ಕನ್ನಡದ ಖ್ಯಾತ ಹಿರಿಯ ನಿರ್ದೇಶಕ ಜೋ ಸೈಮನ್ ನಿಧನ

Untitled design 2026 02 13T174031.513

ಕನ್ನಡ ಚಿತ್ರರಂಗಕ್ಕೆ ಮಹತ್ತರ ಕೊಡುಗೆ ನೀಡಿದ ಹಿರಿಯ ನಿರ್ದೇಶಕ ಜೋ ಸೈಮನ್ ಅವರು ಹಠಾತ್ ನಿಧನರಾಗಿದ್ದಾರೆ. 80 ವರ್ಷ ವಯಸ್ಸಿನ ಜೋ ಸೈಮನ್ ಅವರು ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದಾಗಲೇ ಹೃದಯಾಘಾವಾಗಿದೆ. ತಕ್ಷಣವೇ ಅವರನ್ನು ಸಮೀಪದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ನಿರ್ದೇಶಕ, ನಟ ಹಾಗೂ ಗೀತರಚನೆಕಾರರಾಗಿ ಅವರು ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸೇವೆ ಸಲ್ಲಿಸಿ, ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ್ದರು.

1977ರಿಂದ ಆರಂಭವಾದ ನಿರ್ದೇಶನ ಪಯಣ

1977ರಲ್ಲಿ ‘ಒಂದು ಪ್ರೇಮದ ಕತೆ’ ಚಿತ್ರದ ಮೂಲಕ ಜೋ ಸೈಮನ್ ನಿರ್ದೇಶನ ಕ್ಷೇತ್ರಕ್ಕೆ ಕಾಲಿಟ್ಟರು. ಮೊದಲ ಚಿತ್ರವೇ ಪ್ರೇಕ್ಷಕರ ಗಮನ ಸೆಳೆದಿದ್ದು, ನಂತರ ಅವರು ಆಕ್ಷನ್ ಹಾಗೂ ಪ್ರೇಮಕತೆಗಳ ಮೂಲಕ ಜನಪ್ರಿಯತೆ ಗಳಿಸಿದರು. ವಿಶೇಷವಾಗಿ ಆಕ್ಷನ್ ಶೈಲಿಯ ಚಿತ್ರಗಳಲ್ಲಿ ಅವರದೇ ಆದ ಸ್ಟೈಲ್ ಕಂಡುಬರುತ್ತಿತ್ತು.

ವಿಷ್ಣುವರ್ಧನ್‌ಗೆ ‘ಸಾಹಸ ಸಿಂಹ’ ಬಿರುದು

ಕನ್ನಡದ ಖ್ಯಾತ ನಟ ವಿಷ್ಣುವರ್ಧನ್ ಅವರಿಗೆ ‘ಸಾಹಸ ಸಿಂಹ’ ಎಂಬ ಬಿರುದನ್ನು ನೀಡಿದವರು ಜೋ ಸೈಮನ್. ಇವರಿಬ್ಬರ ಸ್ನೇಹ ಹಾಗೂ ಸಿನಿ ಸಹಯೋಗ ಕನ್ನಡ ಚಿತ್ರರಂಗದಲ್ಲಿ ವಿಶೇಷ ಸ್ಥಾನ ಪಡೆದಿದೆ. ‘ಸಾಹಸ ಸಿಂಹ’, ‘ಸಿಂಹ ಜೋಡಿ’, ‘ಹಾಂಕಾಂಗ್‌ನಲ್ಲಿ ಏಜೆಂಟ್ ಅಮರ್’ ಮುಂತಾದ ಸಿನಿಮಾಗಳು ಭರ್ಜರಿ ಯಶಸ್ಸು ಕಂಡವು.

ಅದೇ ರೀತಿ ನಟ ಅಂಬರೀಶ್ ಅವರೊಡನೆಯೂ ಜೋ ಸೈಮನ್ ಆತ್ಮೀಯ ಸಂಬಂಧ ಹೊಂದಿದ್ದರು. ಅಂಬರೀಶ್ ಅಭಿನಯದ ಹಲವು ಚಿತ್ರಗಳಲ್ಲಿ ಜೋ ಸೈಮನ್ ತಮ್ಮ ನಿರ್ದೇಶನದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.

ಹಿಟ್ ಸಿನಿಮಾಗಳ ಪಟ್ಟಿ

ಜೋ ಸೈಮನ್ ನಿರ್ದೇಶಿಸಿದ ಪ್ರಮುಖ ಸಿನಿಮಾಗಳಲ್ಲಿ ‘ಸಾಹಸ ಸಿಂಹ’, ‘ಸಿಂಹ ಜೋಡಿ’, ‘ಹಾಂಕಾಂಗ್‌ನಲ್ಲಿ ಏಜೆಂಟ್ ಅಮರ್’, ‘ಸ್ನೇಹದ ಕಡಲಲ್ಲಿ’, ‘ರವಿವರ್ಮ’, ‘ಟೈಂ ಬಾಂಬ್’, ‘ಊರಿಗೆ ಉಪಕಾರಿ’ ಸೇರಿದಂತೆ ಅನೇಕ ಚಿತ್ರಗಳು ಸೇರಿವೆ. ಆಕ್ಷನ್, ಥ್ರಿಲ್ಲರ್ ಹಾಗೂ ಕುಟುಂಬ ಕಥಾಹಂದರದ ಸಿನಿಮಾಗಳಲ್ಲಿ ಅವರು ಸಮಾನವಾಗಿ ಯಶಸ್ಸು ಕಂಡಿದ್ದರು.

ಜೋ ಸೈಮನ್ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಫಿಲ್ಮ್ ಚೇಂಬರ್ ಸದಸ್ಯರು, ಸಹ ನಿರ್ದೇಶಕರು, ನಟರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Exit mobile version