ಬೆಂಗಳೂರು, ಮಾರ್ಚ್ 19: ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಇಡೀ ಕರ್ನಾಟಕ ಜನತೆಗೆ ಪರಿಚಯವಾದ ಡಾಗ್ ಸತೀಶ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೌಡಿಶೀಟರ್ ಜೊತೆ ಪಾರ್ಟಿ ಮಾಡಿ, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಡಾಗ್ ಸತೀಶ್ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿ ಬಾರಿ ಬಿಲ್ಡಪ್ ತೆಗೆದುಕೊಳ್ಳಲು ಹೋಗಿ ಪೇಚಿಗೆ ಸಿಲುಕುವ ಡಾಗ್ ಸತೀಶ್, ಈ ಬಾರಿ ತೀವ್ರ ಕಾನೂನು ಸಂಕಷ್ಟ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಡಾಗ್ ಸತೀಶ್ ಇತ್ತೀಚೆಗೆ ರೌಡಿಶೀಟರ್ ಎಂದು ಗುರುತಿಸಲಾದ ಪಿ. ಮೂರ್ತಿ ಹಾಗೂ ಇನ್ನಿತರ ವ್ಯಕ್ತಿಗಳ ಜೊತೆ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಪಾರ್ಟಿ ಮಾರ್ಚ್ 13 ರಂದು ಆರ್.ಟಿ.ನಗರದಲ್ಲಿರುವ ಪಟೇಲ್ಸ್ ಇನ್ ಪಾರ್ಟಿ ಹಾಲ್‌ನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಈ ಸಮಾರಂಭದಲ್ಲಿ ಡಾಗ್ ಸತೀಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದು, ನಂತರ ಆ ಕ್ಷಣಗಳನ್ನು ವಿಡಿಯೋ ಮಾಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು.
ಈ ವಿಡಿಯೋ ಸಿಸಿಬಿ ಇನ್ಸ್‌ಪೆಕ್ಟರ್ ಮಹದೇವಯ್ಯ ಅವರ ಗಮನಕ್ಕೆ ಬಿದ್ದಿದ್ದು, ಅವರು ಜ್ಞಾನಭಾರತಿ ಪೊಲೀಸ್ ಠಾಣೆಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ದೂರುದಲ್ಲಿ ವಿಡಿಯೋದಲ್ಲಿರುವ ವ್ಯಕ್ತಿಗಳನ್ನು ಗುರುತಿಸಿ, ಅವರನ್ನು ವಿಚಾರಣೆಗಾಗಿ ಕರೆಯುವಂತೆ ಸೂಚಿಸಲಾಗಿದೆ. ಜೊತೆಗೆ, ಈ ವಿಡಿಯೋವನ್ನು ಅಪ್ಲೋಡ್ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೇಳಲಾಗಿದೆ.
ಪೊಲೀಸರು ಈಗಾಗಲೇ ಈ ಪ್ರಕರಣದ ತನಿಖೆಯನ್ನು ಆರಂಭಿಸಿದ್ದು, ಡಾಗ್ ಸತೀಶ್ ಸೇರಿದಂತೆ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಎಲ್ಲರಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ. ರೌಡಿಶೀಟರ್ ಪಿ. ಮೂರ್ತಿ ಜೊತೆಗಿನ ಸಂಪರ್ಕದ ಬಗ್ಗೆ ಹಾಗೂ ಪಾರ್ಟಿಯಲ್ಲಿ ಭಾಗವಹಿಸಿದ ಉದ್ದೇಶದ ಬಗ್ಗೆ ವಿಚಾರಣೆ ನಡೆಯಲಿದೆ.
ಇದೇ ವೇಳೆ, ವಿಡಿಯೋ ವೈರಲ್ ಆದ ನಂತರ ಹಲವಾರು ಮಂದಿ ಡಾಗ್ ಸತೀಶ್ ಅವರನ್ನು ಮೆಚ್ಚಿ ಕಮೆಂಟ್ ಮಾಡಿದ್ದರು. “ಸರ್ ನಿಮ್ಮ ಲೆವೆಲ್ ಬೇರೆ” ಎಂಬ ರೀತಿಯ ಪ್ರತಿಕ್ರಿಯೆಗಳು ಹೆಚ್ಚಾಗಿ ಕಂಡುಬಂದವು. ಆದರೆ, ಪರಿಸ್ಥಿತಿ ಗಂಭೀರವಾಗುತ್ತಾ ಬಂದಂತೆ ಡಾಗ್ ಸತೀಶ್ ತಮ್ಮ ಖಾತೆಯಿಂದ ವಿಡಿಯೋವನ್ನು ಅಳಿಸಿದ್ದಾರೆ.
ಆದರೆ ವಿಡಿಯೋ ಡಿಲೀಟ್ ಮಾಡಿದರೂ, ಪೊಲೀಸರು ಈಗಾಗಲೇ ಅದನ್ನು ಆಧಾರವಾಗಿ ಪಡೆದು ಪ್ರಕರಣ ದಾಖಲಿಸಿರುವುದರಿಂದ ತನಿಖೆ ಮುಂದುವರಿಯಲಿದೆ.
