ಡಾಲಿ ಧನಂಜಯ ನಿರ್ಮಾಣದ ‘JC’ನಲ್ಲಿ ಡಿಬಾಸ್ ದರ್ಶನ್ ವಿವಾದಾತ್ಮಕ ಜೈಲು ಸೀನ್

ವಿಲ್ಸನ್ ಗಾರ್ಡನ್ ನಾಗನ ಜೊತೆ ಸಿಗರೇಟ್ ಸೇದಿದ್ದ ದರ್ಶನ್

Untitled design 2026 01 19T180055.187

ಡಾಲಿ ಧನಂಜಯ ನಿರ್ಮಾಣದ ಜೆಸಿ- ದಿ ಯೂನಿವರ್ಸಿಟಿ ಸಿನಿಮಾದ ಟ್ರೈಲರ್ ಒಂದು ವಿವಾದಾತ್ಮಕ ವಿಷಯಕ್ಕೆ ಮುನ್ನುಡಿ ಬರೆದಿದೆ. ಇತ್ತೀಚೆಗೆ ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿದ್ದವು. ಸದ್ಯ ಜೆಸಿ ಅನ್ನೋ ಸಿನಿಮಾ ಅಲ್ಲಿನ ವ್ಯವಹಾರ ಹಾಗೂ ಅವ್ಯವಹಾರಗಳ ಕೈಗನ್ನಡಿ ಆಗಿದೆ. ಅಷ್ಟೇ ಅಲ್ಲ, ರೌಡಿ ಶೀಟರ್‌‌ಗಳ ಜೊತೆ ಡಿಬಾಸ್ ದರ್ಶನ್ ಜೈಲಲ್ಲಿ ರಾಜಾತಿಥ್ಯ ಪಡೆದ ವಿವಾದಾತ್ಮಕ ದೃಶ್ಯ ಈ ಚಿತ್ರದಲ್ಲಿ ಮರುಕಳಿಸಿದೆ.

ಇದು ನಡುವೆ ಅಂತರವಿರಲಿ ಚಿತ್ರದ ನಾಯಕನಟ ಸೂರ್ಯ ಪ್ರಖ್ಯಾತ್ ಲೀಡ್‌‌ನಲ್ಲಿ ನಟಿಸಿರೋ ಜೆಸಿ- ದಿ ಯೂನಿವರ್ಸಿಟಿ ಅನ್ನೋ ಚಿತ್ರದ ಟ್ರೈಲರ್ ಝಲಕ್. ಡಾಲಿ ಧನಂಜಯ ತಮ್ಮ ಡಾಲಿ ಪಿಕ್ಚರ್ಸ್ ಬ್ಯಾನರ್‌ನಡಿ ನಿರ್ಮಾಣ ಮಾಡಿರೋ ಚಿತ್ರವಿದು. ಸೂರ್ಯ ಪ್ರಖ್ಯಾತ್‌ಗೆ ಭಾವನಾ ರೆಡ್ಡಿ ಜೋಡಿಯಾಗಿದ್ದು, ಟ್ರೈಲರ್ ಲಾಂಚ್ ಜೊತೆ ಜೊತೆಗೆ ಚಿತ್ರತಂಡ ಫೆಬ್ರವರಿ 6ರಂದು ಸಿನಿಮಾನ ತೆರೆಗೆ ತರೋದಾಗಿ ಅನೌನ್ಸ್ ಮಾಡಿದೆ.

ಶಿವರಾಜ್ ಕುಮಾರ್ ಹಾಗೂ ಜೋಗಿ ಪ್ರೇಮ್ ಜೆಸಿ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿ ತಂಡಕ್ಕೆ ಶುಭಹಾರೈಸಿದ್ರು. ಜೆಸಿ ಒಂದು ಪಕ್ಕ ಮಾಸ್ ಸಿನಿಮಾ. ಜೈಲಿನ ಸುತ್ತ ನಡೆಯುವ ಕಥೆಯಾಗಿದೆ. ಹಾಗಾಗಿ ಜೋಗಿಯ ಸೂಪರ್ ಹಿಟ್ ಜೋಡಿ ಶಿವಣ್ಣ-ಪ್ರೇಮ್ ಟ್ರೈಲರ್ ಲಾಂಚ್ ಮಾಡಿದ್ದು ಪ್ರಸ್ತುತ ಅನಿಸಿತು. ಚೇತನ್ ಜೈರಾಮ್ ನಿರ್ದೇಶನದಲ್ಲಿ ಬಂದಿರುವ ಜೆಸಿ, ಜೈಲಿನಲ್ಲಿ ನಡೆಯುವ ಕಥೆಯಾಗಿದ್ದು, ಜೈಲು ಒಳಗಿನ ಅವ್ಯವಹಾರ, ಕೈದಿಗಳ ದರ್ಬಾರ್ ಈ ಸಿನಿಮಾದಲ್ಲಿ ತೋರಿಸಲಾಗಿದೆ.

