ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಜೈಲು ಪಾಲಾಗಿರೋ ನಟ ದರ್ಶನ್ ಪರಿಸ್ಥಿತಿ ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕಿದೆ. ಇಲ್ಲಿಯ ತನಕ ಬೇಲ್ ಸಿಗುವ ಸಣ್ಣದೊಂದು ಭರವಸೆ ಇತ್ತು. ಅದಕ್ಕೀಗ ದರ್ಶನ್ ಹುಡುಗರೇ ಕಲ್ಲು ಹಾಕಿದ್ದಾರೆ. ದಚ್ಚುನ ಮುಗಿಸೋಕೆ ಬೇರೆ ಯಾರೋ ಬೇಕಿಲ್ಲ. ದಾಸನ ಅಭಿಮಾನಿಗಳೇ ಸಾಕು. ಸಾಕ್ಷ್ಯ ನಾಶ ಪ್ರಕರಣದಲ್ಲಿ ಮೂವರು ಅಂದರ್ ಆಗಿದ್ದು, ಅವ್ರೆಲ್ಲಾ ಡಿಬಾಸ್ ಹುಡ್ಗರೇ ಅನ್ನೋದು ದುರಂತ. ಲಾ & ಆರ್ಡರ್ ಮುಂದೆ ನಡೆಯಲ್ಲ ಯಾರ ಆಟ. ಇನ್ಮೇಲೆ ಖೇಲ್ ಖತಂ ಆ ನಾಟಕ್ ಕಂಪನಿ ಬಂದ್ ಆಗೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ.
- ದಚ್ಚು ಖೇಲ್ ಖತಂ ಆಗೋಕೆ ಅವ್ರ ಅಭಿಮಾನಿಗಳೇ ಸಾಕು
- ಸಾಕ್ಷಿ ಬೆದರಿಕೆ ಆರೋಪಿಗೆ ‘ದಾಸ’ನ ಜೊತೆ ನೇರ ನಂಟು..!!
- ಖಾಕಿ ಬಲೆಗೆ ಬಿದ್ದ ಆರೋಪಿಗಳೆಲ್ಲಾ ದರ್ಶನ್ ಹುಡುಗರೇ
- ರೇಣುಕಾಸ್ವಾಮಿ ಕಿಡ್ನ್ಯಾಪ್ಗೆ ಪ್ರಮುಖ ಸಾಕ್ಷಿ ಸಂದೀಪ್..!!
ಸದ್ಯಕ್ಕೆ ಮುಗಿಯುವಂತೆ ಕಾಣ್ತಿಲ್ಲ ರೇಣುಕಾಸ್ವಾಮಿ ಮರ್ಡರ್ ಕೇಸ್. ಯಾಕಂದ್ರೆ ಆ ಪ್ರಕರಣಕ್ಕೀಗ ಎರಡು ವರ್ಷಗಳಾದ್ರೂ ದಿನೇ ದಿನೆ ಕೇಸ್ ಸ್ಟ್ರಾಂಗ್ ಆಗ್ತಾ ಹೋಗ್ತಿದೆ. ಅದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷ ಕಾರಣ ಮಾತ್ರ ಡಿ ಬಾಸ್ ದರ್ಶನ್ ಅಂಡ್ ಗ್ಯಾಂಗ್ ಅನ್ನೋದು ಓಪನ್ ಸೀಕ್ರೆಟ್. ಯೆಸ್.. ಗೆಳತಿ ಪವಿತ್ರಾ ಗೌಡಗೆ ಸಹಾಯ ಮಾಡಲು ಹೋಗಿ ತಾನಗೆ ತಾನೇ ಖೆಡ್ಡಾ ತೋಡಿಕೊಂಡಿದ್ದಾರೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್.
ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿಸಿ, ನಂತ್ರ ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ, ಚಿತ್ರಹಿಂಸೆ ನೀಡಿ, ಉದ್ದೇಶಪೂರ್ವಕವಾಗಿಯೇ ಕೊಲೆ ಮಾಡಿದ್ದಾರೆ ಅನ್ನೋ ಆರೋಪಗಳನ್ನ ಎದುರಿಸುತ್ತಿದ್ದಾರೆ ದಾಸ ದರ್ಶನ್. ದಚ್ಚು ಜೊತೆ ಆತನ ಆಪ್ತ ಗೆಳತಿ ಪವಿತ್ರಾ ಗೌಡ ಕೂಡ ಜೈಲೂಟ ಸವಿಯುವಂತಾಗಿದೆ. ಎಸಿ ಕಾರ್, ಕೈಗೊಂದು, ಕಾಲಿಗೊಂದು ಆಳು, ಜೈಕಾರ ಹಾಕೋ ಜನ, ಹೋದಲ್ಲೆಲ್ಲಾ ಬಾಸ್ ಬಾಸ್ ಅಂತ ಕೂಗೋ ಅಭಿಮಾನಿಗಳು, ಮುದ್ದಿನ ಮಡದಿ, ಮುಗಿಲೆತ್ತರಕ್ಕೆ ಬೆಳೆದ ಮಗ, ಫಾರ್ಮ್ ಹೌಸ್, ಅದರಲ್ಲಿರೋ ಮೂಕ ಜೀವಿಗಳು, ವಿವಿಧ ಪಕ್ಷಿ, ಪ್ರಾಣಿಗಳು.. ಹೀಗೆ ಎಲ್ಲವನ್ನ ಬಿಟ್ಟು ನಾಲ್ಕು ಗೋಡೆ ಮಧ್ಯೆ ಜೈಲಲ್ಲಿ ಮುದ್ದೆ ಮುರಿಯುವಂತಾಗಿದೆ ದರ್ಶನ್‌ಗೆ.
ಇಂಟರೆಸ್ಟಿಂಗ್ ಅಂದ್ರೆ ಇಲ್ಲಿಯ ತನಕ ಬೇಲ್ ಸಿಗುವ ನಿರೀಕ್ಷೆಯಲ್ಲಿದ್ರು ನಟ ದರ್ಶನ್. ಆದ್ರೆ ಬೇಲ್ ರಿಜೆಕ್ಟ್ ಮಾಡಿದ್ದ ಸುಪ್ರೀಂ ಕೋರ್ಟೇ ಇನ್ನೊಂದು ವರ್ಷದಲ್ಲಿ ಎಲ್ಲಾ ಸಾಕ್ಷಿಗಳ ವಿಚಾರಣೆ ಮುಗಿಸಿ. ಇಲ್ಲವಾದಲ್ಲಿ ಆಗ ಬೇಲ್‌ಗೆ ದರ್ಶನ್ ಅರ್ಹ ಎಂದಿದೆ. ಹೀಗಾಗಿ ಕೋರ್ಟ್ ಟ್ರಯಲ್ಸ್ ಬಹಳ ಜೋರಾಗಿ ನಡೀತಿವೆ. ವಾರದ ನಾಲ್ಕೈದು ದಿನ ನಿರಂತರವಾಗಿ ಕೋರ್ಟ್ ಟ್ರಯಲ್ಸ್ ನಡೆಯುತ್ತಿರೋದು ವಿಶೇಷ. ಒಂದು ವರ್ಷದ ಬಳಿಕ ಬೇಲ್ ಸಿಗೋ ಸಣ್ಣ ಭರವಸೆ ಇತ್ತು. ಆದ್ರೀಗ ಅದು ಕೂಡ ಸತ್ತು ಹೋಗಿದೆ. ಅದಕ್ಕೆ ಕಾರಣ ಒನ್ಸ್ ಅಗೈನ್ ಅದೇ ಡಿ ಬಾಸ್ & ಡಿ ಗ್ಯಾಂಗ್.
