ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ರಾಮಾಯಣ’ ಇದೀಗ ತನ್ನ ಅದ್ದೂರಿ ನಿರ್ಮಾಣ ಹಾಗೂ ಭಾರೀ ಪ್ರಚಾರ ಬಜೆಟ್‌ನಿಂದ ಮತ್ತೊಮ್ಮೆ ಸುದ್ದಿಯಲ್ಲಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಮಹತ್ವಾಕಾಂಕ್ಷಿ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿರುವುದು ಈಗಾಗಲೇ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ.
ಇದೀಗ ಚಿತ್ರದ ಪ್ರಚಾರಕ್ಕಾಗಿ ಮೀಸಲಿಡಲಾಗಿರುವ ಮೊತ್ತವೇ ಭಾರತೀಯ ಚಿತ್ರರಂಗವನ್ನು ಅಚ್ಚರಿಗೊಳಿಸಿದೆ. ವರದಿಗಳ ಪ್ರಕಾರ, ‘ರಾಮಾಯಣ’ ಚಿತ್ರದ ಜಾಗತಿಕ ಪ್ರಚಾರಕ್ಕಾಗಿ ಒಟ್ಟು ₹375 ಕೋಟಿ ವೆಚ್ಚ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇದರಲ್ಲಿ ಸೋನಿ ಪಿಕ್ಚರ್ಸ್ ಸಂಸ್ಥೆ ₹235 ಕೋಟಿ ಹೂಡಿಕೆ ಮಾಡುತ್ತಿದ್ದರೆ, ಚಿತ್ರದ ನಿರ್ಮಾಪಕರು ಹೆಚ್ಚುವರಿಯಾಗಿ ₹140 ಕೋಟಿ ಖರ್ಚು ಮಾಡಲಿದ್ದಾರೆ.
ಈ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಯಾವುದೇ ಸಿನಿಮಾದ ಪ್ರಚಾರಕ್ಕಾಗಿ ಇಷ್ಟೊಂದು ದೊಡ್ಡ ಮೊತ್ತವನ್ನು ಮೀಸಲಿಟ್ಟಿರುವುದು ಇದೇ ಮೊದಲ ಬಾರಿ ಎನ್ನಲಾಗುತ್ತಿದೆ. ಹಾಲಿವುಡ್ ಸಿನಿಮಾಗಳ ಮಾದರಿಯಲ್ಲಿ ‘ರಾಮಾಯಣ’ವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭರ್ಜರಿ ಬಿಡುಗಡೆ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ.
ಮೊದಲು ಜುಲೈ 24ರಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಯೋಜನೆ ಇತ್ತು. ಆದರೆ ಸೋನಿ ಪಿಕ್ಚರ್ಸ್ ಸಹಭಾಗಿತ್ವದ ಬಳಿಕ ಜಾಗತಿಕ ಮಟ್ಟದ ಪ್ರಚಾರ ತಂತ್ರವನ್ನು ರೂಪಿಸಲಾಗಿದ್ದು, ಟ್ರೇಲರ್ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ವರದಿಗಳು ತಿಳಿಸಿವೆ. ಟ್ರೇಲರ್ ಬಿಡುಗಡೆಯಾದ ಬಳಿಕ ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಇತ್ತೀಚೆಗೆ ಅಮೆರಿಕದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಕಾರ್ಯಕ್ರಮದಲ್ಲೂ ‘ರಾಮಾಯಣ’ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಚಿತ್ರದ ತಾಂತ್ರಿಕ ಗುಣಮಟ್ಟ, ಅದ್ಭುತ ದೃಶ್ಯ ವೈಭವ ಹಾಗೂ ವಿಶ್ವಮಟ್ಟದ ನಿರ್ಮಾಣ ಶೈಲಿ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಚಿತ್ರದಲ್ಲಿ ಅತ್ಯಾಧುನಿಕ ವಿಸ್ವಲ್ ಎಫೆಕ್ಟ್ಸ್ ಬಳಕೆಯಾಗುತ್ತಿದ್ದು, ಐಮ್ಯಾಕ್ಸ್ ಪರದೆಗಳಿಗಾಗಿ ವಿಶೇಷವಾಗಿ ರೂಪಿಸಲಾಗುತ್ತಿದೆ. ಸಂಗೀತ ಕ್ಷೇತ್ರದ ದಿಗ್ಗಜರಾದ ಎ.ಆರ್. ರೆಹಮಾನ್ ಹಾಗೂ ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಒಟ್ಟಾಗಿ ಸಂಗೀತ ನೀಡುತ್ತಿರುವುದು ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.
