‘ಡ್ಯಾಡ್’ ಆದ ‘ಬಿಗ್ ಡ್ಯಾಡಿ’.. ಮೈಸೂರಲ್ಲಿ ಮುಹೂರ್ತ..!

ಇದು ಘೋಸ್ಟ್ ಡ್ಯಾಡಿಯನ್ನ ಮೀರಿಸೋ ಮಾಸ್ ವೆಂಚರ್?

11

ವರ್ಷದ 365 ದಿನವೂ ಬ್ಯುಸಿ ಇರೋ ಅಂತಹ ಏಕೈಕ ನಟ ಅಂದ್ರೆ ಅದು ಕರುನಾಡ ಚಕ್ರವರ್ತಿ ಡಾ ಶಿವರಾಜ್‌‌ಕುಮಾರ್. 60 ಪ್ಲಸ್‌‌‌ನಲ್ಲೂ 16 ತರಹ ಇರೋ ಎನರ್ಜಿ ಹೌಸ್. ಕ್ಯಾನ್ಸರ್ ಗೆದ್ದು ಬಂದ ಶಿವಣ್ಣ, ತೆಲುಗು, ತಮಿಳು ಚಿತ್ರಗಳ ಶೂಟಿಂಗ್ ಜೊತೆಗೆ ಡ್ಯಾಡ್ ಅನ್ನೋ ಮತ್ತೊಂದು ಸಿನಿಮಾದ ಮುಹೂರ್ತ ಕೂಡ ಮುಗಿಸಿದ್ದಾರೆ.

ಇದು ಮಾಸ್ ಕಾ ಬಾಪ್ ಶಿವರಾಜ್‍ಕುಮಾರ್ ನಟನೆಯ ಹೊಚ್ಚ ಹೊಸ ಪ್ರಾಜೆಕ್ಟ್. ಸಿನಿಮಾಗೆ ಡ್ಯಾಡ್‍ ಅಂತ ಹೆಸರಿಟ್ಟಿರೋ ಚಿತ್ರತಂಡ, ಚಾಮುಂಡಿ ಬೆಟ್ಟದ ನಂದಿ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ನೆರವೇರಿಸಿದೆ.

ಶಿವಣ್ಣ ಅಭಿನಯದ ಡ್ಯಾಡ್‍ ಚಿತ್ರ, ನಿನ್ನೆ ಅಂದ್ರೆ ಸೋಮವಾರ ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟದ ಬೃಹತ್‍ ನಂದಿ ವಿಗ್ರಹದ ಎದುರು ಶುಭಾರಂಭಗೊಂಡಿದೆ.

ಅಂದಹಾಗೆ ಶಿವಣ್ಣ ಅಭಿನಯದ ಜಗ ಮೆಚ್ಚಿದ ಹುಡುಗ ಸಿನಿಮಾ ಕೂಡ ಇದೇ ನಂದಿ ದೇವಸ್ಥಾನದಲ್ಲಿ ಪ್ರಾರಂಭವಾಗಿತ್ತು. ಈಗ 32 ವರ್ಷಗಳ ನಂತರ ಡ್ಯಾಡ್ ಚಿತ್ರ, ಮಗದೊಮ್ಮೆ ಅದೇ ಜಾಗದಲ್ಲಿ ಮುಹೂರ್ತ ಆಚರಿಸಿಕೊಂಡಿದೆ. ಚಿತ್ರದ ಮೊದಲ ದೃಶ್ಯಕ್ಕೆ ಗೀತಾ ಶಿವರಾಜ್‍ಕುಮಾರ್ ಕ್ಲಾಪ್ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು.

ಮೈರಾ ಕ್ರಿಯೇಷನ್ಸ್ ಬ್ಯಾನರ್‌‌ನಡಿ ಹರೀಶ್‍ ಪೆದ್ದಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಅನಿಲ್‍ ಕನ್ನೆಗಂಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಥ್ರಿಲ್ಲರ್ ಚಿತ್ರವಾಗಿದ್ದು, ಶಿವರಾಜ್‍ಕುಮಾರ್ ಜೊತೆಗೆ ಶರ್ಮಿಳಾ ಮಾಂಡ್ರೆ, ಬೇಬಿ ನಕ್ಷತ್ರ, ಮಲಯಾಳಂ ನಟ ಸೂರಜ್‍ ವೆಂಜರಮೂಡು ಮುಂತಾದವರು ನಟಿಸ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ನಾಲ್ಕು ಭಾಷೆಯಲ್ಲಿ ತಯಾರಾಗಲಿರೋ ಡ್ಯಾಡ್ ಚಿತ್ರಕ್ಕೆ ಅರ್ಜುನ್‍ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ.

