ಹೀರೋ ಆಗಿ ಎಂಟ್ರಿ ಕೊಟ್ಟ ಬಿಗ್‌ಬಾಸ್‌ ಗಿಲ್ಲಿ: ನಾಯಕಿ ಯಾರು?

Web Photo Editor (20)

ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ವಿನ್ನರ್‌ ಹಾಗೂ ತಮ್ಮ ವಿಭಿನ್ನ ವ್ಯಕ್ತಿತ್ವದಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಗಿಲ್ಲಿ ನಟ ಅಂದರೆ ಮಳವಳ್ಳಿ ನಟರಾಜ್ ಅವರಿಗೆ ಇಂದು (ಜೂನ್‌ 21) ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಇದೇ ವಿಶೇಷ ದಿನದಂದು ಅವರ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದ್ದು, ನಾಯಕನಾಗಿ ನಟಿಸುತ್ತಿರುವ ಮೊದಲ ಸಿನಿಮಾದ ಶೀರ್ಷಿಕೆ ಅಧಿಕೃತವಾಗಿ ಅನಾವರಣಗೊಂಡಿದೆ.

ಬಿಗ್‌ಬಾಸ್‌ ಮನೆಯಲ್ಲಿದ್ದಾಗ ಗಿಲ್ಲಿ ನಟ ತಮ್ಮ ಸರಳತೆ, ಹಾಸ್ಯಪ್ರಜ್ಞೆ ಹಾಗೂ ವಿಶಿಷ್ಟ ಮಾತಿನ ಶೈಲಿಯಿಂದ ಜನಮನ ಗೆದ್ದಿದ್ದರು. ಕಾರ್ಯಕ್ರಮದ ಅಂತಿಮ ಹಂತದಲ್ಲಿ ಟಾಪ್‌ ಫೈನಲಿಸ್ಟ್‌ಗಳಿಗೆ ತಮ್ಮ ವ್ಯಕ್ತಿತ್ವವನ್ನು ತಾವೇ ವರ್ಣಿಸುವಂತೆ ನೀಡಲಾಗಿದ್ದ ಟಾಸ್ಕ್‌ನಲ್ಲಿ ಗಿಲ್ಲಿ ನಟ ತಮ್ಮನ್ನು ತಾವು ‘ಪಳಾರ್‌ ಗಿಲ್ಲಿ’ ಎಂದು ಕರೆದುಕೊಂಡಿದ್ದರು. ಆ ಪದವೇ ಅಭಿಮಾನಿಗಳಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು.

ಈಗ ಅದೇ ಹೆಸರನ್ನು ಅವರ ಮೊದಲ ಸಿನಿಮಾಕ್ಕೆ ಇಡಲಾಗಿದ್ದು, ಚಿತ್ರದ ಟೈಟಲ್‌ ‘ಪಳಾರ್‌’ ಎಂದು ಘೋಷಿಸಲಾಗಿದೆ. ಹೀಗಾಗಿ ಬಿಗ್‌ಬಾಸ್‌ ಮೂಲಕ ಜನಪ್ರಿಯಗೊಂಡ ಪದವೇ ಈಗ ಬೆಳ್ಳಿತೆರೆಗೆ ಕಾಲಿಡುತ್ತಿರುವುದು ವಿಶೇಷವೆನಿಸಿದೆ. ಚಿತ್ರದ ಹೆಸರಿಗೂ ಬಿಗ್‌ಬಾಸ್‌ ನೆನಪುಗಳಿಗೂ ನಂಟಿರುವುದು ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ.

ಗಿಲ್ಲಿ ನಟ ಅವರ ಹುಟ್ಟುಹಬ್ಬದ ದಿನವೇ ಬೆಂಗಳೂರಿನ ಬಂಡೆ ಮಹಾಕಾಳಿ ಅಮ್ಮನವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿತು. ಹಿರಿಯ ನಟ ರವಿಚಂದ್ರನ್‌ ಕ್ಲ್ಯಾಪ್‌ ಮಾಡುವ ಮೂಲಕ ‘ಪಳಾರ್‌’ ಚಿತ್ರದ ಶೀರ್ಷಿಕೆಯನ್ನು ಅಧಿಕೃತವಾಗಿ ಅನಾವರಣಗೊಳಿಸಿದರು. ಈ ಮೂಲಕ ಗಿಲ್ಲಿ ನಟ ಅವರ ಸಿನಿ ಪಯಣಕ್ಕೆ ಶುಭ ಹಾರೈಸಿದರು.

‘ಪಳಾರ್‌’ ಚಿತ್ರವನ್ನು ಕೆವಿನ್‌ ಪ್ರೊಡಕ್ಷನ್ಸ್‌ ಸಹಯೋಗದಲ್ಲಿ ರಾಶಿ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ಹರೀಶ್‌ ಮತ್ತು ನವೀನ್‌ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ನಿರ್ದೇಶಕ ಚಂದ್ರ ಮೋಹನ್‌ ಆಕ್ಷನ್‌ ಕಟ್‌ ಹೇಳುತ್ತಿದ್ದು, ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಆನಂದ್‌ ಆಡಿಯೋ ಸಂಸ್ಥೆ ಹಾಗೂ ಖ್ಯಾತ ಗಾಯಕ-ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ಕೂಡ ಚಿತ್ರತಂಡದೊಂದಿಗೆ ಕೈಜೋಡಿಸಿದ್ದಾರೆ.

ಇದೀಗ ಚಿತ್ರದ ನಾಯಕಿ ಯಾರು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿಶೇಷವಾಗಿ ಬಿಗ್‌ಬಾಸ್‌ ಮೂಲಕ ಜನಪ್ರಿಯತೆ ಗಳಿಸಿದ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಜೋಡಿ ಮತ್ತೆ ಒಂದಾಗಲಿದೆಯೇ ಎಂಬ ಕುತೂಹಲವೂ ಹೆಚ್ಚಾಗಿದೆ. ಆದರೆ ಚಿತ್ರತಂಡ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

 ಹುಟ್ಟುಹಬ್ಬದ ಸಂಭ್ರಮದ ನಡುವೆ ಗಿಲ್ಲಿ ನಟ ಅವರ ಮೊದಲ ನಾಯಕನ ಸಿನಿಮಾದ ಘೋಷಣೆ ಅಭಿಮಾನಿಗಳಿಗೆ ಡಬಲ್‌ ಖುಷಿ ನೀಡಿದ್ದು, ‘ಪಳಾರ್‌’ ಚಿತ್ರಕ್ಕಾಗಿ ಸಿನಿಪ್ರಿಯರು ಈಗಿನಿಂದಲೇ ಕಾತರದಿಂದ ಕಾಯುತ್ತಿದ್ದಾರೆ.

Exit mobile version