ಶಾಂತಿ ಕ್ರಾಂತಿ ರೀ-ರಿಲೀಸ್ ಆಗದಿದ್ರೂ ಸಹ ಇಷ್ಟು ದಿನ ಶಾಂತಿಯಿಂದಿದ್ದ ಸ್ಯಾಂಡಲ್‌ವುಡ್‌ನ ಟ್ರೆಂಡ್ ಸೆಟ್ಟರ್ ಕ್ರೇಜಿಸ್ಟಾರ್ ವಿ ರವಿಚಂದ್ರನ್.. ಇದೀಗ ದಿಢೀರ್ ಅಂತ ರಾಜಕಾರಣದಲ್ಲಿ ಕ್ರಾಂತಿ ಮಾಡೋಕೆ ಮುಂದಾಗಿದ್ದಾರೆ. ಯೆಸ್.. ಪಾಲಿಟಿಕ್ಸ್‌ಗೆ ಎಂಟ್ರಿ ಕೊಡ್ತಿರೋ ರವಿಮಾಮ, ಎಂಎಲ್‌ಸಿ ಆಗ್ತಿದ್ದಾರೆ. ಇದು ಸಿಎಂ ಡಿಕೆಶಿ ಸ್ನೇಹಲೋಕದ ಪ್ರತೀಕವಾಗಿದ್ದು, ಈ ಕುರಿತ ಒಂದು ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ…
- ‘ಶಾಂತಿ’ಯಿಂದಿದ್ದ ಕ್ರೇಜಿಸ್ಟಾರ್ ರಾಜಕೀಯ ‘ಕ್ರಾಂತಿ’ ಶುರು
- ಸಿಎಂ ಸ್ನೇಹದ ಪ್ರತೀಕ.. ಟ್ರೆಂಡ್‌ಸೆಟ್ಟರ್ ರವಿಚಂದ್ರನ್ MLC
- ಇದು 58 ವರ್ಷಗಳ ಕಲಾ ಸೇವೆಗೆ ಸಂದ ಅತಿದೊಡ್ಡ ಗೌರವ
- ಡಿಕೆಶಿ ಜೊತೆ ಎಕ್ಸ್ಪೆರಿಮೆಂಟ್ಸ್ ಮಾಸ್ಟರ್ ಪೊಲಿಟಿಕಲ್ ಜರ್ನಿ
ಕ್ರೇಜಿಸ್ಟಾರ್ ಡಾ. ವಿ ರವಿಚಂದ್ರನ್.. ಇವರು ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ, ಸಂಗೀತ ಸಂಯೋಜಕರಾಗಿ ಅಷ್ಟೇ ಗೊತ್ತು. ಆದ್ರೆ ಇವ್ರ ಕುಟುಂಬ ಸತತವಾಗಿ ಮೂರು ತಲೆಮಾರುಗಳಿಂದ ಕಲಾಸೇವೆ ಮಾಡ್ತಾ ಬರ್ತಿರೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಅದ್ರಲ್ಲೂ ಕನ್ನಡದ ಲೆಜೆಂಡರಿ ಫಿಲ್ಮ್ ಮೇಕರ್ ವೀರಸ್ವಾಮಿ ಮಗ ರವಿಚಂದ್ರನ್, ಬಾಲನಟನಾಗಿಯೇ ಬಣ್ಣದ ಲೋಕಕ್ಕೆ ಕಾಲಿಟ್ಟವರು. ರೆಟ್ರೋ ಕಾಲದಲ್ಲೇ ಪ್ಯಾನ್ ಇಂಡಿಯಾ ಸಿನಿಮಾಗಳನ್ನ ಮಾಡಿ ಟ್ರೆಂಡ್ ಸೆಟ್ಟರ್ ಆದವರು.
58 ವರ್ಷಗಳಿಂದ ಕಲಾ ಸೇವೆ ಮಾಡ್ತಾ ಬರ್ತಿರೋ ಈ ಸಿನಿಸಂತ ಅದೆಷ್ಟೋ ಮಂದಿಗೆ ಸ್ಫೂರ್ತಿಯ ಸೆಲೆ. ರೋಲ್ ಮಾಡೆಲ್. ಗೆದ್ದಾಗ ಹಿಗ್ಗದೆ.. ಸೋತಾಗ ಕುಗ್ಗದೆ.. ಸೋಲು-ಗೆಲುವುಗಳನ್ನ ಸಮಾನವಾಗಿ ಸ್ವೀಕರಿಸಿದ ಲಿವಿಂಗ್ ಲೆಜೆಂಡ್. ಅದೆಷ್ಟೋ ಮೊದಲುಗಳಿಗೆ ಮುನ್ನುಡಿ ಬರೆದ ಕನಸುಗಾರ. ಎಕ್ಸ್‌ಪೆರಿಮೆಂಟ್ಸ್‌ಗೆ ಇವರೊಂಥರಾ ಮಾಸ್ಟರ್. ಕನ್ನಡ ಚಿತ್ರರಂಗದಲ್ಲಿ ಫಿಲ್ಮ್ ಮೇಕಿಂಗ್ ಗೆ ಹೊಸ ರೂಪ ಕೊಟ್ಟವರು. ಅವ್ರ ನಿತ್ಯ, ನಿರಂತರ, ಅವಿರತ ಕಲಾ ಸೇವೆಗೆ ಇದೀಗ ರಾಜಕಾರಣ ಕೈ ಬೀಸಿ ಕರೆಯುತ್ತಿದೆ.
