ಮುಂಬೈ: ಬಾಲಿವುಡ್‌ನ ಖ್ಯಾತ ನಟಿ, ಅತ್ಯುತ್ತಮ ಪೋಷಕ ನಟಿಗೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ದಿವ್ಯಾ ದತ್ತಾ (Divya Dutta) ಅವರ ಇತ್ತೀಚಿನ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿವೆ. “ನನಗೆ ಒಬ್ಬ ಗೆಳೆಯ ಬೇಕು, ಆದರೆ ನಾನು ಮದುವೆಯಾಗುವುದಿಲ್ಲ” ಎಂಬ ಅವರ ಬೋಲ್ಡ್ ಹೇಳಿಕೆ ಇದೀಗ ವೈರಲ್ ಆಗಿದೆ.
48 ವರ್ಷದ ದಿವ್ಯಾ ದತ್ತಾ ಕಳೆದ ಮೂರು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಬಾಲಿವುಡ್‌ನಲ್ಲಿ ಮಾತ್ರವಲ್ಲದೇ ಪ್ರಾದೇಶಿಕ ಭಾಷೆಗಳಲ್ಲಿಯೂ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ಐಫಾ, ಫಿಲ್ಮ್‌ಫೇರ್ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಅವರು, ತಮ್ಮ ವೈಯಕ್ತಿಕ ಜೀವನದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಮದುವೆ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ದಿವ್ಯಾ ದತ್ತಾ, “ನಾನು ಯಾವತ್ತೂ ಮದುವೆಗೆ ಹೆಚ್ಚಿನ ಮಹತ್ವ ನೀಡಿಲ್ಲ. ಜೀವನದಲ್ಲಿ ನಾನು ಮಾಡಿದ ಕೆಲ ತಪ್ಪುಗಳಿಂದ ಪಾಠ ಕಲಿತಿದ್ದೇನೆ. ಅದಕ್ಕಾಗಿಯೇ ಈಗ ಮದುವೆಯನ್ನು ನನ್ನ ಆದ್ಯತೆಯಾಗಿ ಪರಿಗಣಿಸುವುದಿಲ್ಲ” ಎಂದು ಹೇಳಿದ್ದಾರೆ.
ಈ ಹಿಂದೆ ಹಲವು ಸಂಬಂಧಗಳಲ್ಲಿ ಇದ್ದೆ ಎಂದು ಒಪ್ಪಿಕೊಂಡಿರುವ ಅವರು, “ನಾನು ಹಲವರೊಂದಿಗೆ ಸಂಬಂಧದಲ್ಲಿದ್ದೆ. ಆದರೆ ಯಾರೊಂದಿಗೂ ನನಗೆ ಹೊಂದಾಣಿಕೆ ಆಗಲಿಲ್ಲ. ನನ್ನ ಪ್ರಕಾರ ಒಂದು ಸಂಬಂಧ ಎಂದರೆ ಜೀವನಪೂರ್ತಿ ಜೊತೆಯಾಗಿ ಹೆಜ್ಜೆ ಹಾಕಬೇಕು. ಕಷ್ಟದಲ್ಲೂ, ಸಂತೋಷದಲ್ಲೂ ಒಬ್ಬರ ಬೆನ್ನಿಗೆ ಒಬ್ಬರು ನಿಲ್ಲಬೇಕು. ಆದರೆ ನನ್ನ ಹಿಂದಿನ ಸಂಬಂಧಗಳಲ್ಲಿ ಈ ಅಂಶಗಳ ಕೊರತೆ ಇತ್ತು. ಕೊರೊನಾ ಕಾಲದಲ್ಲಿ ನನಗೆ ಜೀವನದಲ್ಲಿ ನಿಜವಾಗಿ ಏನು ಬೇಕು ಎಂಬುದು ನನಗೆ ಸ್ಪಷ್ಟವಾಯಿತು” ಎಂದು ಹೇಳಿದ್ದಾರೆ.
