ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿರುವ ನಿರೂಪಕಿ ಜಾಹ್ನವಿ, ಕಾರ್ಯಕ್ರಮದ ವೇದಿಕೆಯಲ್ಲಿ ತಮ್ಮ ವೈವಾಹಿಕ ಜೀವನದ ಕುರಿತು ಮಾಡಿರುವ ಆರೋಪಗಳಿಗೆ ಮಾಜಿ ಪತಿ ಕಾರ್ತಿಕ್ ಕೆಂಡಾಮಂಡಲರಾಗಿದ್ದಾರೆ. ಜಾಹ್ನವಿ ತಮ್ಮ ಮಾಜಿ ಪತಿಗೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿ ವಿಚ್ಛೇದನಕ್ಕೆ ಕಾರಣವಾಯಿತು ಎಂದು ಹೇಳಿಕೊಂಡಿದ್ದಾರೆ. ಆದರೆ, ಕಾರ್ತಿಕ್ ಇದಕ್ಕೆ ಪ್ರತಿಕ್ರಿಯಿಸಿದ್ದು, ಜಾಹ್ನವಿ ಸಿಂಪಥಿ ಗಿಟ್ಟಿಸಲು ಈ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಖಾರವಾಗಿ ಉತ್ತರಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಕಾರ್ತಿಕ್, “ಜಾಹ್ನವಿ ನನ್ನ ತೇಜೋವಧೆ ಮಾಡುವುದನ್ನು ಸಹಿಸಲಾರೆ. ಮದುವೆಯ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಚಿತ್ರದುರ್ಗದಲ್ಲಿ ನಮ್ಮ ಉದ್ಯಮ ಇತ್ತು, ಜೊತೆಗೆ ಬೆಂಗಳೂರಿನಲ್ಲಿ ನಾನು ಐಟಿ ಕೆಲಸದಲ್ಲಿದ್ದೆ. ಆದರೆ, ಜಾಹ್ನವಿ ಬೆಂಗಳೂರಿಗೆ ಸ್ಥಳಾಂತರಗೊಳ್ಳುವಂತೆ ಪಟ್ಟುಹಿಡಿದರು. ನನ್ನ ತಾಯಿಯೊಂದಿಗೆ ಹೊಂದಾಣಿಕೆ ಆಗದ ಕಾರಣ, ಅವರು ಬೇರೆ ಮನೆ ಮಾಡಿಸಿದರು. ಬಳಿಕ ಸ್ವಂತ ಅಪಾರ್ಟ್‌ಮೆಂಟ್ ಬೇಕೆಂದು ಒತ್ತಾಯಿಸಿ, ಬಾಡಿಗೆಗೆ ಫ್ಲ್ಯಾಟ್ ಪಡೆದೆ,” ಎಂದು ವಿವರಿಸಿದ್ದಾರೆ.
ಕಾರ್ತಿಕ್ ಮುಂದುವರಿಯುತ್ತಾ, “ನನ್ನ ಕೆಲಸ ಹೋದಾಗ, ಊರಿನ ಉದ್ಯಮವೂ ಇಕ್ಕಟ್ಟಿಗೆ ಸಿಲುಕಿತ್ತು. ಆಗ ಜಾಹ್ನವಿಯ ವರ್ತನೆ ಬದಲಾಯಿತು. ಅವರು ಉದ್ಯೋಗಕ್ಕೆ ಹೋಗಿ, ಕೆಲ ಕಾಲ ಮನೆಯ ಇಎಂಐ ಕಟ್ಟಿದ್ದು ನಿಜ. ಆದರೆ, 60 ಸಾವಿರ ಸಂಬಳದಿಂದ 1.50 ಕೋಟಿ ಮೌಲ್ಯದ ಫ್ಲ್ಯಾಟ್ ಖರೀದಿಸಿದ್ದಾರೆ ಎಂಬುದು ಸುಳ್ಳು. ಇಡೀ ಸಾಲವನ್ನು ಅವರೇ ತೀರಿಸಿದ್ದಾರೆ ಎಂದು ಹೇಳುವುದು ಸತ್ಯಕ್ಕೆ ದೂರವಾದ ಮಾತು,” ಎಂದು ಆರೋಪಿಸಿದ್ದಾರೆ.
