ಟಾಲಿವುಡ್ ನಟ ಮತ್ತು ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಶಿವಾಜಿ ಅವರ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮುಂಬರುವ ತೆಲುಗು ಚಿತ್ರ ‘ಧಂದೋರಾ’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಾಜಿ, ನಟಿಯರಿಗೆ ಉಡುಪಿನ ಬಗ್ಗೆ ಸಲಹೆ ನೀಡುತ್ತಾ ‘ಮೈತುಂಬಾ ಸೀರೆ ಉಟ್ರೇನೆ ನಿಮ್ಮ ಅಂದ ಚಂದ ಕಾಣುತ್ತದೆ, ಅರ್ಧಂಬರ್ಧ ಬಟ್ಟೆ ಹಾಕೋದ್ರಲ್ಲಿ ಅಂದ ಇಲ್ಲ’ ಎಂದಿದ್ದಾರೆ. ಇದಕ್ಕೆ ವೇದಿಕೆಯಲ್ಲಿ ಚಪ್ಪಾಳೆಗಳಿಕೆಯೂ ಸಿಕ್ಕಿತ್ತು. ಆದರೆ, ಈ ಹೇಳಿಕೆಗೆ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಶಿವಾಜಿ ಮೈಕ್ ಹಿಡಿದು ಮಾತನಾಡುತ್ತಾ, “ನಟಿಯರಲ್ಲಿ ವಿನಂತಿಸಿಕೊಳ್ಳುತ್ತೇನೆ, ದಯವಿಟ್ಟು ಮೈತುಂಬಾ ಬಟ್ಟೆ ಧರಿಸಿ. ಸೀರೆ ಅಥವಾ ದೇಹವನ್ನು ಪೂರ್ತಿ ಮುಚ್ಚುವ ಉಡುಪುಗಳನ್ನು ಧರಿಸಿ. ಸೌಂದರ್ಯ ಸೀರೆಯಲ್ಲಿದೆ, ದೈಹಿಕ ಅಂಗಾಂಗಗಳನ್ನು ಪ್ರದರ್ಶಿಸುವುದರಲ್ಲಿ ಅಲ್ಲ. ಅಂಗಾಂಗಗಳು ಕಾಣುವಂತಹ ಬಟ್ಟೆ ಧರಿಸಿದರೆ ಅಂದ ಕಾಣೋದಿಲ್ಲ” ಎಂದಿದ್ದಾರೆ.
ಇದಕ್ಕೂ ಮೀರಿ ಆತ ಮುಂದುವರಿದು, “ನಿಮ್ಮ ಅಂಗಾಂಗ (ಸಾಮಾನು ಎಂದು ಬಳಸಿದ್ದಾರೆ) ಕಾಣುವ ಬಟ್ಟೆ ಧರಿಸಬೇಡಿ. ಹುಡುಗರು ಮೇಲ್ನೋಟಕ್ಕೆ ಚೆನ್ನಾಗಿದೆ ಎಂದು ನಗಬಹುದು, ನಿಮ್ಮ ಸ್ವಾತಂತ್ರ್ಯ ಎಂದು ಸುಮ್ಮನಿರಬಹುದು. ಆದರೆ ಮನಸ್ಸಿನೊಳಗೆ ದರಿದ್ರ ಮುಂ*ಡೆ ಎಂತೆಲ್ಲ ಬೈದುಕೊಳ್ಳುತ್ತಾರೆ. ಮಹಿಳೆಯರು ಪ್ರಕೃತಿಯಂತೆ, ಧರಿತ್ರಿಯಂತೆ. ನಾವು ಗೌರವಿಸುತ್ತೇವೆ. ಮಹಿಳೆ ನನ್ನ ತಾಯಿಯಂತೆ” ಎಂದು ಹೇಳಿದ್ದಾರೆ.
ಹಿರಿಯ ನಟಿಯರಾದ ಸಾವಿತ್ರಿ, ಸೌಂದರ್ಯ ಮತ್ತು ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಅವರನ್ನು ಉದಾಹರಣೆಯಾಗಿ ತೋರಿಸಿದ ಶಿವಾಜಿ, “ಗ್ಲಾಮರ್ ಕೈ-ತೋಳಿನ ವರೆಗೆ ಇರಲಿ, ಕತ್ತಿನಿಂದ ಕೆಳಕ್ಕೆ ಮೀರಬಾರದು” ಎಂದಿದ್ದಾರೆ.
ಈ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯಿಸಿದ ಗಾಯಕಿ ಚಿನ್ಮಯಿ ಶ್ರೀಪಾದ್ ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಶಿವಾಜಿ ಅವರು ‘ದರಿದ್ರ ಮುಂ*ಡೆ’ ಮತ್ತು ‘ಸಾಮಾನು’ ಎಂಬ ನಿಂದನೀಯ ಪದಗಳನ್ನು ಬಳಸಿರುವುದು ದುರದೃಷ್ಟಕರ. ಬೃಹತ್ ವೇದಿಕೆಯಲ್ಲಿ ಇಂತಹ ಅವಾಚ್ಯ ಶಬ್ದಗಳು ಶಿವಾಜಿ ತಾವೇ ಜೀನ್ಸ್ ಮತ್ತು ಹೂಡಿ ಧರಿಸುತ್ತಾರೆ. ನಿಜವಾಗಿ ಭಾರತೀಯ ಸಂಸ್ಕೃತಿ ಪಾಲಿಸುವುದಾದರೆ ಧೋತಿ ಧರಿಸಲಿ, ಬೊಟ್ಟು ಇಡಲಿ, ವಿವಾಹಿತರಾದರೆ ಕಾಲುಂಗುರ ಹಾಕಲಿ. ಮಹಿಳೆಯರನ್ನು ಇಲ್ಲಿ ನಡೆಸಿಕೊಳ್ಳುವ ರೀತಿ ಅಸಹನೀಯ” ಎಂದು ಚಿನ್ಮಯಿ ಕಿಡಿಕಾರಿದ್ದಾರೆ.
ಶಿವಾಜಿ ಅವರ ಈ ಹೇಳಿಕೆ ಮಹಿಳಾ ಸ್ವಾತಂತ್ರ್ಯ, ಉಡುಪು ಆಯ್ಕೆ ಮತ್ತು ಪುರುಷ ಪ್ರಧಾನತೆಯ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಟ್ರೆಂಡಿಂಗ್ ಆಗುತ್ತಿದ್ದು, ಕೆಲವರು ಶಿವಾಜಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದರೆ, ಹೆಚ್ಚಿನವರು ಖಂಡಿಸುತ್ತಿದ್ದಾರೆ.