ಚಿತ್ರರಂಗದ ಜೀವನಶೈಲಿಯೂ ತಮ್ಮ ನಿರ್ಧಾರಕ್ಕೆ ಪ್ರಮುಖ ಕಾರಣವೆಂದು ಹೇಳಿರುವ ದಿವ್ಯಾ ದತ್ತಾ, “ನಮ್ಮ ವೃತ್ತಿಯಲ್ಲಿ ಸ್ಥಿರತೆ ಇಲ್ಲ. ಯಾವಾಗ ಏನಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ನನ್ನ ಜೀವನಶೈಲಿ ಮತ್ತು ವೃತ್ತಿಗೆ ಹೊಂದಿಕೊಳ್ಳುವಂತಹ ವ್ಯಕ್ತಿಯೇ ನನಗೆ ಬೇಕು. ನಾನು ಇನ್ನೂ ಪ್ರೀತಿಯಲ್ಲಿ ಬೀಳಲು ಸಿದ್ಧಳಿದ್ದೇನೆ. ಪ್ರೀತಿಸುವುದಕ್ಕೂ ರೆಡಿಯಾಗಿದ್ದೇನೆ. ಆದರೆ ಮದುವೆಯಾಗುವ ಮನಸ್ಸು ನನಗಿಲ್ಲ” ಎಂದು ಹೇಳಿದ್ದಾರೆ.
ಪ್ರೀತಿಯ ಅರ್ಥವನ್ನು ವಿವರಿಸಿದ ಅವರು, “ಪ್ರೀತಿ ಎನ್ನುವುದು ಹೃದಯದ ವಿಷಯ. ಹೃದಯದಲ್ಲಿ ಪ್ರೀತಿ ಹುಟ್ಟಿದಾಗ ಗಟ್ಟಿಯಾದ ಸಂಬಂಧ ರೂಪುಗೊಳ್ಳುತ್ತದೆ. ಮದುವೆಯ ಬಂಧನಕ್ಕಿಂತ ನನಗೆ ಶಾಂತಿ ಮತ್ತು ನೆಮ್ಮದಿ ಮುಖ್ಯ” ಎಂದು ಅಭಿಪ್ರಾಯಪಟ್ಟಿದ್ದಾರೆ.
ದಿವ್ಯಾ ದತ್ತಾ ಅವರ ವೈಯಕ್ತಿಕ ಬದುಕು ಈ ಹಿಂದೆ ಸಹ ಸಾಕಷ್ಟು ಬಾರಿ ಸುದ್ದಿಯಾಗಿತ್ತು. 2005ರಲ್ಲಿ ಲೆಫ್ಟಿನೆಂಟ್ ಕಮಾಂಡರ್ ಸಂದೀಪ್ ಶೆರ್ಗಿಲ್ ಅವರೊಂದಿಗೆ ನಿಶ್ಚಿತಾರ್ಥ ನಡೆದಿತ್ತು ಎಂಬ ಸುದ್ದಿ ಹರಡಿತ್ತು. ಚಂಡೀಗಢದಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿದೆ ಎನ್ನಲಾಗಿತ್ತು. ಆದರೆ ನಂತರ ಆ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಈ ಕುರಿತು ಮಾತನಾಡಿದ್ದ ದಿವ್ಯಾ ದತ್ತಾ, ಈ ಎಲ್ಲ ವಿಚಾರಗಳು ನಮಗೆ ಮುಜುಗರ ಉಂಟುಮಾಡಿವೆ ಎಂದು ಹೇಳಿದ್ದಾರೆ.
ಅದೇ ಸಮಯದಲ್ಲಿ, ಕಿರುತೆರೆಯ ‘ಶನ್ನೋ ಕಿ ಶಾದಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ ಸಹನಟ ವಿಕಾಸ್ ಭಲ್ಲಾ ಅವರೊಂದಿಗೆ ಹೆಸರು ತಳುಕು ಹಾಕಿಕೊಂಡಿತ್ತು. ಈ ಸಂಬಂಧವೇ ನಿಶ್ಚಿತಾರ್ಥ ಮುರಿಯಲು ಕಾರಣವೆಂಬ ಆರೋಪಗಳೂ ಕೇಳಿಬಂದಿದ್ದವು. ಆದರೆ ಈ ಎಲ್ಲ ಸುದ್ದಿಗಳನ್ನು ದಿವ್ಯಾ ದತ್ತಾ ಸ್ಪಷ್ಟವಾಗಿ ನಿರಾಕರಿಸಿದ್ದರು.
