ಧುರಂಧರ್.. ದಿ ಕಾಶ್ಮೀರ್ ಫೈಲ್ಸ್, ದಿ ಕೇರಳ ಸ್ಟೋರಿ ಚಿತ್ರಗಳ ಬಳಿಕ ಸಿಕ್ಕಾಪಟ್ಟೆ ಸಂಚಲನ ಮೂಡಿಸಿರೋ ಇಂಡಿಯನ್ ಮೂವಿ. ಸಾಕಷ್ಟು ಮಂದಿ ಇದೊಂದು ಮಾಸ್ಟರ್‌ಪೀಸ್, ಮಾಸ್ಟರ್‌ಕ್ಲಾಸ್ ಚಿತ್ರ ಅಂತಿದ್ರೆ, ಒಂದಷ್ಟು ಮಂದಿ ಇದು ಹಂಡ್ರೆಡ್ ಪರ್ಸೆಂಟ್ ಪ್ರೊಪಗಾಂಡ ಮೂವಿ ಅಂತಿದ್ದಾರೆ. ಟೀಕೆ ಟೀಪ್ಪಣಿಗಳ ನಡುವೆ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಸುಂಟರಗಾಳಿ ಎಬ್ಬಿಸಿದೆ ಧುರಂಧರ್ ಸೀಕ್ವೆಲ್. ಹಾಗಾದ್ರೆ ದಾವೂದ್ ಡಿ ಕಂಪನಿ, ಪ್ರಧಾನಿ ಮೋದಿ, ಅಜಿತ್ ದೋವಲ್‌ಗೂ ಈ ಸಿನಿಮಾಗೂ ಏನು ಲಿಂಕ್ ಅಂತೀರಾ..? ಈ ಡಿಟೈಲ್ಡ್ ರಿಪೋರ್ಟ್ ಒಮ್ಮೆ ನೋಡಿ.
ಧುರಂಧರ್ ದಿ ರಿವೆಂಜ್.. ಎಷ್ಟು ರಿಯಲ್..? ಎಷ್ಟು ರೀಲ್..?
ಮೋದಿ, ದಾವೂದ್ ಇಬ್ರಾಹಿಂ ಪಾತ್ರಗಳೇ ಸಖತ್ ಸೆನ್ಸೇಷನ್
ರಣ್ವೀರ್ ಸಿಂಗ್ ನಟನೆಯ ಹಾಗೂ ಆದಿತ್ಯ ಧರ್ ನಿರ್ದೇಶನದ ಬ್ಲಾಕ್ ಬಸ್ಟರ್ ಹಿಟ್ ಧುರಂಧರ್ ಚಿತ್ರದ ಸೀಕ್ವೆಲ್ ಧುರಂಧರ್ ದಿ ರಿವೆಂಜ್ ಕೂಡ ಪ್ರೇಕ್ಷಕರಿಗೆ ನಿರೀಕ್ಷೆಗೂ ಮೀರಿ ರುಚಿಸುತ್ತಿದೆ. ರಿಲೀಸ್‌ಗೂ ಮುನ್ನ ಪೇಯ್ಡ್ ಪ್ರೀಮಿಯರ್ ಶೋಗಳಿಂದಲೇ 52 ಕೋಟಿ ಗಳಿಸಿ, ಎಲ್ಲರ ಹುಬ್ಬೇರಿಸಿತ್ತು ಧುರಂಧರ್-2. ಇದೀಗ ಮೊದಲ ದಿನ ಬರೋಬ್ಬರಿ 240 ಕೋಟಿ ರೂಪಾಯಿ ಕಲೆಕ್ಷನ್ ಮಾಡೋ ಮೂಲಕ ಭಾರತೀಯ ಚಿತ್ರರಂಗದ ಒಂದಷ್ಟು ದಾಖಲೆಗಳನ್ನ ಸರಿಗಟ್ಟಿದೆ.
