ನವ ನಿರ್ದೇಶಕಿ ಮಾನಸ ಯು ಶರ್ಮಾ ಅವರ ಚೊಚ್ಚಲ ಚಿತ್ರ ‘ಚಿಂಟು ಸನ್ ಆಫ್ ವಿಶಾಲಾಕ್ಷಿ’ಯ ಚಿತ್ರೀಕರಣ ಇತ್ತೀಚೆಗೆ ಆರಂಭಗೊಂಡಿದೆ. ಅಮೃತಾ ಸಿನಿ ಕ್ರಾಫ್ಟ್ ನಿರ್ಮಾಣದ ಈ ಚಿತ್ರವು ಸಾಂಪ್ರದಾಯಿಕ ಸರಳತೆಯೊಂದಿಗೆ ಶುರುವಾಗಿದ್ದು, ಚಿತ್ರತಂಡವು ಮೊದಲ ದಿನದ ಶೂಟಿಂಗ್ ಸೆಟ್‌ನಲ್ಲೇ ಸಿಂಪಲ್ ಪೂಜೆ ನೆರವೇರಿಸಿ ಚಾಲನೆ ನೀಡಿದೆ.
ಈ ಚಿತ್ರವು ವಿಜಯ್ ಟಾಟಾ ಅವರ ಕನ್ನಡ ಚಿತ್ರರಂಗದ ಸರಣಿ ನಿರ್ಮಾಣದ ಕನಸಿನ ಮೊದಲನೇ ಹೆಜ್ಜೆಯಾಗಿದೆ. ವಿಜಯ್ ಟಾಟಾ ಅವರು ಹಲವು ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ತಮ್ಮ ಕೊಡುಗೆಯನ್ನು ನೀಡುವ ಕನಸು ಕಂಡಿದ್ದು, ಈ ಚಿತ್ರದ ಮೂಲಕ ಅದು ನನಸಾಗಿದೆ. ಪೂಜಾ ಕಾರ್ಯಕ್ರಮದ ಸಂದರ್ಭದಲ್ಲಿ ನಿರ್ದೇಶಕಿ ಮಾನಸ ಯು ಶರ್ಮಾ ಹಾಗೂ ವಿಜಯ್ ಟಾಟಾ ಅವರ ಪತ್ನಿ ಅಮೃತಾ ಅವರು ಉಪಸ್ಥಿತರಿದ್ದರು. ಇಡೀ ಚಿತ್ರತಂಡದ ಸಮ್ಮುಖದಲ್ಲಿ ನಡೆದ ಈ ಸರಳ ಪೂಜೆಯಲ್ಲಿ ಚಿತ್ರದ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಚಿತ್ರದ ಮುಖ್ಯ ಪಾತ್ರಗಳಲ್ಲಿ ಕನ್ನಡ ಚಿತ್ರರಂಗದ ಪ್ರಸಿದ್ಧ ನಟ-ನಟಿಯರು ಭಾಗವಹಿಸಿದ್ದಾರೆ. ಲಕ್ಷ್ಮಿ ಪ್ರಕಾಶ್ ಬೆಳವಾಡಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರೊಂದಿಗೆ ಹರ್ಷಿಲ್ ಕೌಶಿಕ್, ಸ್ಪರ್ಶ, ಆರ್ ಕೆ ಕಾರ್ತಿಕ್, ನಾಗಾರ್ಜುನ್, ಶಾಲಿನಿ ಸತ್ಯನಾರಾಯಣ್, ಶ್ರೀನಿವಾಸ್ ಪ್ರಭು ಮುಂತಾದ ಯುವ ಪ್ರತಿಭೆಗಳು ನಟಿಸುತ್ತಿದ್ದಾರೆ.
ಯುವ ಪ್ರತಿಭೆಗಳನ್ನು ಒಳಗೊಂಡಿರುವ ಈ ಚಿತ್ರವು ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ನಿರೀಕ್ಷೆಯಿದೆ. ಚಿತ್ರದ ಪಾತ್ರವರ್ಗ ಮತ್ತು ಕಥೆಯ ವಿವರಗಳು ಸದ್ಯಕ್ಕೆ ಗೌಪ್ಯವಾಗಿದ್ದು, ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಗಳನ್ನು ಹಂಚಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿದೆ.
ಚಿತ್ರದ ಚಿತ್ರೀಕರಣವು 35 ದಿನಗಳ ಕಾಲ ಬೆಂಗಳೂರು, ಕಾಶಿ ಮತ್ತು ರಿಷಿಕೇಶ್ ಸುತ್ತಮುತ್ತ ನಡೆಯಲಿದೆ. ನಿರ್ದೇಶಕಿ ಮಾನಸ ಯು ಶರ್ಮಾ ‘ಚಿಂಟು ಸನ್ ಆಫ್ ವಿಶಾಲಾಕ್ಷಿ’ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಕಥೆಯುಳ್ಳ ಸಿನಿಮಾವನ್ನು ಪರಿಚಯಿಸಲು ಮುಂದಾಗಿದ್ದಾರೆ.
