ತಮಿಳುನಾಡು ಸಿಎಂ ಡಿವೋರ್ಸ್ ಕೇಸ್‌ಗೆ ಬಿಗ್ ಟ್ವಿಸ್ಟ್: ವಿಚ್ಛೇದನ ಅರ್ಜಿ ವಾಪಸ್ ಪಡೆದ ವಿಜಯ್ ಪತ್ನಿ

Your paragraph text (19)

ಚೆನ್ನೈ, ಆಗಸ್ಟ್ 7: ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (CM Vijay) ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ (Sangeetha Swarnalingam) ಅವರ ವಿಚ್ಛೇದನ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಇಂದು ನಡೆದ ವಿಚಾರಣೆಯಲ್ಲಿ ಸಂಗೀತಾ ಅವರು ತಾವು ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಅಧಿಕೃತವಾಗಿ ಹಿಂಪಡೆದುಕೊಂಡಿದ್ದಾರೆ.. ಇದರೊಂದಿಗೆ ತಿಂಗಳುಗಳಿಂದ ಸುದ್ದಿಯಲ್ಲಿದ್ದ ಈ ಜೋಡಿಯ ವೈವಾಹಿಕ ಬಿಕ್ಕಟ್ಟಿಗೆ ತೆರೆಬಿದ್ದಿದೆ.

ಇಂದಿನ ವಿಚಾರಣೆಯ ವಿವರ

ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಶುಕ್ರವಾರ ನಡೆದ ವಿಚಾರಣೆಯಲ್ಲಿ ಮುಖ್ಯಮಂತ್ರಿ ವಿಜಯ್ ಅವರು ಖುದ್ದಾಗಿ ಹಾಜರಾಗಿರಲಿಲ್ಲ. ಅವರ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ತಮಿಳುನಾಡು ವಿಧಾನಸಭೆಯ ಅಧಿವೇಶನ (Tamil Nadu Legislative Assembly) ಪ್ರಗತಿಯಲ್ಲಿರುವುದರಿಂದ ಸಿಎಂ ವಿಜಯ್ ಅವರಿಗೆ ವೈಯಕ್ತಿಕವಾಗಿ ಹಾಜರಾಗಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು. ಅದೇ ಸಮಯದಲ್ಲಿ, ಲಂಡನ್‌ನಲ್ಲಿರುವ ಸಂಗೀತಾ ಅವರು ವಿಡಿಯೋ ಕಾನ್ಫರೆನ್ಸಿಂಗ್ (Video Conferencing) ಮೂಲಕ ಕೋರ್ಟ್ ಕಲಾಪದಲ್ಲಿ ಭಾಗವಹಿಸಿದ್ದರು. ವರ್ಚುವಲ್ ಮೂಲಕವೇ ಅವರು ತಮ್ಮ ವಾದ ಮಂಡಿಸಿ, ಅಂತಿಮವಾಗಿ ಅರ್ಜಿ ಹಿಂಪಡೆಯುವ ನಿರ್ಧಾರವನ್ನು ನ್ಯಾಯಾಲಯದ ಮುಂದಿಟ್ಟರು.

ಸಿಎಂ ವಿಜಯ್ ಮತ್ತು ಸಂಗೀತಾ ಅವರು ಸೆಲೆಬ್ರಿಟಿ ಮತ್ತು ಸಾರ್ವಜನಿಕ ವ್ಯಕ್ತಿಗಳಾದ ಕಾರಣ, ಭದ್ರತಾ ಕಾಳಜಿ ಹಾಗೂ ಇತರ ತಾಂತ್ರಿಕ ತೊಂದರೆಗಳನ್ನು ಉಲ್ಲೇಖಿಸಿ ಈ ಹಿಂದೆಯೇ ವರ್ಚುವಲ್ ಹಾಜರಿಗೆ ಅನುಮತಿ ಕೋರಿದ್ದರು. ನ್ಯಾಯಾಲಯವು ಈ ಮನವಿಯನ್ನು ಅಂಗೀಕರಿಸಿತ್ತು. ಇಂದು ನಡೆದ ವಿಚಾರಣೆಯಲ್ಲಿ ಸಂಗೀತಾ ಅವರ ವಕೀಲರು ಅರ್ಜಿ ಹಿಂಪಡೆಯುವ ಪತ್ರವನ್ನು ಸಲ್ಲಿಸಿದಾಗ, ನ್ಯಾಯಾಧೀಶರು ಸಂತಸ ವ್ಯಕ್ತಪಡಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದರು.