ಹೌದು.. ರೇಣುಕಾಸ್ವಾಮಿ ಮರ್ಡರ್ ಕೇಸ್‌ನ ಕೋರ್ಟ್ ಟ್ರಯಲ್ಸ್ ನಡೆಯುತ್ತಿದ್ದು, ಇದೀಗ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದ ಮೂವರು ಆರೋಪಿಗಳು ಖಾಕಿ ಬಲೆಗೆ ಬಿದ್ದಿದ್ದಾರೆ. ಹೌದು.. ಕಾಮಾಕ್ಷಿಪಾಳ್ಯ ಪೊಲೀಸರು ನಡೆಸಿದ ತನಿಖೆಯಲ್ಲಿ ಸಾಕ್ಷಿ ಸಂದೀಪ್‌ಗೆ ಬೆದರಿಕೆ ಕರೆ ಮಾಡಿದ್ದ ಆರೋಪಿಗಳಾದ ವೇಣು, ಸುಹಾಸ್ ಹಾಗೂ ಪುನೀತ್ ಅಂದರ್ ಆಗಿದ್ದಾರೆ.
ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಡಿಕ್ನ್ಯಾಪ್ ಮಾಡಿ ಬೆಂಗಳೂರಿಗೆ ಕರೆತರುವಾಗ ಮಾರ್ಗ ಮಧ್ಯೆ ಅಂದ್ರೆ ತುಮಕೂರಿನ ಬಳಿ ದುರ್ಗಾ ಬಾರ್ ಅಂಡ್ ರೆಸ್ಟೋರೆಂಟ್‌ಗೆ ತೆರಳಿತ್ತು ಡಿ ಗ್ಯಾಂಗ್. ಆಗ ಅಲ್ಲಿ ಮದ್ಯ ಖರೀದಿ ಮಾಡಿ, ಬಿಲ್ ಕೂಡ ಪಾವತಿಸಿತ್ತಂತೆ ಡಿ ಗ್ಯಾಂಗ್. ಅದಕ್ಕೆ ಪ್ರಮುಖ ಸಾಕ್ಷಿ ಆಗಿರೋ ಕ್ಯಾಶಿಯರ್ ಸಂದೀಪ್‌ಗೆ ವೇಣು, ಸುಹಾಸ್ ಹಾಗೂ ಪುನೀತ್ ವಾಟ್ಸಾಪ್ ಕರೆ ಮಾಡಿ ಬೆದರಿಕೆ ಹಾಕಿರೋದು ಇದೀಗ ಬಯಲಾಗಿದೆ. ಇದು ನಟ ದರ್ಶನ್‌ಗೆ ದೊಡ್ಡ ಉರುಳಾಗುವ ಸಾಧ್ಯತೆಯಿದೆ. ಯಾಕಂದ್ರೆ ಅವರೆಲ್ಲಾ ಅಭಿಮಾನಿಗಳಷ್ಟೇ ಅಲ್ಲ, ದರ್ಶನ್ ಹುಡುಗರೇ ಅನ್ನೋದು ಅಚ್ಚರಿ.
