ಬಿಗ್‌ಬಾಸ್ ಕನ್ನಡ ಸೀಸನ್ 12 ಮುಗಿದು ತಿಂಗಳು ಸಮೀಪಿಸುತ್ತಿದ್ದರೂ, ಅದರೊಳಗೆ ಹುಟ್ಟಿದ ವೈಮನಸ್ಸು ಮಾತ್ರ ಇನ್ನೂ ಮುಗಿದಂತೆ ಕಾಣುತ್ತಿಲ್ಲ. ಶೋ ಅಂತ್ಯವಾದ ಬಳಿಕವೂ ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಭುಗಿಲೆದ್ದಿದೆ. ಈ ಬಾರಿ ಮತ್ತೆ ಸುದ್ದಿಯಲ್ಲಿರುವುದು ಅಶ್ವಿನಿ ಗೌಡ ಮತ್ತು ಚೈತ್ರಾ ಕುಂದಾಪುರ ನಡುವಿನ ಹಳೆಯ ಜಗಳ.
ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ವಿಶೇಷ ಅತಿಥಿಗಳಾಗಿ ಮನೆಗೆ ಪ್ರವೇಶಿಸಿದ್ದ ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್, ನಿಜವಾದ ಸ್ಪರ್ಧಿಗಳಂತೆ ಆಟವಾಡಿದ್ದರು. ಅದರಲ್ಲೂ ಚೈತ್ರಾ ಮತ್ತು ಅಶ್ವಿನಿ ಗೌಡ ನಡುವಿನ ಟಾಸ್ಕ್ ವೇಳೆ ನಡೆದ ಜಿದ್ದಾಜಿದ್ದಿ ಅಂದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕ್ಯಾಪ್ಟನ್ಸಿ ಹಾಗೂ ಟಾಸ್ಕ್ ಸಂಬಂಧಿಸಿದ ಕಿತ್ತಾಟದಲ್ಲಿ ಪರಚುವುದು, ಗಿಲ್ಲುವುದು, ಎಂಜಲು ಉಗುಳುವುದು ಸೇರಿದಂತೆ ಗಂಭೀರ ಆರೋಪಗಳು ಕೇಳಿಬಂದಿದ್ದವು.
ಟಾಸ್ಕ್ ವೇಳೆ ಅಶ್ವಿನಿ ಗೌಡ, “ಚೈತ್ರಾ ನನ್ನ ಕೈಗಳಿಗೆ ಪರಚಿ ಚಿವುಟಿದ್ದಾರೆ” ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಚೈತ್ರಾ, ನಾನು ಉದ್ದೇಶಪೂರ್ವಕವಾಗಿ ಏನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಬಳಿಕ ಮನೆಯೊಳಗೆ ಮಾತಿನ ಚರ್ಚೆ ನಡೆದಿದ್ದು, ಚೈತ್ರಾ ಅಶ್ವಿನಿ ಬಳಿ ಕ್ಷಮೆಯಾಚಿಸಿದ್ದರು. ಅಶ್ವಿನಿ ಕೂಡ ಕ್ಷಮಿಸಿರುವುದಾಗಿ ಹೇಳಿ, ಅಂದು ಜಗಳಕ್ಕೆ ತಾತ್ಕಾಲಿಕವಾಗಿ ತೆರೆ ಎಳೆದಿದ್ದರು.
ಆದರೆ ಬಿಗ್‌ಬಾಸ್ ಮುಗಿದ ಬಳಿಕ ಈ ವಿಷಯ ಮತ್ತೆ ಜೀವಂತವಾಗಿದೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಚೈತ್ರಾ ಕುಂದಾಪುರ, ಅಶ್ವಿನಿ ಜೊತೆಗಿನ ಜಗಳದ ಬಗ್ಗೆ ಮತ್ತೆ ಮಾತನಾಡಿದ್ದಾರೆ. “ಆಟದ ವೇಳೆ ನನಗೂ ಗಾಯಗಳಾಗಿವೆ” ಎಂದು ತಮ್ಮ ಕೈಗಳ ಮೇಲೆ ಇರುವ ಗಾಯದ ಗುರುತುಗಳನ್ನು ತೋರಿಸಿದ್ದಾರೆ. ಆಟದ ಕಿತ್ತಾಟದಲ್ಲಿ ಇಬ್ಬರಿಂದಲೂ ತಪ್ಪುಗಳು ಆಗಿವೆ ಎಂಬುದನ್ನು ಒಪ್ಪಿಕೊಂಡ ಅವರು, ಇದನ್ನೆಲ್ಲ ಆಟವಾಗಿಯೇ ನೋಡಿದ್ದೆ ಎಂದು ಹೇಳಿದ್ದಾರೆ.
