ಮುಂಬೈ: ಬಾಲಿವುಡ್‌ನ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ಗಾಯಕ ಸಚಿನ್ ಸಾಂಘ್ವಿ ಅವರನ್ನು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಬಂಧಿಸಲಾಗಿದೆ. ಸಚಿನ್ ಅವರ ಮೇಲೆ 20 ವರ್ಷದ ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾರೆ.
ಮದುವೆಯ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ನಡೆಸಿ, ನಂತರ ಗರ್ಭಪಾತಕ್ಕೆ ಒತ್ತಾಯಿಸಿದ್ದಾನೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಮುಂಬೈನ ವಿಲೇ ಪಾರ್ಲೆ ಪೊಲೀಸ್ ಠಾಣೆಯಲ್ಲಿ ಮೊದಲು ದೂರು ದಾಖಲಾಗಿದ್ದು, ಪ್ರಕರಣ ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರೆಯ ಹೇಳಿಕೆಯ ಪ್ರಕಾರ, 2024ರ ಫೆಬ್ರವರಿಯಲ್ಲಿ ಇನ್‌ಸ್ಟಾಗ್ರಾಂ ಮೂಲಕ ಸಾಂಘ್ವಿ ಅವರೊಂದಿಗೆ ಸಂಪರ್ಕ ಆರಂಭವಾಯಿತು. ಸಂಗೀತ ಆಲ್ಬಮ್‌ನಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿದ ಸಾಂಘ್ವಿ, ಯುವತಿಯೊಂದಿಗೆ ಫೋನ್ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದಾನೆ. ನಂತರ ಸ್ಟುಡಿಯೋಗೆ ಬರಲು ಆಹ್ವಾನಿಸಿ, ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದ್ದಾನೆಂದು ಯುವತಿ ಹೇಳಿಕೊಂಡಿದ್ದಾಳೆ.
ಸಾಂಘ್ವಿ ಹಲವು ಬಾರಿ ಲೈಂಗಿಕ ಸಂಬಂಧಕ್ಕಾಗಿ ಒತ್ತಾಯಿಸಿ, ಮದುವೆಯ ಭರವಸೆಯಿಂದ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾನೆ. ತದನಂತರ ಗರ್ಭಪಾತ ಮಾಡಲು ಒತ್ತಾಯಿಸಿದ ಆರೋಪವೂ ಹೊರಬಿದ್ದಿದೆ. ತನಿಖೆಯ ನಂತರ ಅಕ್ಟೋಬರ್ 23 ರಂದು ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಚಿನ್ ಸಾಂಘ್ವಿ ಬಾಲಿವುಡ್‌ನ ಅತ್ಯಂತ ಯಶಸ್ವಿ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಸಂಗೀತ ಸಹಭಾಗಿ ಜಿಗರ್ ಜೊತೆಗೆ ಅವರು 84 ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ‘ಪರಮ್ ಸುಂದರಿ’, ‘ಬೇಡಿ’, ‘ಸ್ತ್ರೀ 2’, ‘ಚಂಡೀಗಢ ಕರೇ ಆಶಿಕಿ’ ಮುಂತಾದ ಹಿಟ್ ಹಾಡುಗಳ ಮೂಲಕ ಜನಪ್ರಿಯರಾಗಿದ್ದಾರೆ.
ಆಯುಷ್ಮಾನ್ ಖುರಾನಾ, ರಶ್ಮಿಕಾ ಮಂದಣ್ಣ, ಸಿದ್ಧಾರ್ಥ್ ಮಲ್ಹೋತ್ರಾ, ಜಾನ್ವಿ ಕಪೂರ್ ಮುಂತಾದ ಹಲವಾರು ತಾರೆಯರ ಚಿತ್ರಗಳಿಗೆ ಸಂಗೀತ ನೀಡಿದ ಸಾಂಘ್ವಿ, ಕಳೆದ ಕೆಲವು ವರ್ಷಗಳಿಂದ ಸ್ಪಾಟಿಫೈ ಸೇರಿದಂತೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಜನಪ್ರಿಯರಾಗಿದ್ದರು.
ಸಚಿನ್ ಸಾಂಘ್ವಿ ಅವರ ಪರ ವಕೀಲರಾದ ಆದಿತ್ಯ ಮಿಥ ಅವರು ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. “ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಆರೋಪಗಳು ಆಧಾರರಹಿತ ಮತ್ತು ಕಾನೂನುಬಾಹಿರ. ಬಂಧನ ಅನಧಿಕೃತವಾಗಿದ್ದು, ಅದಕ್ಕಾಗಿ ತಕ್ಷಣವೇ ಜಾಮೀನು ದೊರಕಿದೆ,” ಎಂದು ಅವರು ಹೇಳಿದ್ದಾರೆ. “ನಮ್ಮ ಕಕ್ಷಿದಾರರು ಎಲ್ಲ ಆರೋಪಗಳನ್ನು ಕಾನೂನಾತ್ಮಕವಾಗಿ ಖಂಡಿಸಲು ಸಿದ್ಧರಾಗಿದ್ದಾರೆ,” ಎಂದು ವಕೀಲರು ಮಾಧ್ಯಮಗಳಿಗೆ ತಿಳಿಸಿದರು.