ರಾಮ್ ಚರಣ್ ತೇಜಾ ನಟನೆಯ ತೆಲುಗು ಸಿನಿಮಾ ಪೆದ್ದಿಯಲ್ಲಿ ಶಿವಣ್ಣ ಒಂದೊಳ್ಳೆ ಪಾತ್ರ ಮಾಡ್ತಿದ್ದಾರೆ. ನಿರ್ದೇಶಕ ಬುಚ್ಚಿಬಾಬು ಈಗಾಗ್ಲೇ ಮೊದಲ ಹಂತದ ಚಿತ್ರೀಕರಣವನ್ನು ಶಿವಣ್ಣನೊಂದಿಗೆ ಮಾಡಿ ಮುಗಿಸಿದ್ದಾರೆ. ಎರಡನೇ ಹಂತದ ಚಿತ್ರೀಕರಣ ಇದೇ ತಿಂಗಳಾಂತ್ಯಕ್ಕೆ ಶುರುವಾಗ್ತಿದ್ದು, ಪೆದ್ದಿ ಶಿವಣ್ಣನ ಟಾಲಿವುಡ್ ಮೆಗಾ ಎಂಟ್ರಿಗೆ ಒಂಥರಾ ಲಾಂಚ್ ಪ್ಯಾಡ್ ಆಗಲಿದೆ.

ಪೆದ್ದಿ ಶೂಟಿಂಗ್ ಮುಗಿಸ್ತಾ ಇದ್ದಂತೆ ಪಕ್ಕದ ಕಾಲಿವುಡ್‌‌ನಲ್ಲಿ ಲೋಕೇಶ್ ಕನಕರಾಜ್ ಹಾಗೂ ರಜನೀಕಾಂತ್ ಕಾಂಬೋನ ಜೈಲರ್-2 ಕಿಕ್‌‌ಸ್ಟಾರ್ಟ್‌ ಆಗಲಿದೆ. ಜೈಲರ್ ಮೊದಲ ಭಾಗ ದೊಡ್ಡ ಹಿಟ್ ಆಗಿದ್ದರಿಂದ ಈಗ ಜೈಲರ್-2 ಮೇಲೆ ಅತೀವ ನಿರೀಕ್ಷೆ ಮೂಡಿದ್ದು, ಆಗ ನರಸಿಂಹನಾಗಿದ್ದ ಶಿವಣ್ಣ ಈ ಬಾರಿ ಉಗ್ರ ನರಸಿಂಹ ಆಗ್ತಾರಾ ಅನ್ನೋದನ್ನ ನಿರೀಕ್ಷಿಸಬೇಕಿದೆ.

ಶಿವಣ್ಣ 131, ಪೆದ್ದಿ ಶೂಟಿಂಗ್ ನಡುವೆ ಡ್ಯಾಡ್ ಸೆಟ್ಟೇರಿರುವುದು ಇಂಟರೆಸ್ಟಿಂಗ್. ಒಟ್ಟಾರೆ ಕ್ಯಾನ್ಸರ್ ಗೆದ್ದು ಬಂದಿರೋ ಶಿವಣ್ಣ, ವರ್ಷಪೂರ ಬ್ಯುಸಿ ಇರೋದು ಖುಷಿಯ ವಿಚಾರವೇ ಸರಿ. ಇವರಂತೆ ಉಳಿದ ಸ್ಟಾರ್ಸ್‌ ಕೂಡ ಸಿನಿಮಾಗಳಲ್ಲಿ ತೊಡಗಿಸಿಕೊಂಡ್ರೆ ಚಿತ್ರರಂಗದ ಮತ್ತಷ್ಟು, ಮಗದಷ್ಟು ಸಮೃದ್ಧವಾಗಿ ಬೆಳೆಯಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version