ಇದರೊಂದಿಗೆ ಚೈತ್ರಾ, ತಮ್ಮ ಬಳಿ ಯಾವುದೇ ಪೈಡ್ ಪಿಆರ್ ಟೀಮ್ ಇರಲಿಲ್ಲ ಎಂಬ ಅಸಮಾಧಾನವನ್ನೂ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಡೆಯುವ ಟ್ರೋಲ್, ಆರೋಪ-ಪ್ರತ್ಯಾರೋಪಗಳ ನಡುವೆ ಪಿಆರ್ ಟೀಮ್ ಇದ್ದವರಿಗೆ ಹೆಚ್ಚು ಬೆಂಬಲ ಸಿಗುತ್ತದೆ ಎಂಬ ಅರ್ಥದಲ್ಲಿ ಚೈತ್ರಾ ಮಾತಾಡಿದ್ದಾರೆ ಎನ್ನಲಾಗಿದೆ. ಇದೇ ವಿಚಾರ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ.
ಅಶ್ವಿನಿ ಗೌಡ ಕೂಡ ಇನ್‌ಸ್ಟಾಗ್ರಾಂನಲ್ಲಿ ತಮ್ಮದೇ ಶೈಲಿಯಲ್ಲಿ ಪೋಸ್ಟ್ ಮಾಡಿದ್ದು, “ನನ್ನ ಶಕ್ತಿ ಶಾಂತಿ, ಸ್ಥಿರತೆ ಮತ್ತು ಘನತೆಯಲ್ಲಿ ಬೇರೂರಿದೆ. ನನಗೆ ನಾಟಕೀಯತೆ ಇಲ್ಲ. ಯಾವುದೇ ಕಾರ್ಡ್‌ಗಳನ್ನು ಬಳಸದೆ ನಾನು ದೃಢವಾಗಿ ಆಟ ಆಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಪೈಡ್ ಪಿಆರ್ ಬಗ್ಗೆ ಟೀಕೆ ಮಾಡಿರುವ ಅಶ್ವಿನಿ, “ಇಲ್ಲಿ ಗೌರವಕ್ಕಿಂತ ಪಿಆರ್‌ಗೆ ಬೆಲೆ ಜಾಸ್ತಿ” ಎಂದು ವ್ಯಂಗ್ಯವಾಡಿದ್ದಾರೆ.
ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ಚೈತ್ರಾ ಕುಂದಾಪುರ, “ನನ್ನ ದೇಹದ ಮೇಲೆ ಉಗುರುಗಳ ಗುರುತುಗಳಿವೆ. ನನಗಿಂತ ಬಲಿಷ್ಠರು ನನ್ನ ಮೇಲೆ ಬಲ ಪ್ರಯೋಗ ಮಾಡಿದ್ದಾರೆ” ಎಂದು ಹೇಳಿಕೊಂಡಿದ್ದಾರೆ. ಜೊತೆಗೆ, ಇದನ್ನೆಲ್ಲ ಹೇಳಲು ನನ್ನ ಬಳಿ ಯಾವುದೇ ಪೈಡ್ ಪಿಆರ್ ಟೀಮ್ ಇಲ್ಲ ಎಂದು ಮತ್ತೆ ಒತ್ತಿಹೇಳಿದ್ದಾರೆ.
ವಿವಾದ ಇಲ್ಲಿಯೇ ಮುಗಿಯಲಿಲ್ಲ. ಅಶ್ವಿನಿ ಗೌಡ ಪೋಸ್ಟ್‌ಗೆ ಜಾಹ್ನವಿ ಕಾಮೆಂಟ್ ಮಾಡಿ ಚೈತ್ರಾ ಕುರಿತು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಚೈತ್ರಾ ಕೂಡ ತಿರುಗೇಟು ನೀಡಿದ್ದು, ಕಾಮೆಂಟ್ ಬಾಕ್ಸ್‌ನಲ್ಲೇ ಜಾಹ್ನವಿ ಮತ್ತು ಚೈತ್ರಾ ನಡುವೆ ವಾಗ್ಧಾಳಿ ನಡೆದಿದೆ. ಈ ಮೂಲಕ ಅಶ್ವಿನಿ–ಚೈತ್ರಾ ಕದನಕ್ಕೆ ಜಾಹ್ನವಿ ಎಂಟ್ರಿ ನೀಡಿದಂತಾಗಿದೆ.
ಇನ್ನೊಂದೆಡೆ, ಚೈತ್ರಾ ಕುಂದಾಪುರ ತಮ್ಮ ಇನ್‌ಸ್ಟಾಗ್ರಾಂನಲ್ಲಿ “ಆಟ ಮುಗಿದ ಮೇಲೆ ಅದನ್ನು ಅಲ್ಲಿಯೇ ಬಿಡುವುದು ಮ್ಯಾಚ್ಯುರಿಟಿ” ಎಂದು ಬರೆದುಕೊಂಡಿದ್ದಾರೆ. ಅಶ್ವಿನಿ ಗೌಡ ಉದ್ದೇಶಪೂರ್ವಕವಾಗಿ ಮಾಡಿದರು ಎಂದು ಹೇಳಲು ಆಗಲ್ಲ, ಅದು ಆಟದ ವೇಳೆ ಆಗಿದೆ ಎಂದು ಹೇಳಿಕೊಂಡರೂ, ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಪ್ರತಿಕ್ರಿಯೆಗಳು ಮತ್ತೆ ಬೆಂಕಿ ಹಚ್ಚಿದಂತಾಗಿದೆ.