- ಪುನೀತ್ ಡಿ ಕಂಪನಿ ಪೇಜ್ ಅಡ್ಮಿನ್.. 10-15 ವರ್ಷ ನಂಟು
- ಬಾಸ್ ಕಷ್ಟ ನೋಡಲಾಗದೆ ಹೀಗೆ ಮಾಡಿದ್ವಿ ಎಂದ ಪುನೀತ್
- ದಚ್ಚು-ದಿನಕರ್ ಕಾಲಲ್ಲಿ ತೋರಿಸಿದ್ರೆ ಕೈಯಲ್ಲಿ ಮಾಡೋ ಹುಡ್ಗ
- ಬೆದರಿಕೆಗೆ ಸುಪಾರಿ ಕೊಟ್ಟವ್ರನ್ನ ಹಿಡಿಯೋಕೆ ಒಂದೇ ಹೆಜ್ಜೆ ಬಾಕಿ
ಯೆಸ್.. ಸಾಕ್ಷಿಗೆ ಬೆದರಿಕೆ ಹಾಕಿರೋ ಮೂವರು ಆರೋಪಿಗಳಲ್ಲಿ ಒಬ್ಬನಾದ ಪುನೀತ್ ಅಪ್ಪಟ ಡಿಬಾಸ್ ಹುಡ್ಗ. ಆತ ಬರೀ ಅಭಿಮಾನಿಯಷ್ಟೇ ಅಲ್ಲ, ದರ್ಶನ್ ಹಾಗೂ ಅವ್ರ ಬ್ರದರ್ ದಿನಕರ್ ಕಾಲಲ್ಲಿ ತೋರಿಸೋದನ್ನ ಕೈಯಲ್ಲಿ ಮಾಡೋ ಹುಡುಗ. ದರ್ಶನ್ ಹಾಗೂ ಅವರ ಕುಟುಂಬದ ಜೊತೆ ಪುನೀತ್‌ಗೆ ಸುಮಾರು 10ರಿಂದ 15 ವರ್ಷಗಳ ನಂಟಿದೆ. ಅದಕ್ಕೆ ಸಾಕಷ್ಟು ಫೋಟೋ, ವಿಡಿಯೋಗಳ ಪುರಾವೆಗಳೂ ಇವೆ.
ಇಂಟರೆಸ್ಟಿಂಗ್ ಅಂದ್ರೆ ಡಿ ಬ್ರದರ್ಸ್ ಅಫಿಶಿಯಲ್ ಪೇಜ್ ಆಗಿರೋ ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಷನ್ ಅಫಿಶಿಯಲಿ ರಿಜಿಸ್ಟರ್ ಕೂಡ ಆಗಿದೆ. ಈ ಡಿ ಕಂಪನಿ ಪೇಜ್‌ನ ಅಡ್ಮಿನ್ ಬೇರಾರೂ ಅಲ್ಲ ಇದೇ ಪುನೀತ್ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಬಾಸ್ ಕಷ್ಟ ನೋಡಲಾಗದೆ ನಾವೇ ಹೀಗೆ ಮಾಡಿದ್ವಿ ಅಂತ ವಿಚಾರಣೆ ವೇಳೆ ಪುನೀತ್ ಹಾಗೂ ಇತರೇ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಆದ್ರೆ ಅಸಲಿ ಸತ್ಯ ಅದೇನಾ ಅನ್ನೋ ಅನುಮಾನ ಶುರುವಾಗಿದೆ. ಒಂದು ಒಂದೂವರೆ ದಶಕದಿಂದ ದರ್ಶನ್ ಗರಡಿಯಲ್ಲಿರೋ ಈ ಹುಡ್ಗರು, ದರ್ಶನ್ ಅಥ್ವಾ ಅವ್ರ ಕುಟುಂಬಸ್ಥರು ಹೇಳದೆ ಇಂಥದ್ದೊಂದು ನಿರ್ಧಾರ ಕೈಕೊಳ್ಳೋಕೆ ಸಾಧ್ಯವೇ..? ಹೀಗೊಂದು ಪ್ರಶ್ನೆ ಕಾಡಲು ಶುರುವಾಗಿದೆ.
ಬಾರ್ ಕ್ಯಾಶಿಯರ್ ಆಗಿರೋ ಸಾಕ್ಷಿ ಸಂದೀಪ್‌ಗೆ ಬೆದರಿಕೆ ಹಾಕಿರೋ ಆರೋಪಿಗಳನ್ನೇ ಹಿಡಿದಿರೋ ಪೊಲೀಸರಿಗೆ ಇನ್ನೂ ಬೆದರಿಕೆ ಸುಪಾರಿ ನೀಡಿದ್ಯಾರು ಅನ್ನೋದನ್ನ ಬಾಯಿ ಬಿಡಿಸೋದು ಕಷ್ಟವೇನಲ್ಲ ಅನ್ನೋದು ಗೊತ್ತಿರುವ ವಿಷಯವೇ ಸರಿ.
