ಸ್ಯಾಂಡಲ್‌ವುಡ್ ಬಚ್ಚನ್ ಬಾದ್‌ಷಾ ಕಿಚ್ಚ ಹಾಗೂ ಸ್ಟಾರ್ ಡೈರೆಕ್ಟರ್ ಮೊಗ್ಗಿನ ಮನಸ್ಸು ಶಶಾಂಕ್ ಬಹಳ ದಿನಗಳ ನಂತ್ರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಅದಕ್ಕೆ ಕಾರಣ ಡಾರ್ಲಿಂಗ್ ಕೃಷ್ಣ ನಟನೆಯ ಬ್ರ್ಯಾಟ್. ಟ್ರೈಲರ್ ಲಾಂಚ್ ಮಾಡಿದ ಸುದೀಪ್, ಟೀಂಗೆ ಫುಲ್ ಮಾರ್ಕ್ಸ್ ಕೊಟ್ರು. ಪ್ರೆಶರ್ ಹ್ಯಾಂಡಲ್ ಸೀಕ್ರೆಟ್ ಕೂಡ ಬಿಚ್ಚಿಟ್ಟರು. ಜೊತೆಗೆ ಕೃಷ್ಣ-ಶಶಾಂಕ್ ಟ್ಯಾಲೆಂಟ್‌ನ ಬಣ್ಣಿಸೋದನ್ನ ನೀವೇ ನೋಡಿ.
- ‘ಬ್ರ್ಯಾಟ್’ ಟ್ರೈಲರ್ ಮಸ್ತ್.. ಭೇಷ್ ಎಂದ ಬಾದ್‌ಷಾ ಸುದೀಪ್
- ಶಶಾಂಕ್ ಬಗ್ಗೆ ಕಿಚ್ಚ ಅಚ್ಚರಿ ಮಾತು.. ಪ್ರೆಶರ್ ಹ್ಯಾಂಡಲ್ ಸೀಕ್ರೆಟ್
- ದುಡ್ಡಿನ ಹಿಂದೆ ಡಾರ್ಲಿಂಗ್.. ಹೌದು ಸ್ವಾಮಿ, ಹಣ ಬರ್ತಿದೆ- ಕಿಚ್ಚ
- ಮತ್ತೆ ಸಿನಿಮಾ ಮಾಡ್ತಾರಾ ಸ್ಯಾಂಡಲ್‌ವುಡ್ ಬಚ್ಚನ್-ಶಶಾಂಕ್..?
ಯೆಸ್.. ಇದು ಅಭಿನಯ ಚಕ್ರವರ್ತಿ ಬಾದ್‌ಷಾ ಕಿಚ್ಚ ಸುದೀಪ್ ಲಾಂಚ್ ಮಾಡಿರೋ ಬ್ರ್ಯಾಟ್ ಚಿತ್ರದ ಲೇಟೆಸ್ಟ್ ಟ್ರೈಲರ್ ಝಲಕ್. ಡಾಲ್ಫಿನ್ ಎಂಟರ್ಟೈನ್ಮೆಂಟ್ ಬ್ಯಾನರ್‌ನಡಿ ಮಂಜುನಾಥ್ ಕಂದಕೂರ್ ನಿರ್ಮಿಸಿರೋ, ಶಶಾಂಕ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರೋ ಬಹು ನಿರೀಕ್ಷಿತ ಚಿತ್ರ ಬ್ರ್ಯಾಟ್. ಈ ಮೂಲಕ ಬಚ್ಚನ್ ಹೀರೋ ಹಾಗೂ ಡೈರೆಕ್ಟರ್ ಬಹಳ ದಿನಗಳ ನಂತ್ರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಇಂಟರೆಸ್ಟಿಂಗ್ ಅನಿಸಿತು.
