ಇಲ್ಲಿಯವರೆಗೂ ಒಂದು ಲೆಕ್ಕ.. ಇಲ್ಲಿಂದೀಚೆಗೆ ಹೊಸ ಲೆಕ್ಕ. ಯೆಸ್.. ಡಿ. ಕೆ. ಶಿವಕುಮಾರ್ ಈಗ ಕರ್ನಾಟಕದ ನೂತನ ಮುಖ್ಯಮಂತ್ರಿ. ಕನ್ನಡ ಚಿತ್ರರಂಗದ ಜೊತೆ ಅವಿನಾಭಾವ ಸಂಬಂಧ ಹೊಂದಿರೋ ಡಿಕೆಶಿ, ತಮ್ಮ ಪ್ರಮಾಣ ವಚನ ಸ್ವೀಕಾರಕ್ಕೆ ಸ್ಯಾಂಡಲ್‌ವುಡ್‌ನ ಅತ್ಯಾಪ್ತರಿಗೆ ಆಮಂತ್ರಣ ನೀಡಿದ್ರು. ಇಷ್ಟಕ್ಕೂ ಡಿಕೆ ಸರ್ಕಾರ್‌ಗೆ ಶುಭ ಹಾರೈಸಿದ್ದು ಯಾಱರು..? ಕನಕೋತ್ಸವದಲ್ಲಿ ಮಿಂದೆದ್ದ ಕನ್ನಡದ ಘಟಾನುಘಟಿ ತಾರೆಯರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
- ಕರುನಾಡಿಗೆ ಇಂದಿನಿಂದ ಡಿಕೆ ಶಿವಕುಮಾರ್ ಸಿಎಂ
- ಪದಗ್ರಹಣದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಕಲರವ
ಕನ್ನಡ ಚಿತ್ರರಂಗದಲ್ಲಿ ಹೀರೋ ಆಗುವ ಕನಸು ಕಂಡವರು. ಶಾಲಾ ಕಾಲೇಜ್ ಡೇಸ್‌ನಲ್ಲೇ ಸಿಲ್ಕ್ ಬಟ್ಟೆ ಧರಿಸೋ ಮೂಲಕ ಸ್ಟೈಲ್ ಐಕಾನ್ ಅನಿಸಿಕೊಂಡವರು. ರಾಜಕಾರಣಕ್ಕೆ ಪದಾರ್ಪಣೆ ಮಾಡೋಕೆ ಮುನ್ನ ಫಿಲ್ಮ್ ಡಿಸ್ಟ್ರಿಬ್ಯೂಟರ್, ಫಿಲ್ಮ್ ಪ್ರೊಡ್ಯೂಸರ್ ಹಾಗೂ ಥಿಯೇಟರ್‌ಗಳ ಮಾಲೀಕರಾಗಿದ್ದವರು ಡಿ. ಕೆ. ಶಿವಕುಮಾರ್. ಸುಮಾರು 45 ವರ್ಷಗಳ ಸುದೀರ್ಘ ಹಾಗೂ ಯಶಸ್ವೀ ಪೊಲಿಟಿಕಲ್ ಜರ್ನಿಯ ಬಳಿಕ ಇಂದು ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇಂದು ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಕೆಲ ತಾರೆಯರಿಗೂ ಆಮಂತ್ರಣ ನೀಡಿದ್ರು ಡಿಕೆಶಿ. ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ, ಆಪ್ತಮಿತ್ರ ಕ್ರೇಜಿಸ್ಟಾರ್ ರವಿಚಂದ್ರನ್, ಬಾದ್‌ಷಾ ಕಿಚ್ಚ ಸುದೀಪ್, ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ ಅವರಿಗೆ ತಮ್ಮ ಪದಗ್ರಹಣ ಸಮಾರಂಭಕ್ಕೆ ಪ್ರೀತಿಯಿಂದ ಆಹ್ವಾನಿಸಿದ್ರು ಡಿಕೆ ಶಿವಕುಮಾರ್. ಇದು ಚಿತ್ರರಂಗದ ಜೊತೆ ಅವರಿಗಿರೋ ಒಲವು, ನಂಟು, ಬಾಂಧವ್ಯದ ಪ್ರತೀಕವೂ ಹೌದು.
