ಪಟ್ಟೆ ತಲೆ ಹೆಬ್ಬಾತು ಪ್ರಕರಣ: ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್ ದಂಪತಿ

ಪಟ್ಟೆ ತಲೆ ಹೆಬ್ಬಾತು ಪ್ರಕರಣ

ಬೆಂಗಳೂರು ಸೆ. 09: ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತ ವ್ಯಾಪ್ತಿಗೆ ಬರುವ ಪಟ್ಟೆ ತಲೆ ಹೆಬ್ಬಾತುಗಳನ್ನು ಸಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಟಿ. ನರಸೀಪುರ ನ್ಯಾಯಾಲಯ ನೀಡಿರುವ ಸಮನ್ಸ್ ಪ್ರಶ್ನಿಸಿ ನಟ ದರ್ಶನ್, ಅವರ ಪತ್ನಿ ವಿಜಯಲಕ್ಷ್ಮೀ ಹಾಗೂ ಫಾರ್ಮ್‌ಹೌಸ್ ಮ್ಯಾನೇಜರ್ ನಾಗರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ಹಾಗೂ ಟಿ. ನರಸೀಪುರ ನ್ಯಾಯಾಲಯ ನೀಡಿರುವ ಸಮನ್ಸ್‌ಗಳನ್ನು ರದ್ದುಪಡಿಸುವಂತೆ ಕೋರಿ ಮೂವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಫಾರ್ಮ್‌ಹೌಸ್‌ನಲ್ಲಿ ಪತ್ತೆಯಾಗಿದ್ದ ನಾಲ್ಕು ಪಟ್ಟೆ ತಲೆ ಹೆಬ್ಬಾತುಗಳನ್ನು ತಾವು ಸಾಕಿರಲಿಲ್ಲ ಎಂದು ಅರ್ಜಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಏನಿದು ಪ್ರಕರಣ?

2023ರ ಜನವರಿ 21ರಂದು ಅರಣ್ಯಾಧಿಕಾರಿಗಳು ನಟ ದರ್ಶನ್ ಅವರಿಗೆ ಸೇರಿದ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ಬರುವ ನಾಲ್ಕು ಪಟ್ಟೆ ತಲೆ ಹೆಬ್ಬಾತುಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಟಿ. ನರಸೀಪುರ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ದರ್ಶನ್, ವಿಜಯಲಕ್ಷ್ಮೀ ಹಾಗೂ ನಾಗರಾಜ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಇದೀಗ ಈ ಸಮನ್ಸ್‌ಗಳನ್ನು ಪ್ರಶ್ನಿಸಿ ಮೂವರು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಅರ್ಜಿಯಲ್ಲಿ ಏನಿದೆ?

ಫಾರ್ಮ್‌ಹೌಸ್‌ನಲ್ಲಿ ವಿವಿಧ ಜಾತಿಯ ಪಕ್ಷಿಗಳನ್ನು ಸಾಕಲಾಗುತ್ತಿತ್ತು. ಅವುಗಳೊಂದಿಗೆ ಈ ನಾಲ್ಕು ಪಟ್ಟೆ ತಲೆ ಹೆಬ್ಬಾತುಗಳು ಹೇಗೋ ಬಂದು ಸೇರಿಕೊಂಡಿದ್ದವು. ಅರಣ್ಯಾಧಿಕಾರಿಗಳು ತಪಾಸಣೆ ನಡೆಸಿದ ಬಳಿಕವಷ್ಟೇ ಈ ಪಕ್ಷಿಗಳ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

‘ನಾವು ಆ ಪಟ್ಟೆ ತಲೆ ಹೆಬ್ಬಾತುಗಳನ್ನು ಸಾಕಿರಲಿಲ್ಲ’ ಎಂದು ದರ್ಶನ್ ಹಾಗೂ ತಂಡದ ಪರವಾಗಿ ಸಲ್ಲಿಸಿರುವ ಅರ್ಜಿಯಲ್ಲಿ ಸ್ಪಷ್ಟನೆ ನೀಡಲಾಗಿದೆ.

ಇದಲ್ಲದೆ, ವಿಜಯಲಕ್ಷ್ಮೀ ಅವರು ಫಾರ್ಮ್‌ಹೌಸ್‌ಗೆ ಭೇಟಿ ನೀಡುವುದಿಲ್ಲ. ದರ್ಶನ್ ಕೂಡ ಅಪರೂಪಕ್ಕೆ ಮಾತ್ರ ಫಾರ್ಮ್‌ಹೌಸ್‌ಗೆ ತೆರಳುತ್ತಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಪ್ರಕರಣ ಹಾಗೂ ನ್ಯಾಯಾಲಯದ ಸಮನ್ಸ್‌ಗಳನ್ನು ರದ್ದುಪಡಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಲಾಗಿದೆ.

Exit mobile version