ನವದೆಹಲಿ: ಐಪಿಎಲ್ 2026ರ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಭಾರಿ ಮೊತ್ತಕ್ಕೆ ಖರೀದಿಸಿದ್ದ ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧಿಕೃತವಾಗಿ ಸೂಚಿಸಿದೆ.
ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಉಂಟಾದ ರಾಜಕೀಯ ಬದಲಾವಣೆ ಮತ್ತು ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಗಳ ಹಿನ್ನೆಲೆಯಲ್ಲಿ ಭಾರತೀಯರಲ್ಲಿ ಬಾಂಗ್ಲಾ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಇಂತಹ ಸೂಕ್ಷ್ಮ ಸಮಯದಲ್ಲಿ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡವು, ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಪೈಪೋಟಿ ನಡೆಸಿ ಮುಸ್ತಾಫಿಜುರ್ ಅವರನ್ನು 9.2 ಕೋಟಿ ರೂ.ಗೆ ಖರೀದಿಸಿತ್ತು. ಈ ನಿರ್ಧಾರವು ಸಾರ್ವಜನಿಕವಾಗಿ ಮತ್ತು ರಾಜಕೀಯವಾಗಿ ಭಾರಿ ಟೀಕೆಗೆ ಗುರಿಯಾಗಿತ್ತು.
ಬಿಸಿಸಿಐ ಮಧ್ಯಪ್ರವೇಶ ಮತ್ತು ನಿರ್ಧಾರ:
ದೇಶಾದ್ಯಂತ ಕೇಳಿಬಂದ ಪ್ರತಿಭಟನೆ ಮತ್ತು ರಾಜಕೀಯ ಒತ್ತಡಕ್ಕೆ ಮಣಿದ ಬಿಸಿಸಿಐ ಈಗ ಮಧ್ಯಪ್ರವೇಶಿಸಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಬಗ್ಗೆ ಮಾತನಾಡಿ, ಸಾರ್ವಜನಿಕರ ಭಾವನೆ ಮತ್ತು ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಸ್ತಾಫಿಜುರ್ ಅವರನ್ನು ಕೈಬಿಡುವಂತೆ ಕೆಕೆಆರ್ ತಂಡಕ್ಕೆ ವಿನಂತಿಸಲಾಗಿದೆ. ಒಂದು ವೇಳೆ ಕೆಕೆಆರ್ ಅವರ ಬದಲಿಗೆ ಬೇರೆ ವಿದೇಶಿ ಆಟಗಾರನನ್ನು ಬಯಸಿದರೆ, ಅದಕ್ಕೆ ಬಿಸಿಸಿಐ ಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದ್ದಾರೆ.
ಶಾರುಖ್ ಖಾನ್ ವಿರುದ್ಧ ರಾಜಕೀಯ ವಾಗ್ದಾಳಿ:
ಈ ವಿವಾದ ಕೇವಲ ಕ್ರಿಕೆಟ್‌ಗೆ ಸೀಮಿತವಾಗದೆ ರಾಜಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿ ನಾಯಕ ಕೌಸ್ತವ್ ಬಾಗ್ಚಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಶಾರುಖ್ ಖಾನ್ ವಿರುದ್ಧ ಕಿಡಿಕಾರಿದ್ದಾರೆ. ಕೆಲವು ನಾಯಕರು ಶಾರುಖ್ ಅವರನ್ನು ದೇಶದ್ರೋಹಿ ಎಂದು ಕರೆದರೆ, ಶಿವಸೇನೆ ಕೂಡ ಬಾಂಗ್ಲಾ ಆಟಗಾರರ ಸೇರ್ಪಡೆಯನ್ನು ತೀವ್ರವಾಗಿ ವಿರೋಧಿಸಿದೆ. ಹಿಂದೂಗಳ ರಕ್ತ ಹರಿಯುತ್ತಿರುವಾಗ ಬಾಂಗ್ಲಾ ಆಟಗಾರರಿಗೆ ಭಾರತದಲ್ಲಿ ಹಣ ಗಳಿಸಲು ಅವಕಾಶ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ಕೆಕೆಆರ್ ತಂಡವಾಗಲಿ ಅಥವಾ ನಟ ಶಾರುಖ್ ಖಾನ್ ಆಗಲಿ ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಬಿಸಿಸಿಐ ಸೂಚನೆಯನ್ನು ಪಾಲಿಸುವುದು ಅನಿವಾರ್ಯವಾಗಿದ್ದು, ಮುಸ್ತಾಫಿಜುರ್ ಬದಲಿಗೆ ಯಾವ ಆಟಗಾರ ತಂಡ ಸೇರಲಿದ್ದಾರೆ ಎಂಬ ಕುತೂಹಲ ಮೂಡಿದೆ.