ಟ್ರೈಲರ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ದುಡ್ಡಿದ್ರೆ ದುನಿಯಾ ಅನ್ನೋದನ್ನ ಹೇಳೋಕೆ ಹೊರಟಂತಿದೆ ಶಶಾಂಕ್. ಇಲ್ಲಿ ನಮ್ಮ ಬಾಳು ನಾಯಿಗಿಂತ ಕಡೆ ಆಗಬಾರದು ಅಂತ ದುಡ್ಡು ಮಾಡೋಕೆ ಕೈ ಹಾಕುವ ನಾಯಕನಟ, ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡಿ ಕೋಟಿಗೊಬ್ಬ ಆಗುವ ಕಥೆ ಇರುವಂತೆ ಕಾಣ್ತಿದೆ. ಡಾರ್ಲಿಂಗ್ ಕೃಷ್ಣಗೂ ಕ್ರಿಕೆಟ್ ಅಂದ್ರ ಪಂಚಪ್ರಾಣ. ಹಾಗಾಗಿ ಅದನ್ನೇ ಕಥಾವಸ್ತುವನ್ನಾಗಿ ಇಟ್ಕೊಂಡು ಕಥೆಯನ್ನ ಹೆಣೆದಿದ್ದಾರೆ ಡೈರೆಕ್ಟರ್.
ಶಶಾಂಕ್ ಒಬ್ಬ ಒಳ್ಳೆಯ ಕಥೆಗಾರ. ಅವರ ನಿರ್ದೇಶನದ ಚಿತ್ರ ಎಂದ್ಮೇಲೆ ಚೆನ್ನಾಗಿಯೇ ಇರುತ್ತದೆ. ಹಾಗೆಯೇ ಡಾರ್ಲಿಂಗ್ ಕೃಷ್ಣ ಕೂಡ ಉತ್ತಮ ನಟ. ಇವರಿಬ್ಬರ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದ ಕೌಸಲ್ಯ ಸುಪ್ರಜಾ ರಾಮ ಚಿತ್ರ ಕೂಡ ಬಿಗ್ ಹಿಟ್ ಆಗಿತ್ತು. ಈ ಚಿತ್ರ ಸಹ ಸೂಪರ್ ಹಿಟ್ ಆಗಲಿ ಅಂತ ಕಿಚ್ಚ ಸುದೀಪ್ ಹಾರೈಸಿದರು.
ಸುದೀಪ್ ಅವರು, ನನಗೆ ಹಾಗೂ ಕೃಷ್ಣ ಇಬ್ಬರಿಗೂ ಬಹಳ ಲಕ್ಕಿ. ಏಕೆಂದರೆ ನಮ್ಮಿಬ್ಬರ ಕಾಂಬಿನೇಶನ್‌ನಲ್ಲಿ ಬಂದ ಹಿಂದಿನ ಚಿತ್ರ ಕೌಸಲ್ಯ ಸುಪ್ರಜಾ ರಾಮ ಟ್ರೈಲರ್‌ನ ಸುದೀಪ್ ಅವ್ರೇ ಅನಾವರಣ ಮಾಡಿದ್ದು. ಅದು ಎಷ್ಟು ಹಿಟ್ ಆಯಿತು ಅಂತ ಎಲ್ಲರಿಗೂ ಗೊತ್ತೆ ಇದೆ. ಇಂದು ಬ್ರ್ಯಾಟ್ ಚಿತ್ರದ ಟ್ರೈಲರ್ ಕೂಡ ಸುದೀಪ್ ಅವರಿಂದಲೇ ಅನಾವರಣವಾಗಿದೆ. ಇದು ಕೂಡ ದೊಡ್ಡ ಹಿಟ್ ಅಗುವ ನಂಬಿಕೆ ಇದೆ. ಸುದೀಪ್ ಅವರಿಗೆ ಧನ್ಯವಾದ. ಇನ್ನೂ ನಾವು ಈ ಚಿತ್ರವನ್ನು ಪ್ಯಾನ್ ಇಂಡಿಯಾ ಚಿತ್ರ ಅಂತಲೇ ನಿರ್ಮಾಣ ಮಾಡಿದ್ದು. ಅದೇ ತರಹ ಈವರೆಗೂ ಟೀಸರ್ ಹಾಗೂ ಹಾಡುಗಳನ್ನು ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಮಾಡಿಕೊಂಡು ಬಂದಿದ್ದೇವೆ. ಆದ್ರೆ ಟ್ರೈಲರ್ ಇಂದು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದೆ. ನಂತರದ ದಿನಗಳಲ್ಲಿ ಬೇರೆ ಭಾಷೆಗಳ ಟ್ರೈಲರ್ ಅನಾವರಣವಾಗಲಿದೆ. ಚಿತ್ರತಂಡದ ಸಹಕಾರದಿಂದ ಇದು ಒಂದೊಳ್ಳೆ ಚಿತ್ರವಾಗಿ ನಿರ್ಮಾಣವಾಗಿದೆ ಎಂದರು ನಿರ್ದೇಶಕ ಶಶಾಂಕ್.