- ವೀಕೆಂಡ್ ವಿತ್ ರಮೇಶ್ನಲ್ಲಿ ಡಿಕೆಶಿ.. ರಮ್ಮಿ ಖುಷ್
- ಕನಕಪುರದ ಉತ್ಸವ ನೋಡಲು ಸಾವಿರ ಕಣ್ಣು ಬೇಕು..!
ಶ್ರೇಷ್ಟತೆಗೆ ಹಂಬಲಿಸುವಂತಹ ಊರು ಕನಕಪುರ. ಈ ಕನಕಪುರದ ಉತ್ಸವ ನೋಡಲು ದೇವೇಂದ್ರನಂತೆ ಸಾವಿರ ಕಣ್ಣು ಬೇಕಾಗುತ್ತೆ ಅಂತ ಅಲ್ಲಿನ ಉತ್ಸವದ ಬಗ್ಗೆ, ಡಿಕೆ ಬ್ರದರ್ಸ್ ಬಗ್ಗೆ ಕೊಂಡಾಡಿದ್ರು ನಟ, ನಿರೂಪಕ ರಮೇಶ್ ಅರವಿಂದ್. ಅಷ್ಟೇ ಅಲ್ಲ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ 100ನೇ ಅತಿಥಿಯಾಗಿ ಬಂದಿದ್ದ ಸಿಎಂ ಡಿಕೆಶಿ ಬಗ್ಗೆ ಮಿಸ್ಟರ್ ಪರ್ಫೆಕ್ಟ್ ಏನಂದ್ರು ಅಂತ ಇಲ್ಲಿದೆ ನೋಡಿ.
- ಹೆಲ್ಲೋ ಕನಕಪುರ ಅಂತ ವಿಜಯ್ ಪ್ರಕಾಶ್ ಮೋಡಿ
- ಕರುನಾಡಿಗೆ ಡಿಕೆಶಿನೇ ರಾಜಕುಮಾರ ಎಂದಿದ್ರು ವಿಪಿ..!
ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಗೂ ಐಶ್ವರ್ಯಾ ರಂಗರಾಜನ್ ಸೇರಿದಂತೆ ಸಾಕಷ್ಟು ಮಂದಿ ಗಾಯಕರು ಕನಕೋತ್ಸವದಲ್ಲಿ ಗಾನಸುಧೆ ಹರಿಸಿದ್ದರು. ಹೆಲ್ಲೋ ಹೆಲ್ಲೋ ಹೆಲ್ಲೋ ಸಾಂಗ್‌ನಿಂದ ಹಿಡಿದು, ಅಪ್ಪು ಅವರ ನೀನೇ ರಾಜಕುಮಾರ ಗೀತೆ ತನಕ ವಿಪಿ ಕನಕಪುರ ನಿವಾಸಿಗರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು.
- ಲೈಫ್‌ನಲ್ಲಿ ಸೆಲೆಬ್ರೇಷನ್ ಬಹಳ ಮುಖ್ಯ ಎಂದ ಡಾಲಿ
- DK ಬ್ರದರ್ಸ್ ಎಲ್ಲೆಡೆ ಈ ಉತ್ಸವಗಳನ್ನ ಮಾಡ್ತಿದ್ದಾರೆ
ಕನಕೋತ್ಸವದಲ್ಲಿ ಭಾಗಿಯಾಗಿದ್ದ ಡಾಲಿ ಧನಂಜಯ, ಲೈಫ್‌ನಲ್ಲಿ ಸೆಲೆಬ್ರೇಷನ್ ಬಹಳ ಮುಖ್ಯ. ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರು ಈ ತರಹದ ಉತ್ಸವಗಳನ್ನ ಮಾಡ್ತಾನೆ ಇರ್ತಾರೆ. ಸಂಸ್ಕೃತಿ, ಸಂಬಂಧಗಳನ್ನ ಸಂಭ್ರಮಿಸಬೇಕು ಎಂದಿದ್ದಾರೆ. ಅದೇ ವೇದಿಕೆಯಲ್ಲಿ ಡಿಕೆ ಕುಟುಂಬದ ಕುಡಿ ಪ್ರಖ್ಯಾತ್ ನಟನೆಯ ಜೆಸಿ ಸಿನಿಮಾದ ಪ್ರಮೋಷನ್ ಕೂಡ ಮಾಡೋ ಮೂಲಕ ತಮ್ಮ ನಿರ್ಮಾಪಕನ ಜವಾಬ್ದಾರಿ ಮೆರೆದಿದ್ರು ಡಾಲಿ.