ಫೆಬ್ರವರಿಯಲ್ಲಿ ಸಲ್ಲಿಸಲಾಗಿತ್ತು ಅರ್ಜಿ

ಸಿಎಂ ವಿಜಯ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗದ ವೈವಾಹಿಕ ಭಿನ್ನಾಭಿಪ್ರಾಯಗಳು (irreconcilable differences) ಇರುವುದನ್ನು ಉಲ್ಲೇಖಿಸಿ ಸಂಗೀತಾ ಅವರು ಈ ವರ್ಷದ ಫೆಬ್ರವರಿಯಲ್ಲಿ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ತಮ್ಮ ಅರ್ಜಿಯಲ್ಲಿ ಅವರು ಜೀವನಾಂಶ (alimony) ನೀಡುವಂತೆಯೂ, ದಂಪತಿಯ ನೀಲಂಕರೈ (Neelankarai) ನಿವಾಸದಲ್ಲಿ ವಾಸಿಸುವ ಹಕ್ಕು ಕಲ್ಪಿಸುವಂತೆಯೂ ಕೋರಿದ್ದರು. 

ಇದಕ್ಕೂ ಮೊದಲು ನಡೆದಿದ್ದ ವಿಚಾರಣೆಯೊಂದರಲ್ಲಿ, ವಕಾಲತ್ತುನಾಮೆ ಸಲ್ಲಿಕೆಯಲ್ಲಿ ವಿಳಂಬವಾಗಿದ್ದಕ್ಕಾಗಿ ನ್ಯಾಯಾಧೀಶರು ಸಂಗೀತಾ ಅವರ ವಕೀಲರನ್ನು ಪ್ರಶ್ನಿಸಿದ್ದರು. ಅಲ್ಲದೆ, ಪ್ರಕರಣವನ್ನು ನೇರವಾಗಿ ವಿಚಾರಣೆಗೆ ತೆಗೆದುಕೊಳ್ಳುವ ಮುನ್ನ, ದಂಪತಿಯನ್ನು ಸಂಧಾನ ಕೇಂದ್ರಕ್ಕೆ (Mediation Center) ಕಳುಹಿಸಬೇಕು ಎಂದು ಸಲಹೆ ನೀಡಿದ್ದರು. ಕುಟುಂಬ ನ್ಯಾಯಾಲಯಗಳಲ್ಲಿ ಸಾಮಾನ್ಯ ಅಭ್ಯಾಸವಾಗಿರುವ ಈ ಸಂಧಾನ ಪ್ರಕ್ರಿಯೆಯು ಇಲ್ಲಿ ಯಶಸ್ವಿಯಾಗಿ, ಇಂದು ಅರ್ಜಿ ಹಿಂಪಡೆಯುವ ಮೂಲಕ ಪ್ರಕರಣವು ಮುಕ್ತಾಯಗೊಂಡಿದೆ.

ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥರಾಗಿರುವ ವಿಜಯ್ ಅವರಿಗೆ, ಈ ಬೆಳವಣಿಗೆಯು ಅನೇಕ ವೇಳೆ ರಾಜಕೀಯ ಎದುರಾಳಿಗಳು ಎತ್ತುತ್ತಿದ್ದ ವೈಯಕ್ತಿಕ ಆರೋಪಗಳಿಗೆ ತೆರೆ ಎಳೆದಂತಾಗಿದೆ. ಇನ್ನು ಕೆಲವು ಮಾಧ್ಯಮ ವರದಿಗಳ ಪ್ರಕಾರ, ಆಗಸ್ಟ್ 7ಕ್ಕೆ ಮುಂದೂಡಲಾಗಿದ್ದ ಈ ಪ್ರಕರಣದ ತೀರ್ಪಿನ ಮುನ್ನವೇ ಸಂಗೀತಾ ಅವರು ಈ ನಿರ್ಧಾರ ತೆಗೆದುಕೊಂಡಿರುವುದು, ದಂಪತಿಗಳ ನಡುವೆ ಹೊಂದಾಣಿಕೆಯಾಗಿರಬಹುದು ಎಂಬ ಸೂಚನೆಯಾಗಿದೆ.

ಸಂಗೀತಾ ಅವರು ಅರ್ಜಿ ಹಿಂಪಡೆಯುವುದಕ್ಕೆ ನಿಖರವಾದ ಕಾರಣ ಏನೇಂಬುದು ತಿಳಿದಿಲ್ಲ. ಆದರೆ, ಕಳೆದ ಕೆಲವು ತಿಂಗಳುಗಳಲ್ಲಿ ವಕೀಲರ ಮೂಲಕ ನಡೆದ ಸಂಧಾನದ ಪ್ರಯತ್ನಗಳು, ಹಾಗೂ ಕೌಟುಂಬಿಕ ನ್ಯಾಯಾಲಯದ ಸಲಹೆಯಂತೆ ದಂಪತಿಗಳು ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಲು ಪ್ರಯತ್ನಿಸಿರುವುದು ಇದಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.

Exit mobile version