‘ಬಿಗ್‌ಬಾಸ್ ಕನ್ನಡ ಸೀಸನ್ 13’ ಅದ್ಧೂರಿಯಾಗಿ ಆರಂಭವಾಗಿದ್ದು, ಮೊದಲ ದಿನವೇ ಸ್ಪರ್ಧಿಗಳ ಎಂಟ್ರಿ ಹಾಗೂ ಕಿಚ್ಚ ಸುದೀಪ್ ಅವರ ಮಾತುಗಳು ಪ್ರೇಕ್ಷಕರ ಗಮನ ಸೆಳೆದಿವೆ. ಹೊಸ ಸೀಸನ್‌ನ ಆರಂಭದಲ್ಲೇ ಸುದೀಪ್ ಅವರು ಬಿಗ್‌ಬಾಸ್ ಮನೆಯ ವಿಶೇಷ ವಿನ್ಯಾಸವನ್ನು ಪ್ರೇಕ್ಷಕರಿಗೆ ಪರಿಚಯಿಸುವ ಮೂಲಕ ಶೋಗೆ ಚಾಲನೆ ನೀಡಿದರು. ಬಳಿಕ ಮೊದಲ ಸ್ಪರ್ಧಿಯಾಗಿ ‘ಲವ್ ಮಾಕ್ಟೆಲ್ 3’ ಸಿನಿಮಾದಲ್ಲಿ ಹಾಸ್ಯ ಪಾತ್ರದ ಮೂಲಕ ಗಮನ ಸೆಳೆದಿರುವ ‘ಜಗ್ಗು ಮಮ್ಮಿ’ ಬಿಗ್‌ಬಾಸ್ ಮನೆಗೆ ಕಾಲಿಟ್ಟರು.
ವೇದಿಕೆಗೆ ಆಗಮಿಸಿದ ಜಗ್ಗು ಮಮ್ಮಿ ತುಸು ನರ್ವಸ್ ಆಗಿಯೇ ಕಿಚ್ಚ ಸುದೀಪ್ ಅವರೊಂದಿಗೆ ಮಾತನಾಡಿದರು. ಈ ವೇಳೆ, ‘ನಮ್ಮೂರಿನ ಜನ ನಿಮ್ಮ ಅಭಿಮಾನಿಗಳು, ಅವರಿಗೆ ಒಮ್ಮೆ ಹಾಯ್ ಹೇಳಿ’ ಎಂದು ಸುದೀಪ್ ಬಳಿ ಮನವಿ ಮಾಡಿದರು. ಆದರೆ ಇದಕ್ಕೆ ಸುದೀಪ್ ಅವರು ಗಂಭೀರವಾಗಿ ಪ್ರತಿಕ್ರಿಯಿಸಿ ಜಗ್ಗುಗೆ ಶಾಕ್ ನೀಡಿದರು.
‘ನೀವು ಬಿಗ್‌ಬಾಸ್ ನಿಯಮ ಮುರಿದಿದ್ದೀರಿ. ಬಿಗ್‌ಬಾಸ್‌ಗೆ ಬರುತ್ತಿರುವ ವಿಚಾರವನ್ನು ಯಾರಿಗೂ ಹೇಳುವಂತಿಲ್ಲ. ಆದರೆ ನೀವು ಇಡೀ ಊರಿನವರಿಗೆ ಹೇಳಿದ್ದೀರಿ. ಹೀಗಾಗಿ ನಿಮ್ಮನ್ನು ವಾಪಸ್ ಕಳುಹಿಸುತ್ತೇವೆ’ ಎಂದು ಸುದೀಪ್ ಹೇಳಿದರು. ಇದನ್ನು ಕೇಳಿದ ಜಗ್ಗು ಕೆಲಕಾಲ ಗಾಬರಿಯಿಂದ ನಿಂತುಬಿಟ್ಟರು.
ಬಳಿಕ ಸುದೀಪ್ ಅವರು, ‘ನೀವು ಜನರೊಂದಿಗೆ ಮಾತನಾಡಿ ಅವರನ್ನು ಒಪ್ಪಿಸಿ. ಅವರು ಒಪ್ಪಿಕೊಂಡರೆ ನಿಮ್ಮನ್ನು ಬಿಗ್‌ಬಾಸ್ ಮನೆಗೆ ಕಳುಹಿಸುತ್ತೇನೆ’ ಎಂದು ಹೇಳಿದರು. ಆದರೆ ಸುದೀಪ್ ಅವರು ಜಗ್ಗುಗೆ ಕಾಣದಂತೆ ಪ್ರೇಕ್ಷಕರಿಗೆ ‘ಆಗಲ್ಲ ಎಂದು ಹೇಳಿ’ ಎಂಬಂತೆ ಸನ್ನೆ ಮಾಡಿದರು. ಅದರಂತೆ ಜಗ್ಗು ಎಷ್ಟೇ ಮನವಿ ಮಾಡಿದರೂ ಪ್ರೇಕ್ಷಕರು ಒಪ್ಪಿಗೆ ನೀಡಲಿಲ್ಲ. ಜಗ್ಗು ಅವರ ಸ್ನೇಹಿತರೂ ಕೂಡ ‘ಆಗಲ್ಲ’ ಎಂದು ಹೇಳಿದ್ದರಿಂದ ಅವರು ಮತ್ತಷ್ಟು ಗಾಬರಿಗೊಂಡರು.