ಅಂದಹಾಗೆ ಧುರಂಧರ್ ದಿ ರಿವೆಂಜ್ ಚಿತ್ರ ಕಣ್ತುಂಬಿಕೊಂಡಂತಹ ಬಹುತೇಕ ಮಂದಿ, 113 ವರ್ಷಗಳ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದೊಂದು ಮಾಸ್ಟರ್‌ಪೀಸ್ ಹಾಗೂ ಮಾಸ್ಟರ್‌ಕ್ಲಾಸ್ ಮೂವಿ ಅಂತ ಬಹುಪರಾಕ್ ಹೇಳ್ತಿದ್ದಾರೆ. ಸಾಮಾನ್ಯ ಪ್ರೇಕ್ಷಕಪ್ರಭುಗಳಷ್ಟೇ ಅಲ್ಲ, ಜೂನಿಯರ್ ಎನ್‌ಟಿಆರ್, ಅಲ್ಲು ಅರ್ಜುನ್, ಮಹೇಶ್ ಬಾಬು, ವಿಜಯ್ ದೇವರಕೊಂಡ, ರಾಮ್ ಗೋಪಾಲ್ ವರ್ಮಾ, ಎಸ್ ಎಸ್ ರಾಜಮೌಳಿ ಅಂತಹ ಸ್ಟಾರ್‌ಗಳೇ ಈ ಸಿನಿಮಾನ ಕೊಂಡಾಡಿ, ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಪ್ರಶಂಸೆ ವ್ಯಕ್ತಪಡಿಸಿ ಪೋಸ್ಟ್ ಹಾಕಿದ್ದಾರೆ.
ಅಜಿತ್ ದೋವಲ್, ಸ್ಪೈ ಏಜೆಂಟ್ ಜಸ್ಕಿರತ್ ಕಾಲ್ಪನಿಕವೇ..?!
ನಿಜಕ್ಕೂ ಇದು ಪ್ರೊಪಗಾಂಡ ಮೂವಿನಾ..? ಟೀಕೆಗಳು ಏಕೆ..?!
ಪ್ರಧಾನಿ ನರೇಂದ್ರ ಮೋದಿ ಹಾಗೂ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಕಮ್ ಡ್ರಗ್ ಡೀಲರ್ ದಾವೂದ್ ಇಬ್ರಾಹಿಂ ಪಾತ್ರಗಳೇ ಧುರಂಧರ್ ದಿ ರಿವೆಂಜ್‌ನ ಬಿಗ್ಗೆಸ್ಟ್ ಸೆನ್ಸೇಷನ್. ಇಂಡಿಯಾದ ರಕ್ಷಾ ಕವಚ, ಬಹುದೊಡ್ಡ ಸ್ಪೈ ಮಾಸ್ಟರ್ ಅಜಿತ್ ದೋವಲ್ ಹಾಗೂ ಸ್ಪೈ ಏಜೆಂಟ್ ಹಮ್ಜಾ ಕಮ್ ಜಸ್ಕಿರತ್ ಸಿಂಗ್ ಈ ಚಿತ್ರದ ಅಸಲಿ ಮಾಸ್ಟರ್‌ಮೈಂಡ್ಸ್. ಆದ್ರೆ ಈ ಸಿನಿಮಾ ಬರೀ ಕಾಲ್ಪನಿಕವಾ ಅಥ್ವಾ ನೈಜ ಘಟನೆ ಆಧಾರಿತ ಅಂಶಗಳಿಂದ ಕೂಡಿರೋ ಸತ್ಯ ದರ್ಶನವಾ ಅನ್ನೋ ಪ್ರಶ್ನೆ ಮೂಡಲಿದೆ.
ಎಲ್ಲಕ್ಕಿಂತ ಮಿಗಿಲಾಗಿ ಇದೊಂದು ಬಿಜೆಪಿ ಪ್ರೊಪಗಾಂಡ ಮೂವಿ ಅನ್ನೋದು ಹಲವರ ವಾದವಾಗಿದೆ. ಅದಕ್ಕೆ ಪೂರಕವಾಗಿ ಸಾಕಷ್ಟು ಟೀಕೆ, ಟಿಪ್ಪಣಿಗಳು ವ್ಯಕ್ತವಾಗ್ತಿವೆ. ಎಡಪಂಥೀಯ ಧೋರಣೆಗಳನ್ನ ಬೆಂಬಲಿಸೋ ಮಂದಿ ಹಾಗೂ ಕಾಂಗ್ರೆಸ್ ಪಕ್ಷದವರು ಇದನ್ನ ಪಕ್ಕಾ ಪ್ರೊಪಗಾಂಡ ಮೂವಿ ಅಂತ ಲೇಬಲ್ ಮಾಡಿ, ನೆಗೆಟೀವ್ ಕ್ಯಾಂಪೇನ್ ಶುರು ಮಾಡಿದ್ದಾರೆ. ಅದಕ್ಕೆ ನಮ್ಮ ಮಂಡ್ಯದ ಮಾಜಿ ಸಂಸದೆ ಕಮ್ ಮೋಹಕತಾರೆ ರಮ್ಯಾ ಹಾಗೂ ಬಹುಭಾಷಾ ನಟ ಪ್ರಕಾಶ್ ರೈ ಅವ್ರ ಅಭಿಪ್ರಾಯಗಳೇ ಪ್ರತ್ಯಕ್ಷ ಸಾಕ್ಷಿ.
