇವಲ ಸ್ಪರ್ಧೆಯಲ್ಲ, ಒಂದು ವಿಭಿನ್ನ ಅನುಭವ ಹಾಗೂ ಪ್ರಯಾಣ ಎಂದು ಅಭಿಪ್ರಾಯಪಟ್ಟರು. ಬಿಗ್ ಬಾಸ್ ಮನೆಯಲ್ಲಿನ ಪ್ರತಿಯೊಂದು ಸವಾಲನ್ನು ಎದುರಿಸಲು ತಾವು ಸಿದ್ಧವಾಗಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ವಿಶಿಷ್ಟ ಪರ್ಸನಾಲಿಟಿ, ಫಿಟ್‌ನೆಸ್ ಹಾಗೂ ಚಾರ್ಮಿಂಗ್ ಲುಕ್‌ನಿಂದಲೂ ಗಮನ ಸೆಳೆಯುವ ಗಗನ್, ಮನೆಯೊಳಗೆ ಯಾವ ರೀತಿಯ ಆಟ ಆಡಲಿದ್ದಾರೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ಟಾಸ್ಕ್‌ಗಳಲ್ಲಿ ಅವರ ಪ್ರದರ್ಶನ, ಇತರ ಸ್ಪರ್ಧಿಗಳೊಂದಿಗೆ ಹೊಂದಾಣಿಕೆ, ಸ್ನೇಹ ಹಾಗೂ ಮನಸ್ತಾಪಗಳು ಹೇಗಿರಲಿವೆ ಎಂಬುದನ್ನು ನೋಡಲು ವೀಕ್ಷಕರು ಕಾತರರಾಗಿದ್ದಾರೆ.
‘ನಾನು ಸಖತ್ ಮನರಂಜನೆ ಕೊಡುತ್ತೇನೆ’ ಎಂಬ ಭರವಸೆಯೊಂದಿಗೆ ಗಗನ್ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಹೀಗಾಗಿ ಕಿರುತೆರೆಯಲ್ಲಿ ನಾಯಕನಾಗಿ ಛಾಪು ಮೂಡಿಸಿರುವ ಗಗನ್ ಚಿನ್ನಪ್ಪ, ದೊಡ್ಮನೆಯ ಸವಾಲುಗಳನ್ನು ಎದುರಿಸಿ ವೀಕ್ಷಕರ ಹೃದಯ ಗೆಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