ಸುದೀಪ್ ಅವರಿಗೆ ಥ್ಯಾಂಕ್ಸ್ ಹೇಳಿದ ಡಾರ್ಲಿಂಗ್ ಕೃಷ್ಣ, ಕೌಸಲ್ಯ ಸುಪ್ರಜಾ ರಾಮ ಬಳಿಕ ಶಶಾಂಕ್ ಅವ್ರು ನನಗೆ ನಾಲ್ಕೈದು ಕಥೆಗಳನ್ನ ಹೇಳಿದರು. ಈ ಕಥೆ ಬಹಳ ಇಷ್ಟವಾಯಿತು. ಈಗಾಗಲೇ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರೋ ಹಾಡುಗಳು ಹಾಗೂ ಚಿತ್ರದ ಟೀಸರ್ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಟ್ರೈಲರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಚಿತ್ರದ ನನ್ನ ಲುಕ್ ಕೂಡ ಅಭಿಮಾನಿಗಳಿಗೆ ಇಷ್ಟವಾಗಿದೆ ಎಂದರು.
ಕ್ರಿಕೆಟ್ ಕುರಿತಾದ ನಮ್ಮ ಬ್ರ್ಯಾಟ್ ಚಿತ್ರದ ಟ್ರೈಲರ್ ಒಳ್ಳೆಯ ನಟ ಹಾಗೂ ಒಳ್ಳೆಯ ಕ್ರಿಕೆಟರ್ ಆದ ಸುದೀಪ್ ಅವರಿಂದ ಬಿಡುಗಡೆಯಾಗಿದ್ದು ಬಹಳ ಸಂತೋಷವಾಗಿದೆ. ನಮ್ಮ ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ ಅವರು ಸಹ ಒಳ್ಳೆಯ ಕ್ರಿಕೆಟ್ ಆಟಗಾರರು. ಇನ್ನೂ, ಈ ಚಿತ್ರವನ್ನು ಶಶಾಂಕ್ ಅವರು ಬಹಳ ಚೆನ್ನಾಗಿ ನಿರ್ದೇಶಿಸಿದ್ದಾರೆ. ಅದಕ್ಕೆ ಸಂಪೂರ್ಣ ಚಿತ್ರತಂಡ ಸಾಥ್ ನೀಡಿದೆ. ಅಕ್ಟೋಬರ್ 31 ರಂದು ಬಿಡುಗಡೆಯಾಗಲಿರುವ ನಮ್ಮ ಚಿತ್ರವನ್ನು ಎಲ್ಲರೂ ಚಿತ್ರಮಂದಿರಗಳಲ್ಲೇ ನೋಡುವ ಮೂಲಕ ಪ್ರೋತ್ಸಾಹ ನೀಡಿ ಅಂದ್ರು ನಿರ್ಮಾಪಕ ಮಂಜುನಾಥ್ ಕಂದಕೂರ್.