ಧುರಂಧರ್-2 ಪ್ರೊಪಗಾಂಡ ಮೂವಿ ಎಂದ ನಟಿ ರಮ್ಯಾ
ಹಣ, ಸಮಯ ವೇಸ್ಟ್ ಮಾಡ್ಬೇಡಿ ಎಂದ ಮಾಜಿ ಸಂಸದೆ
ಮೋಹಕತಾರೆ, ಮಾಜಿ ಸಂಸದೆ ರಮ್ಯಾ ಈ ಬಗ್ಗೆ ನೆಗೆಟಿವ್ ಆಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೊಂದು ಪ್ರೊಪಗಾಂಡ ಮೂವಿ ಎಂದಿರೋ ರಮ್ಯಾ, ಗನ್, ಬಾಂಬ್ ವಯಲೆನ್ಸ್ ಬಿಟ್ಟು ಬೇರೇನೂ ಇಲ್ಲ. ಥಿಯೇಟರ್‌ನಲ್ಲಿ ಜನ ಶಿಳ್ಳೆ, ಚಪ್ಪಾಳೆ ಹೊಡೆಯುತ್ತಿಲ್ಲ. ಸಿಕ್ಕಾಪಟ್ಟೆ ಬೋರ್ ಆಗುತ್ತೆ. ಬೋರಿಂಗ್ ಟೆಕ್ಸ್ಟ್ ಬುಕ್‌ನ ನೆವರ್ ಎಂಡಿಂಗ್ ಚಾಪ್ಟರ್ ಓದಿದಂತಿದೆ ಧುರಂಧರ್ 2. ನಿಮ್ಮ ಸಮಯ ಹಾಗೂ ಹಣವನ್ನು ವ್ಯರ್ಥ ಮಾಡಿಕೊಳ್ಳಬೇಡಿ ಎಂದಿದ್ದಾರೆ.
‘ನಾ ಧುರಂಧರ್‌ನಿಂದ ದೂರ.. ನೀವು?’ ಎಂದ ಪ್ರಕಾಶ್ ರೈ
NTR, ಅಲ್ಲು, ಮಹೇಶ್, ವಿಜಯ್, ಮೌಳಿ ಕಾಲೆಳೆದ ನಟ
ಬಹುಭಾಷಾ ನಟ ಪ್ರಕಾಶ್ ರೈ ಕೂಡ ಈ ಧುರಂಧರ್ ಸಿನಿಮಾದ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ನಾನು ಧುರಂಧರ್‌ನಿಂದ ದೂರ. ನೀವು..? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಧುರಂಧರ್ ದಿ ರಿವೆಂಜ್ ಪ್ರೀಮಿಯರ್ ಶೋ ಬಳಿಕ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರೋ ತೆಲುಗಿನ ಸೂಪರ್ ಸ್ಟಾರ್‌ಗಳಾದ ಅಲ್ಲು ಅರ್ಜುನ್, ಜೂನಿಯರ್ ಎನ್‌ಟಿಆರ್, ವಿಜಯ್ ದೇವರಕೊಂಡ ಹಾಗೂ ಮಹೇಶ್ ಬಾಬು ಬಗ್ಗೆ ಲೇವಡಿ ಮಾಡಿದ್ದಾರೆ. ಪ್ರೊಪಗಾಂಡದ ಗುರುತುಗಳು ಸೌತ್‌ಗೂ ಹರಡುತ್ತಿವೆ ಎಂದಿದ್ದಾರೆ.
ಎಲೆಕ್ಷನ್‌ಗೆ ಫಂಡಿಂಗ್ ಮಾಡ್ತಿದ್ರಾ ದಾವೂದ್ ಇಬ್ರಾಹಿಂ..?
ಬಾಲಿವುಡ್‌ನ ನಿಯಂತ್ರಿಸಿದವ್ರು ಫಂಡ್ ಮಾಡಿರಲಾರರೇ..?!
