ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನರ ಗಮನ ಸೆಳೆಯಲು ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಮತ್ತು ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್‌ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಬಸವೇಶ್ವರ ನಗರ ಪೊಲೀಸ್ ಠಾಣೆಯಿಂದ ನೋಟಿಸ್ ಜಾರಿಯಾಗಿದೆ. ರಜತ್ ಬಳಸಿದ ಒರಿಜಿನಲ್ ಮಚ್ಚು ಪತ್ತೆಯಾಗದ ಹಿನ್ನೆಲೆ ಕರೆದಿದ್ದಾರೆ ಎನ್ನಲಾಗಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ರಜತ್ ಮತ್ತು ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ಕೆಲವು ದಿನಗಳ ಹಿಂದೆ ಮಚ್ಚು ಹಾಗೂ ಲಾಂಗ್ ಹಿಡಿದು ರೀಲ್ಸ್ ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಪೊಲೀಸರು ಇಬ್ಬರ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದರು.
ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ಬಳಿಕ, ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳಿಸಲಾಗಿತ್ತು. ನಂತರ ಅವರು ಕೋರ್ಟ್‌ನಿಂದ ಜಾಮೀನಿನ ಮೂಲಕ ಬಿಡುಗಡೆಯಾದರು. ಜಾಮೀನಿನ ಶರತ್ತಿನ ಪ್ರಕಾರ, ಪೊಲೀಸರು ಕೇಳಿದಾಗಲೆಲ್ಲಾ ತನಿಖೆಗೆ ಸಹಕರಿಸಬೇಕೆಂಬ ಉಲ್ಲೇಖವಿತ್ತು.
ಪೊಲೀಸರು ಮತ್ತೆ ರಜತ್‌ಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಬಾರಿ ನಿಜವಾದ ಮಚ್ಚು ಪತ್ತೆಯಾಗದ ಹಿನ್ನೆಲೆ ಮತ್ತೆ ಪ್ರಶ್ನೆಗೊಳಪಡಿಸುತ್ತಿದ್ದಾರೆ. ರಜತ್ ತಮ್ಮ ಹೇಳಿಕೆಯಲ್ಲಿ ರೀಲ್ಸ್‌ನಲ್ಲಿ ಬಳಸಿದ ಮಚ್ಚು ನಕಲಿ ಫೈಬರ್‌ನದ್ದು ಎಂದು ಹೇಳಿದ್ದಾರೆ. ಹಾಗೆಯೇ, ಆ ಫೈಬರ್ ಮಚ್ಚನ್ನು ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ. ರೀಲ್ಸ್‌ಗಾಗಿ ಬಳಸಿದ ಮಚ್ಚು ನಕಲಿ ಎಂಬುದು ಸಾಬೀತುಪಡಿಸಲು ಯಾವುದೇ ದೃಢವಾದ ಸಾಕ್ಷ್ಯ ಇಲ್ಲ. ಆದ್ದರಿಂದ ಅವರು ಸುಳ್ಳು ಹೇಳಿಕೆ ನೀಡಿ ತನಿಖೆಗೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಆರೋಪವಿದೆ.
ಪ್ರಕರಣದ ನಿಖರತೆ ಅನಾವರಣಗೊಳ್ಳಲು ಬಳಸಲಾದ ಅಸಲಿ ಮಚ್ಚು ಪತ್ತೆಹಚ್ಚುವುದು ಅತ್ಯಂತ ಮಹತ್ವದ ಹಂತವಾಗಿದೆ. ಈ ಹಿನ್ನೆಲೆಯಲ್ಲಿ ರಜತ್ ಅನ್ನು ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಇದೇ ಪ್ರಕರಣದಲ್ಲಿ ವಿನಯ್ ಗೌಡನನ್ನು ಕೂಡ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಇಬ್ಬರಿಗೂ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ವಿಚಾರಣೆ ನಡೆದಿದೆ, ಆದರೆ ನಕಲಿ ಮತ್ತು ಅಸಲಿ ಮಚ್ಚಿನ ವಿಚಾರದಲ್ಲಿ ಸ್ಪಷ್ಟತೆ ಬರಬೇಕಿರುವುದರಿಂದ ಪೊಲೀಸರು ಮತ್ತಷ್ಟು ಮಾಹಿತಿ ಕಲೆಹಾಕಲು ಯತ್ನಿಸುತ್ತಿದ್ದಾರೆ.
