ಚೈತ್ರಾ ಕುಂದಾಪುರ ಮದುವೆ ವಿವಾದ: ತಂದೆ ಬಾಲಕೃಷ್ಣ ನಾಯ್ಕ್‌ರಿಂದ ಗಂಭೀರ ಆರೋಪ!

ಚೈತ್ರ & ಆಕೆಯ ಪತಿ ಇಬ್ಬರೂ ಕಳ್ಳರು: ಬಾಲಕೃಷ್ಣ ನಾಯ್ಕ್‌

Befunky collage 2025 05 15t134510.235

‘ಬಿಗ್ ಬಾಸ್’ ಖ್ಯಾತಿಯ ಚೈತ್ರಾ ಕುಂದಾಪುರ ತಮ್ಮ ಬಹುಕಾಲದ ಗೆಳೆಯ ಶ್ರೀಕಾಂತ್ ಜೊತೆ 2025ರ ಮೇ 9ರಂದು ವಿವಾಹವಾದರು. ಆದರೆ, ಈ ಮದುವೆಯ ಬೆನ್ನಲ್ಲೇ ಚೈತ್ರಾ ವಿರುದ್ಧ ತಂದೆ ಬಾಲಕೃಷ್ಣ ನಾಯ್ಕ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ಈ ಮದುವೆಯನ್ನು ನಾನು ಒಪ್ಪುವುದಿಲ್ಲ. ನನ್ನನ್ನು ಮದುವೆಗೆ ಆಹ್ವಾನಿಸಲೇ ಇಲ್ಲ,” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಚೈತ್ರಾ ಮತ್ತು ಶ್ರೀಕಾಂತ್ ವಿರುದ್ಧ ಆರೋಪ

ಬಾಲಕೃಷ್ಣ ನಾಯ್ಕ್ ಮಾತನಾಡಿ, “ಚೈತ್ರಾ ಮತ್ತು ಆಕೆಯ ಪತಿ ಶ್ರೀಕಾಂತ್ ಇಬ್ಬರೂ ಕಳ್ಳರು. ನನ್ನ ಪತ್ನಿಯೂ ಚೈತ್ರಾಳ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಈ ರೀತಿ ವರ್ತಿಸುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ. ಉದ್ಯಮಿ ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲಿ ಚೈತ್ರಾ ಹಣ ಹಂಚಿಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ. “ಆಕೆ ಸೈನಿಕರಿಗೆ ಹಣ ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಆದರೆ, ಸ್ವಂತ ಹಣದಿಂದ ಕೊಟ್ಟಿದ್ದರೆ ಅದು ಹೆಮ್ಮೆಯ ವಿಷಯವಾಗಿತ್ತು. ಮೋಸದ ಹಣದಿಂದ ಕೊಟ್ಟರೆ ಏನು ಪ್ರಯೋಜನ?” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕುಟುಂಬದಿಂದ ದೂರವಿಟ್ಟ ಆರೋಪ

“ನನಗೆ ನನ್ನ ದೊಡ್ಡ ಮಗಳು ಗಾಯತ್ರಿ ಮಾತ್ರ ಆಸರೆ. ಆಕೆ ನಿರಪರಾಧಿ ಮತ್ತು ಗೌರವಾನ್ವಿತವಾಗಿ ಬದುಕುತ್ತಿದ್ದಾಳೆ. ಚೈತ್ರಾ ‘ಬಿಗ್ ಬಾಸ್’ಗೆ ಹೋಗುವಾಗಲೂ ನನಗೆ ತಿಳಿಸಿರಲಿಲ್ಲ. ನನ್ನ ಪತ್ನಿ ನನ್ನನ್ನು ಜಗಲಿಯಲ್ಲಿ ಬಿಟ್ಟು ಬೀಗ ಹಾಕಿ ‘ಬಿಗ್ ಬಾಸ್’ಗೆ ಹೋಗಿದ್ದಳು. ನಾನು ಕಟ್ಟಿದ ಮನೆಯಲ್ಲಿ ನಾನೇ ಅನಾಥನಾಗಿದ್ದೇನೆ,” ಎಂದು ನೊಂದು ಹೇಳಿದ್ದಾರೆ.

ಚೈತ್ರಾ ಮತ್ತು ಆಕೆಯ ತಾಯಿ ಹಣಕ್ಕಾಗಿ ತನ್ನನ್ನು ದೂರವಿಟ್ಟಿದ್ದಾರೆ ಎಂದು ಬಾಲಕೃಷ್ಣ ಆರೋಪಿಸಿದ್ದಾರೆ. “ಚೈತ್ರಾಳ ಪತಿ ಶ್ರೀಕಾಂತ್ ನಮ್ಮ ಮನೆಯಲ್ಲಿದ್ದವನೇ. ಅವನೂ ಕಳ್ಳ. ಇವರು ನನ್ನ ಕುಟುಂಬದ ಮಾನ-ಮರ್ಯಾದೆಯನ್ನು ತೆಗೆದಿದ್ದಾರೆ,” ಎಂದು ದೂರಿದ್ದಾರೆ.