ಜಾಹ್ನವಿ ವಿರುದ್ಧ ಗಂಭೀರ ಆರೋಪ ಮಾಡಿರುವ ಕಾರ್ತಿಕ್, “ನಾನು ಜೊತೆಗಿದ್ದಾಗಲೂ ಜಾಹ್ನವಿ ಬೇರೊಬ್ಬ ವ್ಯಕ್ತಿಯ ಜೊತೆಗೆ ತೀರಾ ಸಲುಗೆಯಿಂದ ಇದ್ದರು. ಖಾಸಗಿ ಫೋಟೋಗಳನ್ನು ಹಂಚಿಕೊಂಡಿದ್ದನ್ನು ಕಂಡಾಗ ಸಿಟ್ಟು ಬಂದು, ಕುಡಿದ ಸ್ಥಿತಿಯಲ್ಲಿ ಹಲ್ಲೆ ಮಾಡಿರುವುದು ನಿಜ. ಆದರೆ, ಇದಕ್ಕೆ ಕಾರಣವೇನೆಂದು ಯೋಚಿಸಬೇಕು,” ಎಂದು ಕಾರ್ತಿಕ್ ಸಮರ್ಥಿಸಿಕೊಂಡಿದ್ದಾರೆ.
ಜಾಹ್ನವಿಯ ಆರೋಪಗಳಿಂದ ತಮ್ಮ ಕುಟುಂಬಕ್ಕೆ ತೊಂದರೆಯಾಗುತ್ತಿದೆ ಎಂದು ಕಾರ್ತಿಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನನ್ನ ತಂದೆ-ತಾಯಿ ಮೊಮ್ಮಗನನ್ನು ಭೇಟಿಯಾಗಲು ಬಂದಾಗ ಜಾಹ್ನವಿ ಕನಿಷ್ಠ ಸೌಜನ್ಯವನ್ನೂ ತೋರಿಸಲಿಲ್ಲ. ವಿಚ್ಛೇದನವಾಗಿ ವರ್ಷಗಳೇ ಕಳೆದರೂ, ರಿಯಾಲಿಟಿ ಶೋಗಳಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನ್ಯಾಯಾಲಯದ ಆದೇಶದಂತೆ ಮಗನ ಶಿಕ್ಷಣಕ್ಕಾಗಿ ಹಣ ಕೊಡುತ್ತಿದ್ದೇನೆ. ಆದರೆ, ಜಾಹ್ನವಿ ಇಂತಹ ಆರೋಪಗಳಿಂದ ನನ್ನ ಕುಟುಂಬಕ್ಕೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ,” ಎಂದು ಕಿಡಿಕಾರಿದ್ದಾರೆ.
ಕಾರ್ತಿಕ್ ತಮ್ಮ ಮದುವೆಗೂ ಮುನ್ನ ಜಾಹ್ನವಿಗೆ ಸಿನಿಮಾ ಕ್ಷೇತ್ರಕ್ಕೆ ಹೋಗದಂತೆ ಕಂಡೀಷನ್ ಹಾಕಿದ್ದಾಗಿ ಹೇಳಿದ್ದಾರೆ. “ನಾವು ಆರ್ಥಿಕವಾಗಿ ಸ್ಥಿರರಾಗಿದ್ದೆವು. ಆದರೆ, ಜಾಹ್ನವಿ ತಮ್ಮ ಪ್ಯಾಶನ್‌ಗಾಗಿ ಧಾರಾವಾಹಿಗಳಲ್ಲಿ ಕೆಲಸ ಮಾಡುವ ಆಸೆ ವ್ಯಕ್ತಪಡಿಸಿದರು. ನಾನು ಸೀರಿಯಲ್‌ಗೆ ಒಪ್ಪದಿದ್ದರೂ, ನ್ಯೂಸ್ ಚಾನಲ್‌ಗೆ ಒಪ್ಪಿಗೆ ನೀಡಿದೆ. ಆದರೆ, ಬೇರೊಬ್ಬ ವ್ಯಕ್ತಿಯ ಜೊತೆಗಿನ ಸಲುಗೆ ಮತ್ತು ಖಾಸಗಿ ಫೋಟೋಗಳ ಹಂಚಿಕೆಯಿಂದ ಸಂಬಂಧ ಮುರಿಯಿತು,” ಎಂದು ವಿವರಿಸಿದ್ದಾರೆ.
ಕಾರ್ತಿಕ್ ಅವರ ಹಾಲಿ ಪತ್ನಿಯೂ ಜಾಹ್ನವಿಯ ಆರೋಪಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. “ಜಾಹ್ನವಿ ಮತ್ತು ಕಾರ್ತಿಕ್ ಅವರ ಮದುವೆ ಮುರಿಯಲು ನಾನು ಕಾರಣವಲ್ಲ. ಜಾಹ್ನವಿ ಸುಳ್ಳು ಹೇಳಿ ಸಿಂಪಥಿ ಗಿಟ್ಟಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ,” ಎಂದು ಆಕ್ಷೇಪಿಸಿದ್ದಾರೆ.