ಫೈಟ್, ಕೊಲೆ, ರಕ್ತ ಇದರ ನಡುವೆ ಅಪ್ಪ-ಮಗನ ಭಾವನಾತ್ಮಕ ಕಥೆಯನ್ನು ಹೇಳಲಾಗಿದೆ. ಟ್ರೈಲರ್‌‌‌ನಲ್ಲಿ ಮಗ ಕಿರೀಟ ಹೊತ್ಕೋದಿದ್ರೂ ಪರವಾಗಿಲ್ಲ.. ಆದ್ರೆ ಕಳಂಕ ಹೊತ್ಕೋಬಾರ್ದು ಅನ್ನುವ ಡೈಲಾಗ್ ಗಮನ ಸೆಳೆಯುತ್ತಿದೆ. ಜೆಸಿ ದಿ ಯೂನರ್ಸಿಟಿ ಟ್ರೈಲರ್ ನೋಡಿ ನಿರ್ದೇಶಕ ಪ್ರೇಮ್ ಮತ್ತು ಶಿವಣ್ಣ ಇಬ್ಬರು ಫಿದಾ ಆಗಿದ್ದಾರೆ. ಹೀರೋ ಪ್ರಖ್ಯಾತ್ ಅವರನ್ನು ಹಾಡಿ ಹೊಗಳಿದರು. ಶಿವಣ್ಣನ ಜೋತೆಗಿನ ಜೋಗಿ ಶೂಟಿಂಗ್ ಅನುಭವನ್ನು ಬಿಚ್ಚಿಟ್ಟರು ಪ್ರೇಮ್. ಯಾರಿಗೂ ಜೈಲಿನ ಅನುಭವ ಬೇಡ. ಅಲ್ಲಿ ದುಡ್ಡು ಇರೋನಿಗೆ ಮಾತ್ರ ಬೆಲೆ. ಎಷ್ಟೋ ಜನರಿಗೆ ಬೇಲ್ ಸಿಕ್ಕಿದ್ರೂ ಬಿಡಿಸಿಕೊಳ್ಳಲು ಆಗಲ್ಲ. ಅಂತಹ ಸ್ಥಿತಿಯಲ್ಲಿದ್ದಾರೆ ಅಂದ್ರು ಪ್ರೇಮ್.

ಶಿವಣ್ಣ ಮಾತನಾಡುತ್ತಾ ಜೈಲು ಒಂದು ಪರಿವರ್ತನೆಯ ಜಾಗ. ಜೈಲಿಗೆ ಹೋಗಿ ಬಂದವ್ರು ಅನೇಕರು ಬದಲಾಗುತ್ತಾರೆ. ಭವಿಷ್ಯದ ಸ್ಟಾರ್ ಆಗುವ ಎಲ್ಲಾ ಕ್ವಾಲಿಟಿಗಳು ಪ್ರಖ್ಯಾತ್ ಅವರಲ್ಲಿ ಇದೆ. ತುಂಬಾ ಚೆನ್ನಾಗಿ ಆ್ಯಕ್ಟ್ ಮಾಡಿದ್ದಾರೆ ಎಂದ್ರು.