ಯೆಸ್.. ರಾಜಕಾರಣಕ್ಕೆ ಎಂಟ್ರಿ ಕೊಡ್ತಿದ್ದಾರೆ ಕನಸುಗಾರ ರವಿಚಂದ್ರನ್. ಶಾಂತಿ ಕ್ರಾಂತಿ ಸಿನಿಮಾ ರೀ-ರಿಲೀಸ್ ಆಗಲಿಲ್ಲ. ಆದ್ರೆ ಇಷ್ಟು ದಿನ ಬಹಳ ಶಾಂತಿಯಿಂದ ಇದ್ದಂತಹ ರವಿಮಾಮ ಇದೀಗ ದಿಢೀರ್ ಅಂತ ರಾಜಕಾರಣದಲ್ಲಿ ಕ್ರಾಂತಿ ಮಾಡಲು ಸಜ್ಜಾಗಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶನ ಆಗ್ತಿದ್ದಾರೆ. ಅಂದಹಾಗೆ ಇದು ಅವರಾಗಿಯೇ ಆಯ್ಕೆ ಮಾಡಿಕೊಂಡಿದ್ದಲ್ಲ. ಸಿಎಂ ಡಿಕೆ ಶಿವಕುಮಾರ್ ಜೊತೆಗಿನ ಸ್ನೇಹದ ಪ್ರತೀಕ. ಸ್ಕೂಲ್‌ನಲ್ಲಿ ಕ್ಲಾಸ್‌ಮೇಟ್ಸ್ ಆಗಿದ್ದ ಡಿಕೆಶಿ-ರವಿಚಂದ್ರನ್.. ಇಂದಿಗೂ ಅದೇ ಬಾಂಧವ್ಯ ಹೊಂದಿದ್ದಾರೆ. ಹಾಗಾಗಿ ಸಿಎಂ ಡಿಕೆಶಿಯೇ ರವಿಮಾಮನನ್ನ ಎಂಎಲ್‌ಸಿ ಮಾಡೋಕೆ ಮುಂದಾಗಿದ್ದಾರೆ. ಇದು ಕ್ರೇಜಿಸ್ಟಾರ್ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಖುಷಿ ಕೊಟ್ಟಿದೆ.
ಈಗಾಗ್ಲೇ ರವಿಚಂದ್ರನ್ ಅವರ ಹೆಸರನ್ನ ಸರ್ಕಾರ ಕಾಂಗ್ರೆಸ್ ಹೈ ಕಮಾಂಡ್ ಬಳಿ ಪ್ರಸ್ತಾಪಿಸಿದ್ದು, ಕೈ ಹೈಕಮಾಂಡ್ ಕೂಡ ಗ್ರೀನ್ ಸಿಗ್ನಲ್ ನೀಡಿ ಆಗಿದೆ. ಎಂಎಲ್‌ಸಿ ಸದಸ್ಯ ಸ್ಥಾನಕ್ಕೆ ಸರ್ಕಾರ ಈಗಾಗ್ಲೇ ರವಿಚಂದ್ರನ್ ಹೆಸರು ಫೈನಲ್ ಮಾಡಿದ್ದು, ರಾಜ್ಯಪಾಲರು ಅಧಿಕೃತವಾಗಿ ಅದನ್ನ ನಾಮ ನಿರ್ದೇಶನ ಮಾಡುವುದೊಂದೇ ಬಾಕಿ ಉಳಿದಿದೆ. ಮೂಲಗಳ ಪ್ರಕಾರ ಸೋಮವಾರದಂದು ಅಂದ್ರೆ ಆಗಸ್ಟ್ 31ರಂದು ಸರ್ಕಾರ ರವಿಚಂದ್ರನ್ ರಾಜಕೀಯ ರಂಗ ಪ್ರವೇಶದ ಬಗ್ಗೆ ಅಧಿಕೃತವಾಗಿ ಅನೌನ್ಸ್ ಮಾಡಲಿದೆ ಎನ್ನಲಾಗ್ತಿದೆ.
ಚಿತ್ರರಂಗದ ಪಾಲಿಟಿಕ್ಸ್‌ನಿಂದಲೇ ದೂರ ಇರ್ತಿದ್ದಂತಹ ಕ್ರೇಜಿಸ್ಟಾರ್ ರವಿಚಂದ್ರನ್.. ಏಕಾಏಕಿ ಮೈನ್‌ಸ್ಟ್ರೀಮ್ ಪಾಲಿಟಿಕ್ಸ್‌ಗೆ ಬರ್ತಿರೋದು ಕುತೂಹಲ ಮೂಡಿಸಿದೆ. ಇದು ಡಿಕೆಶಿ-ರವಿಮಾಮನ ಗೆಳೆತನಕ್ಕೆ ಹಿಡಿದ ಕನ್ನಡಿ ಅಂತ ಎಲ್ಲರೂ ಮಾತಾಡ್ತಿದ್ದು, ರವಿಚಂದ್ರನ್ ಎಂಎಲ್‌ಸಿ ಆಗ್ತಿರೋದ್ರಿಂದ ಚಿತ್ರರಂಗಕ್ಕೆ ಸಾಕಷ್ಟು ಪ್ಲಸ್ ಆಗಲಿದೆ ಎನ್ನಲಾಗ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
