ಬಿಗ್ ಬಾಸ್ ಕನ್ನಡ ಖ್ಯಾತಿಯ ಚೈತ್ರಾ ಕುಂದಾಪುರ ಮತ್ತು ಅವರ ತಂದೆ ಬಾಲಕೃಷ್ಣ ನಾಯಕ್ ನಡುವಿನ ಕಲಹ ಗಂಭೀರ ಸ್ವರೂಪ ಪಡೆದಿದೆ. ಚೈತ್ರಾ ತನ್ನ ತಂದೆಯನ್ನೇ ಕೊಲೆಗೈಯಲು ಸುಪಾರಿ ನೀಡಿದ್ದಾರೆ ಎಂದು ಬಾಲಕೃಷ್ಣ ನಾಯಕ್ ಆರೋಪಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ. ಹಣಕಾಸಿನ ವ್ಯವಹಾರಗಳು ಮತ್ತು ಚೈತ್ರಾ ಅವರ ಮದುವೆಗೆ ಸಂಬಂಧಿಸಿದ ವಿವಾದಗಳೇ ಈ ಜಗಳಕ್ಕೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಪ್ರಕರಣ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಮುಂದಿನ ಬೆಳವಣಿಗೆ ಕುತೂಹಲ ಕೆರಳಿಸಿದೆ.
ಬಾಲಕೃಷ್ಣ ನಾಯಕ್ ತಮ್ಮ ದೂರಿನಲ್ಲಿ, ಚೈತ್ರಾ ತನ್ನ ಗೆಳೆಯರೊಂದಿಗೆ ಮನೆಗೆ ಬಂದು ಕೋಟ್ಯಂತರ ರೂಪಾಯಿಗಳ ದೊಡ್ಡ ಹಣಕಾಸಿನ ವ್ಯವಹಾರಗಳನ್ನು ನಡೆಸುತ್ತಿದ್ದಳು ಎಂದು ಆರೋಪಿಸಿದ್ದಾರೆ. “ಒಂದು ರಾತ್ರಿ ಚೈತ್ರಾ ಕೋಟಿಗಟ್ಟಲೆ ರೂಪಾಯಿಗಳನ್ನು ತಂದು ಎಣಿಸುತ್ತಿರುವುದನ್ನು ಕಂಡು ಭಯಗೊಂಡೆ. ಈ ಬಗ್ಗೆ ಪ್ರಶ್ನಿಸಿದಾಗ ಚೈತ್ರಾ ನನ್ನನ್ನು ದಬಾಯಿಸಿದಳು. ಈ ಹಣ ಉದ್ಯಮಿ ಗೋವಿಂದ ಬಾಬು ಪೂಜಾರಿಯದ್ದು ಎಂದು ನಂತರ ತಿಳಿದುಬಂದಿತು. ಈ ವಿಷಯವನ್ನು ಹೊರಗೆ ಹೇಳಬಹುದೆಂಬ ಭಯದಿಂದ ಚೈತ್ರಾ ಮತ್ತು ನನ್ನ ಪತ್ನಿ ರೋಹಿಣಿ ನನಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದರು,” ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಚೈತ್ರಾ ತನ್ನ ಗೆಳೆಯ ಶ್ರೀಕಾಂತ್ ಕಶ್ಯಪ್ ಅವರನ್ನು ಮದುವೆಯಾಗುವ ನಿರ್ಧಾರವನ್ನು ತಿಳಿಸಿದಾಗ, ಬಾಲಕೃಷ್ಣ ಆತನನ್ನು ಮದುವೆಯಾಗಬಾರದು ಎಂದು ಸಲಹೆ ನೀಡಿದ್ದರಂತೆ. ಆಗ ಚೈತ್ರಾ, “ಶ್ರೀಕಾಂತ್‌ನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾದರೆ 5 ಲಕ್ಷ ರೂಪಾಯಿ ನೀಡಬೇಕು” ಎಂದು ಒತ್ತಾಯಿಸಿದ್ದಳು ಎಂದು ಆರೋಪಿಸಲಾಗಿದೆ. ಇದರಲ್ಲಿ ರೋಹಿಣಿ ಕೂಡ ಶಾಮೀಲಾಗಿದ್ದಾಳೆ ಎಂದು ಬಾಲಕೃಷ್ಣ ಹೇಳಿದ್ದಾರೆ.
ಬಾಲಕೃಷ್ಣ ದೂರಿನಲ್ಲಿ, “ಚೈತ್ರಾ ಮದುವೆಗೆ ಬರದಿದ್ದರೆ ಭೂಗತ ದೊರೆಗಳ ಮೂಲಕ ನನ್ನನ್ನು ಕೊಲೆಗೈಯುವ ಬೆದರಿಕೆ ಹಾಕಿದ್ದಾಳೆ. ಆಸ್ತಿಗಾಗಿ ಯಾವುದೇ ಕೃತ್ಯಕ್ಕೂ ಒಡ್ಡಿಕೊಳ್ಳಲು ಸಿದ್ಧಳಿದ್ದಾಳೆ. ನಾನು ಸತ್ತುಹೋಗಿದ್ದೇನೆ ಎಂದು ಹೇಳಿಕೊಂಡು ಬರುತ್ತಿದ್ದಾಳೆ. ನನಗೆ ರಕ್ಷಣೆಯನ್ನು ಒದಗಿಸಿ,” ಎಂದು ಕೋರಿದ್ದಾರೆ.
ಈಗಾಗಲೇ ಚೈತ್ರಾ ಮತ್ತು ಅವರ ತಾಯಿ ರೋಹಿಣಿ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದಾರೆ. ಚೈತ್ರಾ ತನ್ನ ತಂದೆಯನ್ನು ಕುಡುಕ ಎಂದು ಆರೋಪಿಸಿದ್ದರೆ, ಬಾಲಕೃಷ್ಣ ಚೈತ್ರಾ ಅಕ್ರಮ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿದ್ದಾಳೆ ಎಂದು ಆರೋಪಿಸಿದ್ದಾರೆ.