ಅಂದಹಾಗೆ ಜೆಸಿ ಅಂದ್ರೆ ಜುಡಿಷಿಯಲ್ ಕಸ್ಟಡಿ. ಅಂದ್ರೆ ಜೈಲುವಾಸ. ಇದೆಲ್ಲಾ ಓಕೆ.. ಆದ್ರೆ ಟ್ರೈಲರ್‌‌ನಲ್ಲಿ ಗಮನ ಸೆಳೆಯುತ್ತಿರೋದು ಮಾತ್ರ ಡಿಬಾಸ್ ದರ್ಶನ್ ವಿವಾದಾತ್ಮಕ ಜೈಲು ದೃಶ್ಯ. ಹೌದು.. ರೌಡಿಶೀಟರ್ ವಿಲ್ಸನ್‌‌ ಗಾರ್ಡನ್ ನಾಗನ ಜೊತೆ ಟೇಬಲ್‌ ಹಾಕಿಕೊಂಡು ಕಾಫಿ ಹೀರುತ್ತಾ, ಸಿಗರೇಟ್ ಸೇದುತ್ತಿದ್ದ ನಟ ದರ್ಶನ್ ಫೋಟೋ ದೊಡ್ಡ ವಿವಾದಕ್ಕೆ ಮುನ್ನುಡಿ ಬರೆದಿತ್ತು. ಅದಾದ ಬಳಿಕ ಅವ್ಯವಹಾರಗಳ ಆಗರ ಆಗಿರೋ ಪರಪ್ಪನ ಅಗ್ರಹಾರದ ಒಂದೊಂದೇ ನಿಜಾಂಶ ಬಯಲಾಯ್ತು. ಸದ್ಯ ಜೆಸಿ ಸಿನಿಮಾದಲ್ಲಿ ಅದೇ ಕಥೆ ಇದೆ. ರಿಯಾಲಿಟಿಯನ್ನ ರೀಲ್‌ಗೆ ತರೋಕೆ ಡಾಲಿ ಸಾಥ್ ನೀಡಿದ್ದಾರೆ.

ಟ್ರೈಲರ್ ರಿಲೀಸ್ ಮಾಡಿಕೊಟ್ಟ ಶಿವಣ್ಣ ಮತ್ತು ಜೋಗಿ ಪ್ರೇಮ್ ಅವರಿಗೆ ಡಾಲಿ ಧನ್ಯವಾದ ತಿಳಿಸಿದರು. ಚಿತ್ರರಂಗದಲ್ಲಿ ಒಬ್ಬ ಅಣ್ಣನ ಹಾಗೆ ಸಾಥ್ ಕೊಡ್ತಿರೋ ವ್ಯಕ್ತಿ ಶಿವಣ್ಣ. ನನ್ನ ಮೊದಲ ನಿರ್ಮಾಣದ ಸಿನಿಮಾದಿಂದ ಇಲ್ಲಿಯ ವರೆಗೂ ತುಂಬಾ ಸಹಾಯ ಮಾಡಿದ್ದಾರೆ ಎಂದರು.

ಹೀರೋ ಪ್ರಖ್ಯಾತ್ ಮಾತನಾಡಿ, ದುಡ್ಡು ಇರೋರೆಲ್ಲ ಹೀರೋ ಆಗಲು ಸಾಧ್ಯಿಲ್ಲ. ಜನ ಒಪ್ಕೊಬೇಕು. ಸರಸ್ವತಿಯ ಆಶೀರ್ವಾದ ಇರಬೇಕು. ಸೂಪರ್ ಸ್ಟಾರ್ ಮಕ್ಕಳು ಕೂಡ ಫೇಲ್ ಆಗಿರೋದು ಇದೆ. ಬಡವರ ಮಕ್ಕಳು ಸೂಪರ್ ಸ್ಟಾರ್ ಆಗಿರುವ ಉದಾಹರಣೆಯೂ  ಇದೆ. ದುಡ್ಡು ಇದ್ರೆ ಎಲಕ್ಷನ್ ಗೆಲ್ಲಬಹುದು ಆದರೆ ಸಿನಿಮಾ ಗೆಲ್ಲಿಸೋದು ಕಷ್ಟ’ ಎಂದರು.

ಈ ಸಿನಿಮಾದಲ್ಲಿ ಥ್ರಿಲ್ಲರ್ ಮಂಜು, ವಿಜಯ್ ಸಿಂಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೆಸಿ ಸಿನಿಮಾಗೆ ಖ್ಯಾತ ಡೈಲಾಗ್ ರೈಟರ್ ಮಾಸ್ತಿ ಅವರು ಸಂಭಾಷಣೆ ಬರೆದಿದ್ದು, ಕಾರ್ತಿಕ್ ಕ್ಯಾಮೆರಾ ವರ್ಕ್‌, ರೋಹಿತ್ ಸೋವರ್ ಸಂಗೀತವಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version