ಸಮುದ್ರ ಮಂಥನದ ಅಮೃತಕ್ಕಾಗಿ ದೇವ-ದಾನವರ ನಡುವೆ ನಡೆದ ಮಹಾಯುದ್ಧಕ್ಕೆ ಈಗ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಹೊಸ ಕಾಳಗದ ರಂಗು ಬಂದಿದೆ. ಯೆಸ್, ಧುರಂಧರ್ ಪವರ್‌ಹೌಸ್ ನಟ ಅಕ್ಷಯ್ ಖನ್ನಾ ಅಸುರರ ಗುರು ಶುಕ್ರಾಚಾರ್ಯನಾಗಿ ಅಬ್ಬರಿಸೋಕೆ ಬಂದರೆ, ಅವರ ಧರ್ಮಸಂಕಟದ ಆಕ್ರೋಶಕ್ಕೆ ಎದುರಾಗಿ ನಿಂತಿದ್ದಾಳೆ ನಮ್ಮ ಕನ್ನಡದ ಹೆಮ್ಮೆಯ ನಾರಿ ಭೂಮಿ ಶೆಟ್ಟಿ. ಅಸುರರ ಪರವಾಗಿ ನ್ಯಾಯದ ಪ್ರಶ್ನೆ ಎತ್ತಿದ ಶುಕ್ರಾಚಾರ್ಯ ಹಾಗೂ ಮಣ್ಣಿನ ಮಗಳು ಮಹಾಕಾಳಿಯ ಈ ಭೀಕರ ಸಂಗ್ರಾಮ ಹೇಗಿರಲಿದೆ..? ನೋಡೋಣ ಬನ್ನಿ.
ಕನ್ನಡತಿ v/s ಧುರಂಧರ್ ಸ್ಟಾರ್.. ಮಹಾಕಾಳಿ v/s ಶುಕ್ರಾಚಾರ್ಯ
ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನ ಮತ್ತೊಂದು ಅಸ್ತ್ರ
ಅಸುರರ ಪಡೆಗೆ ಸಿಂಹಸ್ವಪ್ನವಾಗ್ತಾಳಾ ಮಹಾಕಾಳಿ ಭೂಮಿ..?
ಅಸುರರ ಗುರು ಶುಕ್ರಾಚಾರ್ಯನಾಗಿ ಅಕ್ಷಯ್ ಖನ್ನಾ ಅವತಾರ
ಉದ್ದನೆಯ ಬಿಳಿ ಜಟೆ ಕೂದಲು, ಹಣೆಯ ಮೇಲೆ ಭಸ್ಮದ ತಿಲಕ, ಗಂಭೀರ ಕಣ್ಣುಗಳು ಮತ್ತು ಕಿವಿಯಲ್ಲಿ ಅಸುರ ತೇಜಸ್ಸಿನ ಆರ್ಭಟ. ಧುರಂಧರ್ ಸಿನಿಮಾದಲ್ಲಿ ತಮ್ಮ ಅಭಿನಯದ ಮೂಲಕ ಧೂಳೆಬ್ಬಿಸಿದ್ದ ಅಕ್ಷಯ್ ಖನ್ನಾ, ಈಗ ಮಹಾಕಾಳಿ ಸಿನಿಮಾದಲ್ಲಿ ಅಸುರರ ಧರ್ಮಗುರು ಶುಕ್ರಾಚಾರ್ಯನಾಗಿ ಗೂಸ್‌ಬಂಪ್ಸ್ ತರಿಸುವ ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಬಿಡುಗಡೆಯಾಗಿರುವ ಮೂರು ನಿಮಿಷಗಳ ಶುಕ್ರಾಚಾರ್ಯಾಸ್ ವಾರ್ ಕ್ರೈ ಗ್ಲಿಂಪ್ಸ್‌ನಲ್ಲಿ ಅಕ್ಷಯ್ ಖನ್ನಾ ಅವರ ಕಟು ಮಾತುಗಳು ಮತ್ತು ಗಂಭೀರ ಲುಕ್ ಪ್ರೇಕ್ಷಕರನ್ನು ಅಕ್ಷರಶಃ ಮಂತ್ರಮುಗ್ಧಗೊಳಿಸಿದೆ.