ನಂತರ ಸುದೀಪ್ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಿ ಜಗ್ಗು ಅವರ ವಿಡಿಯೋವನ್ನು ಪ್ರದರ್ಶಿಸಿದರು. ಇದರಿಂದ ಜಗ್ಗುಗೆ ಕೊಂಚ ಸಮಾಧಾನವಾಯಿತು. ತಮ್ಮ ಕುಟುಂಬದ ಕಷ್ಟಗಳ ಬಗ್ಗೆ ಮಾತನಾಡಿದ ಅವರು, ತಾವು ಬಡ ಕುಟುಂಬದಿಂದ ಬಂದಿದ್ದು, ಧರಿಸಿರುವ ಉಡುಪು ಕೂಡ ಸ್ನೇಹಿತನ ಮದುವೆಗೆಂದು ಪಡೆದಿದ್ದಾಗಿ ಹೇಳಿದರು. ‘ಹುಡುಗಿಯಂತೆ ಆಡುತ್ತಾನೆ’ ಎಂದು ಊರಿನವರು ಲೇವಡಿ ಮಾಡುತ್ತಾರೆ ಎಂಬ ನೋವನ್ನೂ ಹಂಚಿಕೊಂಡರು.
ಇದಲ್ಲದೆ, ಮನೆಯಲ್ಲಿನ ಆರ್ಥಿಕ ಸಂಕಷ್ಟದಿಂದ ಚಿನ್ನವನ್ನು ಅಡವಿಟ್ಟಿರುವುದಾಗಿ ಹಾಗೂ ಸುಮಾರು 2.50 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿರುವುದಾಗಿ ಜಗ್ಗು ಹೇಳಿದರು. ಬಿಗ್‌ಬಾಸ್ ಶೋನಲ್ಲಿ ಗೆದ್ದರೆ ಆ ಹಣದ ಸಮಸ್ಯೆ ಬಗೆಹರಿಸಿ ಅಡವಿಟ್ಟಿರುವ ಚಿನ್ನವನ್ನು ಬಿಡಿಸಿಕೊಳ್ಳುವುದಾಗಿ ಅವರು ಆಶಯ ವ್ಯಕ್ತಪಡಿಸಿದರು.
ಜಗ್ಗು ಅವರ ಮುಗ್ಧತೆ ಮತ್ತು ಆತ್ಮವಿಶ್ವಾಸದ ಕೊರತೆಯನ್ನು ಗಮನಿಸಿದ ಸುದೀಪ್, ಅವರಿಗೆ ಧೈರ್ಯ ತುಂಬಿದರು. ‘ನೀವು ಬಿಗ್‌ಬಾಸ್ ಮನೆಗೆ ಹೋದಾಗ ಯಾರೇ ಎದುರಿಗೆ ಸಿಕ್ಕರೂ, ನಾನು ಜಗ್ಗು, ಸೀಸನ್ 13ರ ವಿನ್ನರ್ ಎಂದು ಪರಿಚಯಿಸಿಕೊಳ್ಳಿ’ ಎಂದು ಸಲಹೆ ನೀಡಿದರು. ಅಲ್ಲದೆ, ವೇದಿಕೆಯಲ್ಲೇ ಜಗ್ಗು ಜೊತೆ ಹಲವು ಬಾರಿ ಅಭಿನಯಿಸಿ ಅವರಿಗೆ ರಿಹರ್ಸಲ್ ಕೂಡ ಮಾಡಿಸಿದರು.
ಕೊನೆಗೆ ಖುಷಿಯಿಂದ ಜಗ್ಗುಗೆ ಬೋರ್ಡಿಂಗ್ ಪಾಸ್ ನೀಡಿ ಸುದೀಪ್ ಬಿಗ್‌ಬಾಸ್ ಮನೆಯತ್ತ ಕಳುಹಿಸಿದರು. ಮೊದಲ ಸ್ಪರ್ಧಿಯಾಗಿಯೇ ಜಗ್ಗು ಮಮ್ಮಿ ನೀಡಿದ ಈ ಎಂಟ್ರಿ ಸೀಸನ್ 13ರ ಆರಂಭಕ್ಕೆ ವಿಶೇಷ ಮೆರುಗು ತಂದಿದೆ.
