ಮೇ 23 ರಂದು ಮರು ಬಿಡುಗಡೆಯಾಗಲಿದೆ AMR ರಮೇಶ್ ನಿರ್ದೇಶನದ “ಸೈನೈಡ್” ಚಿತ್ರ

Untitled design (65)

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ನಂತರದ ಘಟನೆಗಳನ್ನು ಆಧರಿಸಿದ ಚಿತ್ರ “ಸೈನೈಡ್”. ಅಕ್ಷಯ್ ಕ್ರಿಯೇಷನ್ಸ್ ನಲ್ಲಿ ಕೆಂಚಪ್ಪ ಗೌಡ ಹಾಗೂ ಎಸ್ ಇಂದುಮತಿ ನಿರ್ಮಿಸಿದ್ದ, AMR ರಮೇಶ್ ನಿರ್ದೇಶಿಸಿದ್ದ ಹಾಗೂ ತಾರಾ, ರಂಗಾಯಣ ರಘು, ರವಿಕಾಳೆ, ಮಾಳವಿಕ, ಅವಿನಾಶ್, ಉಷಾ ಭಂಡಾರಿ ಮುಂತಾದವರು ಅಭಿನಯಿಸಿದ್ದ “ಸೈನೈಡ್” ಚಿತ್ರ 2006 ರಲ್ಲಿ ಬಿಡುಗಡೆಯಾಗಿ ಜನಪ್ರಿಯವಾಗಿತ್ತು.

ADVERTISEMENT
ADVERTISEMENT

ಈಗ ಇಪ್ಪತ್ತು ವರ್ಷಗಳ ಬಳಿಕ ಈ ಚಿತ್ರವನ್ನು ಮರು ಬಿಡುಗಡೆ ಮಾಡಲು ನಿರ್ದೇಶಕ AMR ರಮೇಶ್ ನಿರ್ದೇಶಿಸಿದ್ದಾರೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ಶಾಸಕ ಹ್ಯಾರಿಸ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

“ಸೈನೈಡ್”, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಬಳಿಕ ನಡೆದ ಘಟನೆ ಆಧರಿಸಿದ ಚಿತ್ರ.‌ 2006 ರಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವಾಗ ಸೂಕ್ಷ್ಮವಾದ ವಿಷಯದ ಕುರಿತಾದ ಸಿನಿಮಾ. ಏನಾಗುತ್ತದೊ ಏನೋ. ಎಂಬ ಆತಂಕವಿತ್ತು. ಆದರೆ ಬಿಡುಗಡೆ ಆದ ಮೇಲೆ‌ ಜನ ಈ ಚಿತ್ರ ಸ್ವೀಕರಿಸಿದ ರೀತಿ ಕಂಡು ಆತಂಕ ದೂರವಾಯಿತು. ನಾಡಿನ ಖ್ಯಾತ ಸಾಹಿತಿಗಳು, ನಟರು ಹಾಗೂ‌ ನಿರ್ದೇಶಕರು ಸಹ ಈ ಚಿತ್ರದ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದರು.

ತಾರಾ ಅವರ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ತಂದುಕೊಟ್ಟ ಚಿತ್ರ ಕೂಡ ಇದ್ದಾಗಿತ್ತು. ಪ್ರಸ್ತುತ ಈ ಚಿತ್ರವನ್ನು ಈಗಿನ ಕೆಲವು ತಂತ್ರಜ್ಞಾನಗಳನ್ನು ಅಳವಡಿಸಿ‌ ಜೊತೆಗೆ ಹತ್ತು ನಿಮಿಷ ಸಿನಿಮಾ ಅವಧಿಯನ್ನು ಹೆಚ್ಚಿಸಿ ಮೇ 23 ರಂದು ಮರು ಬಿಡುಗಡೆ ಮಾಡುತ್ತಿದ್ದೇವೆ. ” ಸೈನೈಡ್” ಚಿತ್ರದ ಪ್ರೀಕ್ವೆಲ್ ಸಹ ಬರಲಿದ್ದು, ಅದರ ಕಾರ್ಯಗತಿಯೂ‌ ಸಹ ಪ್ರಗತಿಯಲ್ಲಿದೆ ಎಂದು ನಿರ್ದೇಶಕ AMR ರಮೇಶ್ ತಿಳಿಸಿದರು.

ನಾನು “ಸೈನೈಡ್” ಚಿತ್ರದಲ್ಲಿ ಮೃದುಲ ಎಂಬ ಮುಗ್ಧ ಹೆಣ್ಣು ಮಗಳ ಪಾತ್ರ ನಿರ್ವಹಿಸಿದ್ದೆ. ಇಪ್ಪತ್ತು ವರ್ಷಗಳ ಹಿಂದೆ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದಾಗ ನಾನು ಮೃದುಲ ಅವರನ್ನು ಭೇಟಿ ಮಾಡಲು ಪ್ರಯತ್ನ ಪಟ್ಟೆ . ಆಗಲಿಲ್ಲ. ಅವರ ಪತಿ ರಂಗನಾಥ್ ಚಿತ್ರೀಕರಣ ಸ್ಥಳಕ್ಕೆ ಬರುತ್ತಿದ್ದರು. ಅವರಿಂದ ಮೃದುಲ ಅವರ ಸ್ವಭಾವ ತಿಳಿದುಕೊಂಡು ನಟಿಸಿದ್ದೆ. ನನ್ನ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಕೂಡ ಬಂತು.‌ ಈಗ ರಮೇಶ್ ಈ ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ. ಇತ್ತೀಚೆಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಸಿದ್ದರಾಮಯ್ಯ ಅವರಿ ಈ ಚಿತ್ರದ ತುಣುಕು ನೋಡಿದರು. ಚಿತ್ರವನ್ನು ಸಹ‌ ನೋಡುತ್ತೇನೆ ಎಂದು ಹೇಳಿದ್ದಾರೆ ಎಂದು ನಟಿ ತಾರಾ ತಿಳಿಸಿದರು.

“ಸೈನೈಡ್” ಚಿತ್ರದಲ್ಲಿ ಟೆರರಿಸ್ಟ್ ಪಾತ್ರ ಮಾಡಿದ್ದನ್ನು ನಟಿ ಉಷಾ ಭಂಡಾರಿ ನೆನಪಿಕೊಂಡರು. ನಿರ್ಮಾಪಕರಾದ ಕೆಂಚಪ್ಪ ಗೌಡ, ಎಸ್ ಇಂದುಮತಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Exit mobile version