ಧುರಂಧರ್-2ನಲ್ಲಿ ಯುಪಿ ಎಲೆಕ್ಷನ್ಸ್‌ಗೆ ದಾವೂದ್ ಇಬ್ರಾಹಿಂ ಫಂಡಿಂಗ್ ಮಾಡೋದ್ರ ದೃಶ್ಯವಿದೆ. ಅದು ನೇಪಾಳದ ಮೂಲಕ ಇಂಡಿಯಾಗೆ ಸೇರುವ ರೂಟ್ ಮ್ಯಾಪ್ ಕೂಡ ಇದೆ. ಆದ್ರೆ ಭಾರತದಲ್ಲಿ ಮೋದಿ ಸರ್ಕಾರ ಬರೋಕೂ ಮುನ್ನ ಎಲೆಕ್ಷನ್ಸ್‌ಗೆ ದಾವೂದ್ ಹಾಗೂ ಟೆರರಿಸ್ಟ್ ಗ್ರೂಪ್‌ಗಳು ಫಂಡ್ ಮಾಡ್ತಿದ್ವಾ ಅನ್ನೋ ಚರ್ಚೆ ಈಗ ದೊಡ್ಡ ಮಟ್ಟದಲ್ಲಿ ಶುರುವಾಗಿದೆ.
ಅಂದಹಾಗೆ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಕಮ್ ಡ್ರಗ್ ಡೀಲರ್ ದಾವೂದ್ ಇಬ್ರಾಹಿಂ, ಪಾಕಿಸ್ತಾನದಲ್ಲಿ ಅಡಗಿಕೊಂಡೇ ಭಯೋತ್ಪಾದನೆಗೆ ಸಾಥ್ ನೀಡಿದವನು. ಆತ ತನ್ನ ಡಿ ಕಂಪನಿ ಮೂಲಕ ಇಡೀ ಬಾಲಿವುಡ್‌ನ ಬರೋಬ್ಬರಿ ಒಂದೂವರೆ ದಶಕದ ಕಾಲ ಆಳಿದವನು. ಬಿಟೌನ್ ನಿರ್ಮಾಪಕರುಗಳು ಬ್ಯಾಂಕ್‌ನಿಂದ ಸಾಲ ಸಿಗದೇ ಇದ್ದಾಗ, ದಾವೂದ್ ಡಿ ಕಂಪನಿಯಿಂದ ದುಡ್ಡು ತಂದು ಸಿನಿಮಾ ಮಾಡಿದ ನಿದರ್ಶನಗಳಿವೆ. ಹಣ ಹಿಂದಿರುಗಿಸಲಾಗದವ ಮೇಲೆ ಅಟ್ಯಾಕ್, ಬೆದರಿಕೆಗಳು ಸರ್ವೇ ಸಾಮಾನ್ಯ. ಅದಕ್ಕೆ ಟಿ ಸೀರೀಸ್‌ನ ಗುಲ್ಶನ್ ಕುಮಾರ್ ಪ್ರಕರಣಕ್ಕಿಂತ ಮತ್ತೊಂದು ಪ್ರತ್ಯಕ್ಷ ಸಾಕ್ಷಿ ಬೇಕಿಲ್ಲ. ಒಂದು ಕಾಲದಲ್ಲಿ ಇಡೀ ಬಾಲಿವುಡ್‌ನ ಕಂಟ್ರೋಲ್ ಮಾಡ್ತಿದ್ದ ದಾವೂದ್ ಇಬ್ರಾಹಿಂ, ಇಂಡಿಯಾದಲ್ಲಿನ ಎಲೆಕ್ಷನ್‌ಗಳಿಗೆ ಫಂಡ್ ಮಾಡಿರಲ್ಲ ಅನ್ನೋ ಗ್ಯಾರಂಟಿ ಏನಿದೆ ಅಲ್ಲವೇ..? ಅನ್ನೋದು ಕೂಡ ಹಲವರ ವಾದವಾಗಿದೆ.
ಎಲ್ಲಾ ಟೆರರಿಸ್ಟ್ ಗ್ರೂಪ್‌ಗಳಿಗೆ ಬಡೇ ಸಾಬ್ ದಾವೂದ್
ಇನ್ನೂ ಸಿನಿಮಾದ ಮೊದಲ ಭಾಗದಲ್ಲಿ ಬಡೇ ಸಾಬ್ ಯಾರು ಅನ್ನೋದನ್ನ ತೋರಿಸಿರಲಿಲ್ಲ. ಆದ್ರೀಗ ದಿ ರಿವೆಂಜ್‌ನಲ್ಲಿ ಐಎಸ್‌ಐ ಮೇಜರ್, ರಾಜಕಾರಣಿಗಳು, ಸ್ಪೆಷಲ್ ಟಾಸ್ಕ್ ಫೋರ್ಸ್ ಆಫೀಸರ್, ಬಲೂಚಿ ಲೀಡರ್ಸ್ ಸೇರಿದಂತೆ ಎಲ್ಲರೂ ದಾವೂದ್ ಇಬ್ರಾಹಿಂ ಅನ್ನೋ ಬಡೇ ಸಾಬ್ ಕುಣಿಸಿದಂತೆ ಕುಣಿಯುವ ಗೊಂಬೆಗಳು ಅನ್ನೋದನ್ನ ತೋರಿಸಲಾಗಿದೆ.
