ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಸೇರಿದಂತೆ ಇತರ ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ಇಂದು ಬೆಂಗಳೂರಿನ 64ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದೆ. ಈ ಪ್ರಕರಣದಲ್ಲಿ ದರ್ಶನ್, ಲಕ್ಷ್ಮಣ್, ಜಗದೀಶ್, ನಾಗರಾಜ್, ಮತ್ತು ಪ್ರದೂಷ್ ಸೇರಿದಂತೆ ಆರೋಪಿಗಳು ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಮತ್ತು ಇತರ ಆರೋಪಿಗಳನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಸ್ಥಳಾಂತರಕ್ಕೆ ದರ್ಶನ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೋಪಿಗಳನ್ನು ಬೇರೆ ಜೈಲಿಗೆ ಕಳುಹಿಸಬಾರದು ಎಂದು ವಾದಿಸಿದ್ದಾರೆ. ಈ ಅರ್ಜಿಯ ವಿಚಾರಣೆಯ ಜೊತೆಗೆ, ಜೈಲಿನಲ್ಲಿ ದರ್ಶನ್‌ಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಂತೆ ಕೋರಿ ಮತ್ತೊಂದು ಅರ್ಜಿಯನ್ನೂ ಸಲ್ಲಿಸಲಾಗಿದೆ.
ಜೈಲಿನಲ್ಲಿ ಸೌಲಭ್ಯಕ್ಕಾಗಿ ದರ್ಶನ್‌ರಿಂದ ಅರ್ಜಿ
ದರ್ಶನ್‌ಗೆ ಜೈಲಿನಲ್ಲಿ ಎರಡು ದಿಂಬು, ಎರಡು ಬೆಡ್ ಶೀಟ್, ದಟ್ಟ, ಮತ್ತು ಹೆಚ್ಚುವರಿ ಬಟ್ಟೆಗಳನ್ನು ಒದಗಿಸುವಂತೆ ಅವರ ವಕೀಲರು ಕೋರಿದ್ದಾರೆ. ಜೈಲು ಮ್ಯಾನ್ಯುಯಲ್ ಪ್ರಕಾರ ಈ ಸೌಲಭ್ಯಗಳನ್ನು ಒದಗಿಸಬೇಕು ಎಂದು ವಾದಿಸಲಾಗಿದೆ. ಆದರೆ, ದರ್ಶನ್‌ಗೆ ಕೇವಲ ಒಂದು ಬೆಡ್ ಮತ್ತು ಒಂದು ದಿಂಬು ಮಾತ್ರ ಒದಗಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆಯೂ ಇಂದಿನ ವಿಚಾರಣೆಯಲ್ಲಿ ನ್ಯಾಯಾಲಯ ತೀರ್ಪು ನೀಡುವ ಸಾಧ್ಯತೆ ಇದೆ.
ಪವಿತ್ರಾಗೌಡ ಜಾಮೀನು ಅರ್ಜಿ
ಈ ಪ್ರಕರಣದ ಆರೋಪಿ ಪವಿತ್ರಾಗೌಡ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯೂ ಇಂದು ವಿಚಾರಣೆಗೆ ಬರಲಿದೆ. ಅವರ ಪರ ವಕೀಲ ಬಾಲನ್, ಹೊಸ ಗ್ರೌಂಡ್ಸ್ ಆಧರಿಸಿ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ BNS ಆಕ್ಟ್ ಬದಲಿಗೆ IPC ಸೆಕ್ಷನ್‌ನಡಿ ಆರೋಪಗಳನ್ನು ದಾಖಲಿಸಿರುವುದನ್ನು ಪ್ರಶ್ನಿಸಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ. ಆದರೆ, ಪೊಲೀಸರು ಈ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ಕೋರ್ಟ್ ಇಂದು ತೀರ್ಪು ನೀಡಲಿದೆ.