ಸಂಸ್ಕೃತಿ ಮತ್ತು ಮಾನದ ಬಗ್ಗೆ ಪ್ರಶ್ನೆ

“ತಂದೆಯನ್ನು ದೂರವಿಟ್ಟವರು ಸಂಸ್ಕೃತಿಯ ಬಗ್ಗೆ ಮಾತನಾಡುವುದು ಎಷ್ಟು ಸರಿ? ಚೈತ್ರಾಗೆ ಯಾರೂ ದೊಡ್ಡ ಸ್ಥಾನಮಾನ ಕೊಡಬೇಡಿ. ಆಕೆ ಮದುವೆಗೆ ಸರಿಯಾಗಿ ಆಮಂತ್ರಣ ನೀಡಿಲ್ಲ. ಮದುವೆ ಸಂದರ್ಭದಲ್ಲಿ ನನ್ನಲ್ಲಿ ಹಣ ಕೇಳಿದಳು. ನಾನು ಹೋಟೆಲ್‌ನಲ್ಲಿ ಕೆಲಸ ಮಾಡುವ ಸಾಮಾನ್ಯ ನೌಕರನಷ್ಟೇ,” ಎಂದು ಅವರು ಹೇಳಿದ್ದಾರೆ.

ಗಾಯತ್ರಿ ಮೇಲಿನ ಅಪವಾದ

ಚೈತ್ರಾ ತನ್ನ ದೊಡ್ಡ ಮಗಳು ಗಾಯತ್ರಿ ಮೇಲೆ ಸುಳ್ಳು ಅಪವಾದ ಹಾಕಿದ್ದಾಳೆ ಎಂದು ಬಾಲಕೃಷ್ಣ ಬೇಸರಿಸಿದ್ದಾರೆ. “ಗಾಯತ್ರಿ ಶಿಕ್ಷಕಿಯಾಗಿ, ಹೊಲಿಗೆ ಕೆಲಸ ಮಾಡಿಕೊಂಡು ಗೌರವಾನ್ವಿತ ಜೀವನ ನಡೆಸುತ್ತಿದ್ದಾಳೆ. ನಾನು ಸತ್ಯ, ನ್ಯಾಯ ಮತ್ತು ಧರ್ಮದಲ್ಲಿ ಬದುಕುವ ವ್ಯಕ್ತಿ,” ಎಂದು ತಿಳಿಸಿದ್ದಾರೆ.

ಗೋವಿಂದ ಬಾಬು ಪೂಜಾರಿ ಪ್ರಕರಣ

ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲಿ ಚೈತ್ರಾ ಹಣ ಹೊಡೆದಿರುವ ಸಾಧ್ಯತೆಯಿದೆ ಎಂದು ಬಾಲಕೃಷ್ಣ ಆರೋಪಿಸಿದ್ದಾರೆ. “ಆಕೆ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಡೆಪಾಸಿಟ್ ಇಟ್ಟಿದ್ದಳು. ಪಡ್ಡೆ ಹುಡುಗರ ಹೆಸರಿನಲ್ಲಿ ಡೆಪಾಸಿಟ್ ಮಾಡಿ ಬಾಂಡ್ ಮೇಲೆ ಸಾಲ ಪಡೆದಿದ್ದಳು. ಇಂತಹ ಕೃತ್ಯಗಳಿಂದ ನನ್ನ ಮಗಳು ಎಂದು ಹೇಳಲು ನಾಚಿಕೆಯಾಗುತ್ತದೆ,” ಎಂದು ಹೇಳಿದ್ದಾರೆ.

ತಂದೆಯ ಗೌರವದ ಬಗ್ಗೆ

“ತಂದೆ ಇಲ್ಲದ ಮಗಳು ಎಂದು ಚೈತ್ರಾ ಹೇಳಿಕೊಂಡು ಬರುತ್ತಾಳೆ. ನನ್ನ ತಂದೆ ಬಾಲ ನಾಯ್ಕ್ ಗೌರವಾನ್ವಿತ ವ್ಯಕ್ತಿಯಾಗಿದ್ದರು. ತಂದೆಗೆ ಅನ್ನ ಹಾಕದವಳು ದೇಶ ಸೇವೆ ಏನು ಮಾಡುತ್ತಾಳೆ? ನನ್ನ ಹೆಂಡತಿಗೂ ಆಕೆ ಹಣ ಕೊಟ್ಟಿದ್ದಾಳೆ, ಅವಳಿಗೆ ಗಂಡ ಬೇಡ ಎಂದಿದ್ದಾಳೆ,” ಎಂದು ಬಾಲಕೃಷ್ಣ ನಾಯ್ಕ್ ನೊಂದು ಹೇಳಿದ್ದಾರೆ.

Exit mobile version