ಡಿಮಾನಿಟೈಸೇಷನ್‌ಗೆ ಆಪರೇಷನ್ ಗ್ರೀನ್ ಲೀಫ್ ಲಿಂಕ್
ದಾವೂದ್ ದಾಳಿಗೆ.. ಮೋದಿ ನೋಟ್ ಬ್ಯಾನ್ ಪ್ರತಿದಾಳಿ..!
ಯಾವಾಗ ಬಡೇ ಸಾಬ್ ದಾವೂದ್ ಇಬ್ರಾಹಿಂ ಇಂಡಿಯಾದಲ್ಲಿನ ಚುನಾವಣೆಗೆ 60 ಸಾವಿರ ಕೋಟಿ ಹಣವನ್ನ ಪಾಕಿಸ್ತಾನದಿಂದ ಕಳಿಸಲು ಸಜ್ಜಾಗ್ತಾರೋ, ಆಗ ಆಪರೇಷನ್ ಗ್ರೀನ್ ಲೀಫ್‌ನ ತರ್ತಾರೆ ಅಜಿತ್ ದೋವಲ್. ಆಗಲೇ ಪ್ರಧಾನಿ ಮೋದಿ ನೋಟ್ ಬ್ಯಾನ್ ಘೋಷಣೆ ಮಾಡುವುದು ಅನ್ನೋ ತರಹ ಚಿತ್ರದಲ್ಲಿ ಬಿಂಬಿಸಲಾಗಿದೆ. ಅದು ಎಷ್ಟರ ಮಟ್ಟಿಗೆ ರೀಲ್ ಅಥ್ವಾ ರಿಯಲ್ ಅನ್ನೋದು ಕೂಡ ಚರ್ಚೆಗೆ ಕಾರಣವಾಗ್ತಿದೆ.
ದಾವೂದ್ ಇಬ್ರಾಹಿಂನ ಮುಗಿಸದೆ ಇಂಡಿಯಾಗೆ ವಾಪಸ್ ಆಗ್ತಿದ್ದೇನೆ ಅಂತ ಪಚ್ಚಾತ್ತಾಪ ಪಡುವ ಇಂಡಿಯನ್ ಸ್ಪೈ ಏಜೆಂಟ್ ಜಸ್ಕಿರತ್ ಸಿಂಗ್ ಪಾತ್ರಧಾರಿ ರಣ್ವೀರ್‌ಗೆ ಅಲ್ಲಿನ PAP ರಾಜಕಾರಣಿ ಜಮೀಲ್ ಜಮಾಲಿ ಕೊಡೋ ಟ್ವಿಸ್ಟ್ ಇಂಟರೆಸ್ಟಿಂಗ್ ಆಗಿದೆ. ನಾನು ಈಗಾಗ್ಲೇ ಅವನಿಗೆ ಡ್ರಗ್ ನೀಡಿ ಆಗಿದೆ. ಅದೊಂದು ಸ್ಲೋ ಪಾಯಿಸನ್. ಅದ್ರಿಂದಲೇ ಆತ ಇಂದು ಹಾಸಿಗೆ ಹಿಡಿಯುವಂತಾಗಿದೆ ಅಂತಾರೆ. ಅಷ್ಟೇ ಅಲ್ಲ, ಆ ಜಮೀಲ್ ಜಮಾಲಿ ಪಾತ್ರಧಾರಿ ರಾಕೇಶ್ ಬೇಡಿ ಬರೋಬ್ಬರಿ 45 ವರ್ಷಗಳಿಂದಲೇ ಪಾಕ್‌ನಲ್ಲಿ ಗೂಢಚರ್ಯೆ ಮಾಡಿಕೊಂಡು, ಭಾರತ ದೇಶದ ಪರ ಸೇವೆ ಸಲ್ಲಿಸುತ್ತಿದ್ದಾರೆ ಅನ್ನೋದು ಕೂಡ ಚರ್ಚಾ ವಿಷಯವಾಗಿದೆ.
