ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಭಿನ್ನ ಕಥಾಹಂದರದ ಸಿನಿಮಾಗಳಿಗೆ ಸದಾ ಒಂದು ವಿಶೇಷ ಸ್ಥಾನವಿದೆ. ಈ ನಿಟ್ಟಿನಲ್ಲಿ, ಮಹಿರಾ ಖ್ಯಾತಿಯ ನಟ-ನಿರ್ದೇಶಕ ಮಹೇಶ್ ಗೌಡ ಅವರ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರವು ರಾಜ್ಯಾದ್ಯಂತ ಅಕ್ಟೋಬರ್ 24ರಂದು ಬಿಡುಗಡೆಯಾಗಲಿದೆ. ಈ ಚಿತ್ರವು ವಿಟಿಲಿಗೋ (ತೊನ್ನು) ಎಂಬ ಚರ್ಮರೋಗವನ್ನು ಕೇಂದ್ರವಾಗಿಟ್ಟುಕೊಂಡು, ಸಾಮಾಜಿಕ ಸಂದೇಶದೊಂದಿಗೆ ಮನರಂಜನಾತ್ಮಕವಾಗಿ ಕಟ್ಟಿಕೊಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರವು ವಿಟಿಲಿಗೋ ರೋಗದಿಂದ ಬಳಲುವ ಒಬ್ಬ ವ್ಯಕ್ತಿಯ ಜೀವನದ ಸವಾಲುಗಳು ಮತ್ತು ಮನೋವ್ಯಾಕುಲತೆಯನ್ನು ಚಿತ್ರಿಸುತ್ತದೆ. ಈ ರೋಗವನ್ನು ಕೇಂದ್ರವಾಗಿಟ್ಟುಕೊಂಡು ಕನ್ನಡದಲ್ಲಿ ತಯಾರಾದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಈ ಸಿನಿಮಾ ಪಾತ್ರವಾಗಿದೆ. ವಿಟಿಲಿಗೋವನ್ನು ಸಮಾಜದಲ್ಲಿ ತಪ್ಪಾಗಿ ಅರ್ಥೈಸಿಕೊಂಡು, ಚಿತ್ರವಿಚಿತ್ರವಾದ ನಂಬಿಕೆಗಳಿಂದ ಆವರಿಸಿಕೊಂಡಿರುವ ಸಂದರ್ಭಗಳನ್ನು ಈ ಚಿತ್ರ ತೋರಿಸುವ ಪ್ರಯತ್ನ ಮಾಡಿದೆ. ಮಹೇಶ್ ಗೌಡ ಅವರೇ ಈ ಚಿತ್ರದ ನಾಯಕನಾಗಿ ನಟಿಸಿದ್ದು, ಸ್ವತಃ ವಿಟಿಲಿಗೋ ಸಮಸ್ಯೆಯನ್ನು ಎದುರಿಸುತ್ತಿರುವ ಅವರು ಈ ಕಥೆಗೆ ವೈಯಕ್ತಿಕ ಒಡನಾಟವನ್ನು ತಂದಿದ್ದಾರೆ.