- ಬೆಂಕಿ ಸಾಂಗ್‌ಗೆ ಮೇಘ ಶೆಟ್ಟಿ ಬೆಂಕಿಯಂತ ಡ್ಯಾನ್ಸ್
- ತಿಂಗಳ ಹಬ್ಬ.. DK ಬ್ರದರ್ಸ್‌ಗೆ ಚೆಲುವೆ ಧನ್ಯವಾದ
ಗ್ರಾಮಾಯಣ ಚಿತ್ರದ ನಿನ್ನಾಣೆ ನಾನು ಜಾನಪದ ಸಾಂಗ್‌ಗೆ ಱಪ್ ಟಚ್ ನೀಡಲಾಗಿದ್ದು, ಆ ಹಾಡಿಗೆ ಸಿನಿಮಾದಲ್ಲಿ ಕುಣಿದಂತೆ ನಟಿ ಮೇಘ ಶೆಟ್ಟಿ ಕನಕೋತ್ಸವದ ವೇದಿಕೆಯಲ್ಲಿ ಕುಣಿದು ಕುಪ್ಪಳಿಸಿದ್ರು. ಅಲ್ಲದೆ, ತಿಂಗಳಿಂದ ನಡೀತಿರೋ ಈ ಹಬ್ಬದಲ್ಲಿ ಭಾಗಿಯಾಗಲು ಅವಕಾಶ ನೀಡಿದಂತಹ ಡಿಕೆ ಬ್ರದರ್ಸ್‌ಗೆ ತುಂಬು ಹೃದಯದಿಂದ ಧನ್ಯವಾದ ತಿಳಿಸಿದ್ರು.
- ಏನಮ್ಮಿ ಏನಮ್ಮಿ.. ಎಂದ ನಟ ನೀನಾಸಂ ಸತೀಶ್
- ಕನಕೋತ್ಸವದಲ್ಲಿ ಮಂಗ್ಲಿ ಕಂಠ ಸಖತ್ ಮ್ಯಾಜಿಕ್
ಈ ತರಹದ ಉತ್ಸವಗಳಿಂದ ನಮಗೊಂದು ಅವಕಾಶ. ಜನಕ್ಕೆ ಸಂಭ್ರಮ ಎಂದ ನಟ ನೀನಾಸಂ ಸತೀಶ್, ಇದೇ ಬಗೆಯ ಉತ್ಸವಗಳನ್ನ ಮಾಡ್ತಿರಿ ಅಂತ ಡಿಕೆ ಬ್ರದರ್ಸ್‌ಗೆ ಮನವಿ ಮಾಡಿದ್ರು. ಅದೇ ವೇದಿಕೆಯಲ್ಲಿ ತಮ್ಮ ದಿ ರೈಸ್ ಆಫ್ ಅಶೋಕ ಚಿತ್ರದ ಪ್ರಮೋಷನ್ಸ್ ಕೂಡ ಮಾಡಿಕೊಂಡರು.
ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ ಕೂಡ ಬಂದು ತಮ್ಮ ಕಂಠದಲ್ಲಿ ಹಾಡುಗಳನ್ನ ಮಾಡುವ ಮೂಲಕ ಮಸ್ತ್ ಮನರಂಜನೆ ನೀಡಿದ್ದು ವಿಶೇಷ. ಅದ್ರಲ್ಲೂ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಅನ್ನೋ ಅಣ್ಣಾವ್ರ ಹಾಡನ್ನ ಹಾಡೋ ಮೂಲಕ ಮಂಗ್ಲಿ ಎಲ್ಲರ ಗಮನ ಸೆಳೆದರು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