ಸಮುದ್ರ ಮಂಥನದಲ್ಲಿ ದೇವತೆಗಳಷ್ಟೇ ಅಸುರರೂ ಕಷ್ಟಪಟ್ಟಿದ್ದರು, ಆದರೆ ಅಮೃತ ಮಾತ್ರ ದೇವತೆಗಳಿಗೇಕೆ..? ಎನ್ನುವ ಶುಕ್ರಾಚಾರ್ಯನ ನ್ಯಾಯದ ಪ್ರಶ್ನೆ ಈ ಗ್ಲಿಂಪ್ಸ್‌ನ ಕಥೆಯ ತೀವ್ರತೆಯನ್ನು ಹೆಚ್ಚಿಸಿದೆ. ಅಸುರರಿಗೆ ಆದ ಅನ್ಯಾಯದ ವಿರುದ್ಧ ಸಿಡಿದೆದ್ದು ದೇವತೆಗಳ ಹಾಗೂ ಮಾನವಕುಲದ ವಿನಾಶಕ್ಕಾಗಿ ಶುಕ್ರಾಚಾರ್ಯ ರಕ್ತಬೀಜನನ್ನು ಕಳುಹಿಸುವ ಭೀಕರ ದೃಶ್ಯ ಸಿನಿಪ್ರಿಯರಲ್ಲಿ ನಡುಕ ಹುಟ್ಟಿಸಿದೆ. ಅಧರ್ಮದ ವಿರುದ್ಧ ಧರ್ಮದ ಯುದ್ಧವಲ್ಲ, ಬದಲಿಗೆ ಅಸುರರ ಆತ್ಮಗೌರವಕ್ಕಾಗಿ ನಡೆಯುವ ಯುದ್ಧದ ಸುಳಿವನ್ನು ಪ್ರಶಾಂತ್ ವರ್ಮಾ ಕೊಟ್ಟಿದ್ದಾರೆ.
ಈ ಬಾಲಿವುಡ್ ಧುರಂಧರ್ ಅಕ್ಷಯ್ ಖನ್ನಾ ಎತ್ತಿದ ಆಕ್ರೋಶದ ಬಿರುಗಾಳಿಗೆ ಎದುರಾಗಿ ನಿಂತಿರೋದು ನಮ್ಮ ಕನ್ನಡತಿ ಭೂಮಿ ಶೆಟ್ಟಿ. ‘ಮಹಾಕಾಳಿ’ಯಾಗಿ ದೈವಿಕ ಹಾಗೂ ರೌದ್ರಾವತಾರದಲ್ಲಿ ಕಂಗೊಳಿಸುತ್ತಿರುವ ಭೂಮಿ ಶೆಟ್ಟಿ, ಶುಕ್ರಾಚಾರ್ಯನ ಅಸುರ ಪಡೆಗೆ ಸಿಂಹಸ್ವಪ್ನವಾಗಲಿದ್ದಾರೆ. ಇದರ ಜೊತೆಗೆ ನಟಿ ಶ್ರೀಯಾ ರೆಡ್ಡಿ ಮಗುವನ್ನು ಮಡಿಲಲ್ಲಿ ಹಿಡಿದು ದೇವಿಯ ದೈವಿಕ ರೂಪದಲ್ಲಿ ಕಾಣಿಸಿಕೊಂಡಿದ್ದು, ಭೂಮಿ ಶೆಟ್ಟಿ ಮತ್ತು ಶ್ರೀಯಾ ರೆಡ್ಡಿ ಕಾಂಬಿನೇಷನ್ ಸಿನಿಮಾದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಹನುಮಾನ್ ಚಿತ್ರದ ಜಾಗತಿಕ ಯಶಸ್ಸಿನ ನಂತರ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನಿಂದ ಹೊರಬರುತ್ತಿರುವ ಈ ಮಹಾಕಾಳಿ ಚಿತ್ರಕ್ಕೆ ಪೂಜಾ ಅಪರ್ಣಾ ಕೊಲ್ಲೂರು ನಿರ್ದೇಶನ ಮಾಡುತ್ತಿದ್ದಾರೆ. ಪ್ರಶಾಂತ್ ವರ್ಮಾ ಕಥೆ-ಚಿತ್ರಕಥೆ ಬರೆದಿದ್ದು, ರಿವಾಜ್ ರಮೇಶ್ ದುಗ್ಗಲ್ ಅತ್ಯಂತ ಅದ್ದೂರಿಯಾಗಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರೋಹಿತ್ ಸರಾಫ್ ಸೇರಿದಂತೆ ದೊಡ್ಡ ತಾರಾಗಣವಿರುವ ಈ ಸಿನಿಮಾ ಪೌರಾಣಿಕ ಕಥೆಗಳಿಗೆ ಹೊಸತೊಂದು ಅಲ್ಟ್ರಾ-ಮಾಡೆರ್ನ್ ದೃಶ್ಯರೂಪ ನೀಡಲು ಹೊರಟಿದೆ.
ಜನವರಿ 8, 2027ರಂದು ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಮಹಾಕಾಳಿ, ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆಯುವ ಮುನ್ಸೂಚನೆ ನೀಡಿದೆ. ಅಸುರರ ನ್ಯಾಯಕ್ಕಾಗಿ ಹೋರಾಡುವ ಶುಕ್ರಾಚಾರ್ಯನಾಗಿ ಅಕ್ಷಯ್ ಖನ್ನಾ ಹಾಗೂ ಜಗತ್ತನ್ನು ಕಾಯುವ ಮಹಾಕಾಳಿಯಾಗಿ ಕನ್ನಡದ ಭೂಮಿ ಶೆಟ್ಟಿ ನಡುವಿನ ಈ ಮಹಾಸಂಗ್ರಾಮವನ್ನು ಬೆಳ್ಳಿತೆರೆಯಲ್ಲಿ ನೋಡಲು ಸಿನಿಪ್ರಿಯರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
