ಕನ್ನಡ ಚಿತ್ರರಂಗದ ಖ್ಯಾತ ನಟ, ದೊಡ್ಮನೆ ಕುಡಿ ಧೀರೆನ್ ರಾಮ್ ಕುಮಾರ್ ಈಗ’ಖಾಕಿ ಖದರ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಶಾಖಾಹಾರಿಯಂತಹ ಸೂಪರ್ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ಸಂದೀಪ್ ಸುಂಕದ್ ಹಾಗೂ ಧೀರೆನ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರ ಪಬ್ಬಾರ್‌ನ ಕ್ಯಾರೆಕ್ಟರ್ ಇಂಟ್ರೂಡಕ್ಷನ್ ಟೀಸರ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ಅದ್ಧೂರಿಯಾಗಿ ಬಿಡುಗಡೆಯಾಗಿದೆ.
ವಿಭಿನ್ನವಾಗಿ ಮೂಡಿಬಂದ ಟೀಸರ್
ಬಿಡುಗಡೆಯಾಗಿರುವ ಈ ಇಂಟ್ರೂಡಕ್ಷನ್ ಝಲಕ್ ಬರೊಬ್ಬರಿ 4 ನಿಮಿಷ 19 ಸೆಕೆಂಡ್‌ಗಳಷ್ಟಿದೆ. ಸಾಧಾರಣ ಟೀಸರ್‌ಗಳಿಗಿಂತ ಭಿನ್ನವಾಗಿದ್ದು, ಒಂದು ಕಥೆಯ ಹಂದರದೊಂದಿಗೆ ನಾಯಕನ ಪಾತ್ರವನ್ನು ಪರಿಚಯಿಸಿರುವುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಟೀಸರ್‌ನ ಕೊನೆಯಲ್ಲಿ ಧೀರೆನ್ ಅವರು ಹೊಸ ಗೆಟಪ್ ಹಾಗೂ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಧ್ವನಿ ಮತ್ತು ಖದರ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ನದಿ ತೀರದ ರಹಸ್ಯ ಕಥೆ
‘ಪಬ್ಬಾರ್’ ಎಂಬ ಹೆಸರೇ ಸೂಚಿಸುವಂತೆ, ಹಿಮಾಚಲ ಪ್ರದೇಶದ ಶಿಮ್ಲಾ ಸಮೀಪವಿರುವ ಪಬ್ಬಾರ್ ನದಿ ಈ ಸಿನಿಮಾದ ಕಥಾಹಂದರದ ಕೇಂದ್ರಬಿಂದು. ಇದೊಂದು ಕ್ರೈಂ ಮತ್ತು ಅಡ್ವೆಂಚರಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಒಂದು ನಿಗೂಢ ಪ್ರಕರಣವನ್ನು ಭೇದಿಸುವ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ ಎನ್ನಲಾಗಿದೆ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಅವರ ಪುತ್ರಿ ಅಮೃತಾ ಪ್ರೇಮ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ತಾಂತ್ರಿಕ ಶ್ರೀಮಂತಿಕೆ ಮತ್ತು ತಾರಾಬಳಗ
ಚಿತ್ರಕ್ಕೆ ಮಯೂರ್ ಅಂಬೆಕಲ್ಲು ಅವರ ಸುಮಧುರ ಹಾಗೂ ಸಸ್ಪೆನ್ಸ್ ತುಂಬಿದ ಸಂಗೀತವಿದ್ದು, ವಿಶ್ವಜಿತ್ ರಾವ್ ಅವರು ಹಿಮಾಚಲ ಪ್ರದೇಶದ ಸುಂದರ ತಾಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಚಿತ್ರದಲ್ಲಿ ಅನುಭವಿ ಕಲಾವಿದರ ದಂಡೇ ಇದೆ. ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಹಿರಿಯ ನಟ ರಾಮಕೃಷ್ಣ, ಭರತ್ ಜಿ.ಬಿ ಮತ್ತು ಶ್ರೀಹರ್ಷ ಗೋಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಒಟ್ಟಾರೆಯಾಗಿ ಶಾಖಾಹಾರಿ ಮೂಲಕ ಪ್ರಶಂಸೆ ಗಳಿಸಿದ್ದ ಸಂದೀಪ್ ಸುಂಕದ್, ಈಗ ಧೀರೆನ್ ಅವರನ್ನು ಮಾಸ್ ಮತ್ತು ಕ್ಲಾಸ್ ಅವತಾರದಲ್ಲಿ ತೆರೆಗೆ ತರುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದ ಕೇವಲ ಒಂದೇ ಒಂದು ಲುಕ್ ಇಷ್ಟು ಕುತೂಹಲವಾಗಿದ್ದರೆ, ಇನ್ನೂ ಸಿನಿಮಾ ಹೇಗಿರಲಿದೆ ಎಂದು ಸಿನಿ ಪ್ರೇಕ್ಷಕರು ಕುತೂಹಲ ವ್ಯಕ್ತಪಡಿದ್ದಾರೆ.
