ಧರ್ಮೇಂದ್ರ ನಿಧನ ಸುದ್ದಿ ಸಂಪೂರ್ಣ ಸುಳ್ಳು: ನಟಿ ಹೇಮಮಾಲಿನಿ ಸ್ಪಷ್ಟನೆ

Untitled design 2025 11 11T115710.827

ಮುಂಬೈ: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನರಾಗಿದ್ದಾರೆ ಎಂಬ ಸುದ್ದಿಯು ಸೋಮವಾರ ಬೆಳಗ್ಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಆದರೆ ಇದೀಗ ಆ ಸುದ್ದಿ ಸಂಪೂರ್ಣ ಸುಳ್ಳು ಎಂದು ಪತ್ನಿ ಹಾಗೂ ನಟಿ ಹೇಮಾಮಾಲಿನಿ ಸ್ಪಷ್ಟನೆ ನೀಡಿದ್ದು, ಈ ವಿಷಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಧರ್ಮೇಂದ್ರ ಅವರ ಆರೋಗ್ಯದ ಸ್ಥಿತಿ ಬಗ್ಗೆ ಅನೇಕ ಊಹಾಪೋಹಗಳು ಹರಿದಾಡುತ್ತಿದ್ದು, ಅವರು ಮುಂಬೈನ ಬೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದ ಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ ಎಂದು ತಿಳಿದು ಬಂದಿದೆ. ಆದರೆ ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣ ಖಾತೆಗಳು “ಧರ್ಮೇಂದ್ರ ನಿಧನರಾಗಿದ್ದಾರೆ” ಎಂದು ಪ್ರಕಟಿಸಿದ ಸುದ್ದಿ, ಸುಳ್ಳು ಎಂಬುದನ್ನು ಹೇಮಾಮಾಲಿನಿ ಅಧಿಕೃತವಾಗಿ ತಿಳಿಸಿದ್ದಾರೆ.

ಹೇಮಾಮಾಲಿನಿ ಅವರು ತಮ್ಮ ಟ್ವಿಟರ್ (X) ಖಾತೆಯ ಮೂಲಕ ಸ್ಪಷ್ಟನೆ ನೀಡುತ್ತಾ, “ನನ್ನ ಪತಿಯ ಬಗ್ಗೆ ಹರಿದಾಡುತ್ತಿರುವ ಈ ಸುಳ್ಳು ಸುದ್ದಿಯಿಂದ ನಾನು ಬೆಚ್ಚಿಬಿದ್ದಿದ್ದೇನೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವು ಜವಾಬ್ದಾರಿಯುತ ಮಾಧ್ಯಮಗಳು ಕೂಡ ದೃಢೀಕರಣವಿಲ್ಲದೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿರುವುದು ಅತ್ಯಂತ ಬೇಜವಾಬ್ದಾರಿಯ ಕೃತ್ಯ,” ಎಂದು ಹೇಳಿದ್ದಾರೆ.

“ಒಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಅವರ ಕುಟುಂಬ ಆತಂಕದಲ್ಲಿದ್ದಾಗ, ಈ ರೀತಿಯ ಸುಳ್ಳು ಸುದ್ದಿಗಳು ಕುಟುಂಬಕ್ಕೆ ಆತಂಕವನ್ನುಂಟುಮಾಡುತ್ತವೆ. ದಯವಿಟ್ಟು ಕುಟುಂಬದ ಗೌಪ್ಯತೆ ಹಾಗೂ ಭಾವನೆಗಳನ್ನು ಗೌರವಿಸಿ,” ಎಂದು ವಿನಂತಿಸಿದ್ದಾರೆ.

ಧರ್ಮೇಂದ್ರ ಅವರು ಬಾಲಿವುಡ್‌ನಲ್ಲಿ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. 1960ರ ದಶಕದಿಂದ ಸಿನಿರಂಗಕ್ಕೆ ಕಾಲಿಟ್ಟ ಅವರು, ಪ್ರಾರಂಭದಲ್ಲಿ ಶೋಲೇ, ಚುಪ್ಕೆ ಚುಪ್ಕೆ, ಯಾದೋನ್ ಕಿ ಬಾರಾತ್, ಸತ್ಯಕಾಮ್ ಮುಂತಾದ ಹಲವು ಅಜರಾಮರ ಚಿತ್ರಗಳು ಸೇರಿವೆ. ಪ್ರೇಕ್ಷಕರ ಹೃದಯದಲ್ಲಿ ಅವರು “ಹೀ-ಮ್ಯಾನ್ ಆಫ್ ಬಾಲಿವುಡ್” ಎಂಬ ಬಿರುದನ್ನು ಗಳಿಸಿದ್ದರು.

ಧರ್ಮೇಂದ್ರ ಅವರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು, ಕೆಲವು ತಿಂಗಳ ಹಿಂದೆ ಅವರಿಗೆ ಸಣ್ಣ ಶಸ್ತ್ರಚಿಕಿತ್ಸೆ ನಡೆದಿತ್ತು. ಅದಾದ ಬಳಿಕ ಅವರು ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಈ ಬಾರಿ ಆಸ್ಪತ್ರೆಗೆ ದಾಖಲಾದ ವಿಷಯವನ್ನು ಕೆಲವು ಮಾಧ್ಯಮಗಳು ನಿಧನರಾಗಿದ್ದಾರೆ ಎಂಬ ಸುದ್ದಿ ಪ್ರಸಾರ ಮಾಡಿದ್ದವು.

ಧರ್ಮೇಂದ್ರ ಅವರ ಅಭಿಮಾನಿಗಳು ಈ ಸುದ್ದಿಯಿಂದ ಆಘಾತಕ್ಕೊಳಗಾಗಿದ್ದರು. ನಂತರ ಹೇಮಾಮಾಲಿನಿ ಅವರ ಟ್ವೀಟ್‌ ಬಂದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ “ಧರ್ಮೇಂದ್ರ ಲಾಂಗ್ ಲೈವ್” ಹಾಗೂ “ಗೇಟ್ ವೆಲ್ ಸೂನ್ ಧರ್ಮೇಂದ್ರ ಸರ್” ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗಿದ್ದವು.

Exit mobile version