ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರ ಕುಟುಂಬದಲ್ಲಿ ಭಾರೀ ಗದ್ದಲ ಎದ್ದಿದೆ. ವರದಕ್ಷಿಣೆ ಕಿರುಕುಳದ ಆರೋಪದಡಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅವರ ಸೊಸೆ ಪವಿತ್ರಾ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರ ಪತಿ ಪವನ್ (ಎಸ್. ನಾರಾಯಣ್ ಅವರ ಪುತ್ರ), ಮಾವ ಎಸ್. ನಾರಾಯಣ್ ಮತ್ತು ಅತ್ತೆ ಭಾಗ್ಯಲಕ್ಷ್ಮಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
2021ರಲ್ಲಿ ಪವನ್ ಮತ್ತು ಪವಿತ್ರಾ ಅವರ ಮದುವೆ ನಡೆದಿತ್ತು. ಮದುವೆಯ ಸಂದರ್ಭದಲ್ಲಿ ಪವಿತ್ರಾ ಕುಟುಂಬವು ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಉಂಗುರ ಮತ್ತು ಮದುವೆಯ ಇತರ ಖರ್ಚುಗಳನ್ನು ಮಾಡಿದ್ದರು. ಆ ಸಮಯದಲ್ಲಿ ಪವನ್‌ಗೆ ಯಾವುದೇ ಕೆಲಸ ಇರಲಿಲ್ಲ. ಅವರು ಮನೆಯಲ್ಲಿಯೇ ಇದ್ದರು. ಪವಿತ್ರಾ ಮಾತ್ರ ಕೆಲಸ ಮಾಡಿ ಮನೆಯ ಸಂಸಾರವನ್ನು ನಡೆಸುತ್ತಿದ್ದರು. ಪವನ್ ಅವರ ಓದಿಲ್ಲದ ಹಿನ್ನೆಲೆಯಿಂದಾಗಿ ಅವರಿಗೆ ಉದ್ಯೋಗ ಸಿಗಲಿಲ್ಲ ಎಂದು ಪವಿತ್ರಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಮದುವೆಯ ನಂತರದ ದಿನಗಳಲ್ಲಿ ಹಣದ ಒತ್ತಡ ಆರಂಭವಾಯಿತು.
ಪವನ್ ಅವರು ‘ಕಲಾ ಸಾಮ್ರಾಟ್ ಟೀಂ ಅಕಾಡಮಿ’ ಎಂಬ ಫಿಲ್ಮ್ ಇನ್‌ಸ್ಟಿಟ್ಯೂಟ್ ಪ್ರಾರಂಭಿಸಲು ಉತ್ಸುಕರಾಗಿದ್ದರು. ಇದಕ್ಕಾಗಿ ಪವಿತ್ರಾ ಬಳಿ ಹಣ ಕೇಳಿದರು. ಪವಿತ್ರಾ ತಮ್ಮ ತಾಯಿಯ ಒಡವೆಗಳನ್ನು ಅಡವಿಟ್ಟು ಹಣವನ್ನು ಒದಗಿಸಿದರು. ಆದರೆ, ಸಂಸ್ಥೆಯು ಲಾಭ ಗಳಿಸದೆ ನಷ್ಟಕ್ಕೆ ಜಾರಿ, ಕೊನೆಗೆ ಮುಚ್ಚಲಾಯಿತು. ಈ ನಷ್ಟವನ್ನು ತುಂಬಿಸಲು ಪವಿತ್ರಾ ಮತ್ತೆ 10 ಲಕ್ಷ ರೂಪಾಯಿ ಸಾಲ ಮಾಡಿ ಪವನ್‌ಗೆ ನೀಡಿದರು. ಆದರೂ ಕುಟುಂಬದ ಒತ್ತಡ ಕಡಿಮೆಯಾಗಲಿಲ್ಲ. ಪ್ರತಿದಿನ ಅತ್ತೆ ಭಾಗ್ಯಲಕ್ಷ್ಮಿ ಮತ್ತು ಪತಿ ಪವನ್ ಅವರು ಪವಿತ್ರಾ ಮೇಲೆ ಹಲ್ಲೆ ನಡೆಸಿ ಹೆಚ್ಚಿನ ಹಣವನ್ನು ತರುವಂತೆ ಒತ್ತಾಯ ಮಾಡುತ್ತಿದ್ದರಂತೆ.
ಈ ದೌರ್ಜನ್ಯಕ್ಕೆ ಒಪ್ಪದಿದ್ದಕ್ಕಾಗಿ ಪವಿತ್ರಾ ಅವರನ್ನು ಮನೆಯಿಂದ ಹೊರಹಾಕಲಾಯಿತು. ದೂರಿನಲ್ಲಿ ಪವಿತ್ರಾ ಹೇಳಿರುವಂತೆ, “ನನ್ನ ಪತಿ ಮತ್ತು ಅತ್ತೆ-ಮಾವನರು ನನ್ನನ್ನು ಹಣಕ್ಕಾಗಿ ಪೀಡಿಸುತ್ತಿದ್ದರು. ಮದುವೆಯಲ್ಲಿ ನೀಡಿದ ವರದಕ್ಷಿಣೆಯ ಹೊರತಾಗಿಯೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಿದ್ದರು.” ಇದಲ್ಲದೇ, ನನ್ನ ಮಗನಿಗೆ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಯಾದರೆ ಅದಕ್ಕೆ ಎಸ್. ನಾರಾಯಣ್, ಭಾಗ್ಯಲಕ್ಷ್ಮಿ ಮತ್ತು ಪವನ್ ಕಾರಣರಾಗುತ್ತಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ಈ ಆರೋಪಗಳನ್ನು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಈ ಪ್ರಕರಣದಲ್ಲಿ ಪವನ್ ಮೊದಲ ಆರೋಪಿ (A1), ಎಸ್. ನಾರಾಯಣ್ ಎರಡನೇ ಆರೋಪಿ (A2) ಮತ್ತು ಭಾಗ್ಯಲಕ್ಷ್ಮಿ ಮೂರನೇ ಆರೋಪಿ ಆಗಿದ್ದಾರೆ. ಪೊಲೀಸರು ತನಿಖೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.