- ರೇಣುಕಾಸ್ವಾಮಿ ಬಾಡಿ ಸಾಗಿಸಲು ಕಾರ್ ಕೊಟ್ಟಿದ್ದ ಪುನೀತ್
- ಸ್ಫೋಟಕ ಸತ್ಯ ರಿವೀಲ್.. ನಾಟಕ್ ಕಂಪನಿ ಬಂದ್ ಗ್ಯಾರಂಟಿ
- ಮೇಕೆ ಸಾಗಿಸೋಕೆ ಸ್ಕಾರ್ಪಿಯೋ ಕಾರ್ ನೀಡಿದ್ದ ಆಸಾಮಿ..!
- ತನಿಖೆ ವೇಳೆ ಬೆಚ್ಚಿಬೀಳೋ ರೋಚಕ ವಿಷ್ಯ ಬಟಾ ಬಯಲು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈ ಆರೋಪಿ ಪುನೀತ್ ಹೆಸರು ಕೇಳಿಬರ್ತಿರೋದು ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ ದರ್ಶನ್ ಅರೆಸ್ಟ್ ಆದ ಕೂಡಲೇ ಪುನೀತ್ ಕೂಡ ಅನ್ನಪೂಣೇಶ್ವರಿ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದ. ಇನ್ ಫ್ಯಾಕ್ಟ್ ಪುನೀತ್‌ನ ಬ್ಲ್ಯಾಕ್ & ವೈಟ್ ಸ್ಕಾರ್ಪಿಯೋ ಕಾರ್ ಕೂಡ ಸೀಝ್ ಮಾಡಿತ್ತು ಖಾಕಿ. ಯಾಕಂದ್ರೆ ರೇಣುಕಾಸ್ವಾಮಿ ಕೊನೆಯುಸಿರೆಳೆದ ಬಳಿಕ ಆತನ ಡೆಡ್ ಬಾಡಿ ಸಾಗಿಸೋಕೆ ಡಿ ಗ್ಯಾಂಗ್ ಬಳಸಿಕೊಂಡಿದ್ದಿದ್ದು ಇದೇ ಪುನೀತ್ ಮಾಲೀಕತ್ವದ ಸ್ಕಾರ್ಪಿಯೋ ಕಾರ್ ಅನ್ನೋದು ಬಿಗ್ ಟ್ವಿಸ್ಟ್.
ಅಂದು ಮಾಧ್ಯಮಗಳು ಹಾಗೂ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಪುನೀತ್ ಏನೂ ಗೊತ್ತಿಲ್ಲದ ಗುಮ್ಮನಂತೆ ಉತ್ತರ ನೀಡಿ ಜಾರಿಕೊಂಡಿದ್ದ. ಹೌದು.. ನನಗೆ ಚಿಕ್ಕಬಳ್ಳಾಪುರದಿಂದ ಮೈಸೂರಿನ ಫಾರ್ಮ್ ಹೌಸ್‌ಗೆ ಮೇಕೆಗಳನ್ನ ಸಾಗಿಸೋಕೆ ಕಾರ್ ಬೇಕು ಅಂದಿದ್ರು. ಕೊಟ್ಟಿದ್ದೆ ಅಷ್ಟೇ. ನನಗೇನೂ ಗೊತ್ತಿಲ್ಲ ಎಂದಿದ್ದ ಆಸಾಮಿ ಪುನೀತ್. ಆದ್ರೆ ಐಷಾರಾಮಿ ಸ್ಕಾರ್ಪಿಯೋ ಕಾರ್‌ನ ಕುರಿ, ಮೇಕೆ ಸಾಗಿಸೋಕೆ ಬಳಸ್ತಾರೆ ಅನ್ನೋದು ಸಮಾಜಕ್ಕೆ ಗೊತ್ತಾಗಿದ್ದೇ ಪುನೀತ್ ನೀಡಿದ್ದ ಈ ಸುಳ್ಳು ಹೇಳಿಕೆಯಿಂದ ಅಂತ ಬಿಡಿಸಿ ಹೇಳುವ ಅವಶ್ಯಕತೆಯೇ ಇಲ್ಲ.