ನಾಯಕಿ ಮನಿಶಾ ಕಂದಕೂರ್ ಸಹ ಚಿತ್ರ ಹಾಗೂ ತಮ್ಮ ಪಾತ್ರದ ಕುರಿತು ಮಾತನಾಡಿದರು. ಚಿತ್ರದಲ್ಲಿ ನಟಿಸಿರುವ ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು, ಆನಂದ್ ಆಡಿಯೋ ಆನಂದ್, ಗಾಯಕ ಬಾಳು ಬೆಳಗುಂದಿ, ಗಾಯಕಿ ಲಹರಿ, ನಿರ್ಮಾಪಕರ ಸಹೋದರ ಬದರಿನಾಥ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ ಕಿಚ್ಚ ಸುದೀಪ್ ಅವರು ಕೆಡಿ ಸಿನಿಮಾದ ಬಗ್ಗೆಯೂ ಮಾತನಾಡಿದ್ರು. ನಮ್ಮ ಪ್ರೇಮ್ ಜೊತೆ ಅರ್ಜುನ್ ಜನ್ಯ ಬ್ಯುಸಿ. ಹಾಗಾಗಿ ಬಂದಿಲ್ಲ ಅಂತ ಕಾಲೆಳೆದರು. ಅಲ್ಲದೆ, ಶಶಾಂಕ್ ಅವರ ನಿರ್ದೇಶನಾ ಕೌಶಲ್ಯ ಹಾಗೂ ಅವರಲ್ಲಿರೋ ಕಥೆಗಾರನ ಬಗ್ಗೆ ಮೆಚ್ಚುಗೆಯ ಮಾತಾಡಿದ್ರು ಕಿಚ್ಚ. ಎಲ್ಲಾ ಹೀರೋಗಳನ್ನ ತಲೆಯಿಂದ ಸೈಡ್‌ಗೆಎ ಇಟ್ಟು ಅವರಿಗಾಗಿ ಅವರೇ ಕಥೆ ಬರೆದರೆ ನನ್ನ ನಿರೀಕ್ಷೆಯ ಸಿನಿಮಾ ಹೊರಹೊಮ್ಮಲಿದೆ ಅನ್ನೋದನ್ನ ಬಹಿರಂಗವಾಗಿ ಹೇಳಿದರು.
ಇದಲ್ಲದೆ, ಪ್ರೆಶರ್ ಹ್ಯಾಂಡಲ್ ಮಾಡೋದ್ರ ಬಗ್ಗೆ ಹಾಗೂ ನಮ್ಮ ಮನೆಯ ಸುತ್ತಮುತ್ತ ಒಳ್ಳೆಯ ಲೊಕೇಷನ್ಸ್ ಇದೆ. ದಯವಿಟ್ಟು ಆ ಕಡೆಯೂ ಕಾರ್ಯಕ್ರಮಗಳನ್ನ ಮಾಡಿ. ಪ್ರತೀ ಸಲ ಇಷ್ಟು ದೂರ ಕರೆಸೋದು ಎಷ್ಟು ಸರಿ ಅಂತ ಸಣ್ಣ ಕಿವಿಮಾತು ಕೂಡ ಹೇಳಿದ್ರು ಕಿಚ್ಚ.
ಗಮನ ಸೆಳೆದ ವಿಷಯ ಅಂದ್ರೆ, ತನಗಾಗಿ ನೀಡಿದ್ದ ಹೂಗುಚ್ಚವನ್ನು ನಾಯಕನಟಿಗೆ ನೀಡಿ, ಚಿತ್ರರಂಗಕ್ಕೆ ವೆಲ್ಕಮ್ ಮಾಡಿದ್ರು ಬಾದ್‌ಷಾ ಸುದೀಪ್. ಇದು ನಿಜಕ್ಕೂ ಖುಷಿಯ ವಿಚಾರ ಹಾಗೂ ಕಿಚ್ಚನ ದೊಡ್ಡತನವನ್ನು ಎತ್ತಿ ತೋರಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಸ್ಯಾಂಡಲ್‌ವುಡ್ ಬಚ್ಚನ್ ಕಿಚ್ಚನಿಗೆ ಶಶಾಂಕ್ ಮತ್ತೆ ಯಾವಾಗ ಆ್ಯಕ್ಷನ್ ಕಟ್ ಹೇಳ್ತಾರೆ ಅಂತ ಚಿತ್ರಪ್ರೇಮಿಗಳು ಕಾತರರಾಗಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್