ಬೆಂಗಳೂರು: ಕನ್ನಡ ಚಿತ್ರರಂಗದ ಮೇರುನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 27ರಂದು ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್‌ನಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆತ್ಮೀಯವಾಗಿ ಆಹ್ವಾನಿಸಲಾಗಿದೆ.
ಡಾ. ವಿಷ್ಣುವರ್ಧನ್ ಅವರಿಗೆ ರಾಜ್ಯದ ಅತ್ಯುನ್ನತ ನಾಗರಿಕ ಗೌರವವಾದ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಮರಣೋತ್ತರವಾಗಿ ಘೋಷಿಸುವ ಮಹತ್ವದ ತೀರ್ಮಾನ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿತ್ವದ ಅವಧಿಯ ಸಚಿವ ಸಂಪುಟದಲ್ಲಿ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವದ ವೇದಿಕೆಯಲ್ಲಿ ಸಿದ್ದರಾಮಯ್ಯ ಅವರನ್ನು ಗೌರವಿಸಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ.
ಈ ಕುರಿತು ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ ವೀರಕಪುತ್ರ ಶ್ರೀನಿವಾಸ್, “ಸರ್, ಡಾ. ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ್ದು ನಿಮ್ಮ ಅವಧಿಯ ಸಚಿವ ಸಂಪುಟ. ಹಾಗಾಗಿ ಅವರ ಅಮೃತ ಮಹೋತ್ಸವ ಸಮಾರಂಭದಲ್ಲಿ ನಿಮ್ಮನ್ನು ಗೌರವಿಸಬೇಕು ಎಂಬುದು ನಮ್ಮ ಆಸೆ. ದಯವಿಟ್ಟು ಸಮಯ ಮಾಡಿಕೊಂಡು ಕಾರ್ಯಕ್ರಮಕ್ಕೆ ಆಗಮಿಸಬೇಕು” ಎಂದು ಮನವಿ ಮಾಡಿದರು.
ಆರಂಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವುದು ಕಷ್ಟವಾಗಬಹುದು ಎಂದು ಸಿದ್ದರಾಮಯ್ಯ ತಿಳಿಸಿದರಾದರೂ, ಸುಮಾರು ಐದಾರು ನಿಮಿಷಗಳ ಆತ್ಮೀಯ ಮಾತುಕತೆಯ ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದರು.
“ಸಿದ್ದರಾಮಯ್ಯನವರೊಂದಿಗೆ ಇಷ್ಟು ಆರಾಮವಾಗಿ ಮಾತನಾಡಲು ಅವಕಾಶ ಸಿಕ್ಕಿದ್ದು ನನಗೆ ಇದೇ ಮೊದಲ ಬಾರಿ. ತುಂಬಾ ರಿಲ್ಯಾಕ್ಸ್ಡ್ ಆಗಿ ನಮ್ಮ ಮಾತುಗಳನ್ನು ಆಲಿಸಿದರು. ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವದ ಕುರಿತು ವಿವರಿಸಿದಾಗ ಆತ್ಮೀಯವಾಗಿ ಸ್ಪಂದಿಸಿ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದು ನಮಗೆ ಬಹಳ ಸಂತೋಷ ತಂದಿದೆ” ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.
ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮವರ್ಷದ ಸ್ಮರಣಾರ್ಥ ಆಯೋಜಿಸಲಾಗಿರುವ ‘ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವ’ ಸೆಪ್ಟೆಂಬರ್ 27ರಂದು ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್‌ನಲ್ಲಿ ನಡೆಯಲಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಬರೋಬ್ಬರಿ 18 ಗಂಟೆಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಚಿತ್ರರಂಗದ ಗಣ್ಯರು, ಕಲಾವಿದರು, ತಂತ್ರಜ್ಞರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಸಾವಿರಾರು ಅಭಿಮಾನಿಗಳು ಈ ಐತಿಹಾಸಿಕ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.