ಪುನೀತ್ ಹೇಳಿಕೆ ಏನಾದ್ರೆ ಏನಂತೆ..? ಆತನ ಸ್ಕಾರ್ಪಿಯೋ ಕಾರ್‌ನಲ್ಲಿ ಫೊರೆನ್ಸಿಕ್ ಡಿಪಾರ್ಟ್‌ಮೆಂಟ್‌ಗೆ ಸಿಕ್ಕಿರೋದು ಮೇಕೆಯಂತೆ ಬಲಿಯಾಗಿದ್ದ ರೇಣುಕಾಸ್ವಾಮಿಯ ರಕ್ತದ ಸ್ಯಾಂಪಲ್ಸ್ ಅನ್ನೋದು ಅಸಲಿ ಸತ್ಯ.
ಒಟ್ಟಾರೆ ಡಿ ಕಂಪಿನಿ ಪೇಜ್‌ನ ಅಫಿಶಿಯಲ್ ಅಡ್ಮಿನ್ ಆಗಿದ್ದುಕೊಂಡೇ ದರ್ಶನ್ ಹಾಗೂ ಡಿ ಗ್ಯಾಂಗ್ ಆಟಗಳನ್ನ ನೋಡಿಕೊಳ್ತಿದ್ದ ಪುನೀತ್ ಕೂಡ ಅಂದರ್ ಆಗಿರೋದು ದಚ್ಚುಗೆ ಮತ್ತಷ್ಟು ಮಂಡೆ ಬಿಸಿಯಾಗಿದೆ. ಇದು ದರ್ಶನ್ ಪರ ವಕೀಲರಿಗೂ ತಲೆ ನೋವಾಗಲಿದೆ. ಆದ್ರೆ ಎಸ್‌ಪಿಪಿ ಪ್ರಸನ್ನ ಕುಮಾರ್ ಹಾಗೂ ಪೊಲೀಸರಿಗೆ ಮಾತ್ರ ಕೇಸ್‌ನ ಮತ್ತಷ್ಟು ಗಟ್ಟಿಗೊಳಿಸಲು ಪ್ಲಸ್ ಆಗಲಿದೆ. ದರ್ಶನ್‌ನ ಮಕಾಡೆ ಮಲಗಿಸಲು ಬೇರೆ ಯಾರೋ ಬೇಕಿಲ್ಲ ಅವ್ರ ಅಭಿಮಾನಿಗಳಷ್ಟೇ ಸಾಕು ಅನ್ನೋದು ಇದ್ರಿಂದ ಪ್ರೂವ್ ಆಗ್ತಿದೆ. ಸೋ.. ಸಾಕ್ಷ್ಯ ನಾಶವಾಗಲಿ, ಸಾಕ್ಷಿಗಳನ್ನ ತಿರುಚುವ ಕಾರ್ಯಗಳಾಗಲಿ ಆಗಬಾರದು ಅನ್ನೋ ಷರತ್ತಿನ ಮೇಲೆ ಸುಪ್ರೀಂ ಆದಷ್ಟು ಬೇಗ ಸಾಕ್ಷಿಗಳ ವಿಚಾರಣೆ ಆಗಬೇಕು ಅಂತ ನಿರ್ದೇಶಿಸಿತ್ತು. ಆದ್ರೀಗ ಆ ಷರತ್ತು ಮುರಿದಿದೆ ಡಿ ಗ್ಯಾಂಗ್. ಹಾಗಾಗಿ ಮುಂದೆ ನಡೆಯೋ ಅನಾಹುತಗಳಿಗೆಲ್ಲಾ ಡಿ ಗ್ಯಾಂಗ್ ಮಾತ್ರವೇ ಜವಾಬ್ದಾರಿ ಆಗಲಿದೆ ಅನ್ನೋದು ಇಲ್ಲಿ ಸತ್ಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್