ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತ ಎದುರಾಗಿದೆ. ಭರವಸೆಯ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರಾಗಿದ್ದ ಸಂಗೀತ್ ಸಾಗರ್ ಅವರು ಚಿತ್ರೀಕರಣದ ಸ್ಥಳದಲ್ಲಿಯೇ ಹೃದಯಾಘಾತದಿಂದ ಕುಸಿದು ಬಿದ್ದು ನಿಧನರಾಗಿದ್ದಾರೆ. ನಾಳೆ (ಡಿಸೆಂಬರ್ 5) ಸಿನಿಮಾ ಚಿತ್ರೀಕರಣಕ್ಕೆ ತೆರೆ ಬೀಳಬೇಕಿತ್ತು ಎನ್ನುವಾಗಲೇ ಈ ದುರಂತ ಸಂಭವಿಸಿದ್ದು, ಚಿತ್ರತಂಡಕ್ಕೆ ಆಘಾತ ಉಂಟಾಗಿದೆ.
ಘಟನೆ ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಗ್ರಾಮದಲ್ಲಿ ನಡೆದಿದೆ. ಸಂಗೀತ್ ಸಾಗರ್ ಅವರು ತಮ್ಮ ಮುಂಬರುವ ಸಿನಿಮಾ ‘ಪಾತ್ರಧಾರಿ’ಯ (Paatradhari) ಚಿತ್ರೀಕರಣದಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದರು. ಕಳೆದ 20 ದಿನಗಳಿಂದ ಹರಿಹರಪುರ ಮತ್ತು ತೀರ್ಥಹಳ್ಳಿ ತಾಲೂಕುಗಳ ಸುತ್ತಮುತ್ತ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು.
ಘಟನೆ ನಡೆದ ದಿನ, ಸಂಗೀತ್ ಸಾಗರ್ ಅವರು ಹಾಸ್ಯ ಕಲಾವಿದ ಸಂಜು ಬಸಯ್ಯ ಅವರಿಗೆ ದೃಶ್ಯವೊಂದರ ಕುರಿತು ಆ್ಯಕ್ಷನ್ ಹೇಳುತ್ತಿದ್ದರು. ಈ ವೇಳೆಗೆ ಅವರು ತೀವ್ರ ಸುಸ್ತಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಚಿತ್ರತಂಡದ ಸದಸ್ಯರು ಅವರನ್ನು ಹತ್ತಿರದ ಕೊಪ್ಪ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿರ್ದೆಶಕ ಸಂಗೀತ್ ಸಾಗರ್ ವಿಧಿವಶರಾಗಿದ್ದಾರೆ.
ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರಾಗಿ ಸಂಗೀತ್ ಸಾಗರ್
ಮೂಲತಃ ಸಕಲೇಶಪುರದ ದೊಡ್ಡನಾಗರದವರಾದ ಸಂಗೀತ್ ಸಾಗರ್ ಅವರು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಇವರು ಒಂದೇ ಸಿನಿಮಾದಲ್ಲಿ ನಿರ್ದೇಶನ ಮತ್ತು ಸಂಗೀತ ಎರಡರ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು. ತಮ್ಮ ವೃತ್ತಿಜೀವನದಲ್ಲಿ ಇವರು ಎಂಟಕ್ಕೂ ಹೆಚ್ಚು ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದರು ಮತ್ತು ಅನೇಕ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. ಅವರ ಕಲಾಪ್ರಯತ್ನಗಳು ಹಲವು ನವಪ್ರತಿಭೆಗಳಿಗೆ ವೇದಿಕೆ ಒದಗಿಸಿದ್ದವು.
ಸಂಗೀತ್ ಸಾಗರ್ ಅವರು ತಮ್ಮ ‘ಪಾತ್ರಧಾರಿ’ ಸಿನಿಮಾದ ಚಿತ್ರೀಕರಣವನ್ನು ಬಹುತೇಕ ಪೂರ್ಣಗೊಳಿಸಿದ್ದರು. ನಾಳೆ (ಡಿಸೆಂಬರ್ 5) ಸಿನಿಮಾದ ಕೊನೆಯ ಭಾಗದ ಚಿತ್ರೀಕರಣವನ್ನು ಮುಗಿಸಿ, ಕುಂಬಳಕಾಯಿ ಶಾಸ್ತ್ರ ಮಾಡುವ ಮೂಲಕ ಚಿತ್ರೀಕರಣಕ್ಕೆ ವಿದಾಯ ಹೇಳಲು ಸಿದ್ಧತೆ ಮಾಡಿಕೊಂಡಿದ್ದರು. ಅಂತಹ ಸಂತಸದ ಕ್ಷಣಕ್ಕೆ ಒಂದು ದಿನ ಮುನ್ನವೇ ಇಂತಹ ದುರಂತ ಸಂಭವಿಸಿರುವುದು ಚಿತ್ರತಂಡಕ್ಕೆ ಅರಗಿಸಿಕೊಳ್ಳಲಾಗದ ನೋವು ತಂದಿದೆ.
ಸಂಗೀತ್ ಸಾಗರ್ ಅವರ ಅಕಾಲಿಕ ಮರಣದ ಸುದ್ದಿ ತಿಳಿದು ಕನ್ನಡ ಚಿತ್ರರಂಗದ ಗಣ್ಯರು, ನಿರ್ದೇಶಕರು ಮತ್ತು ತಂತ್ರಜ್ಞರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ಕೆಲಸ ಮಾಡಿದ್ದ ಕಲಾವಿದರು, ತಂತ್ರಜ್ಞರು ಮತ್ತು ನಿರ್ಮಾಪಕರು ಈ ದುರಂತಕ್ಕೆ ಮರುಗಿದ್ದಾರೆ.
.
